ADVERTISEMENT

ರಣಜಿ ಟ್ರೋಫಿ: ಚೇತರಿಸಿಕೊಂಡ ಮಯಂಕ್; ತಂಡವನ್ನು ಮುನ್ನಡೆಸಲು ಸಜ್ಜು

ಪಿಟಿಐ
Published 6 ಫೆಬ್ರುವರಿ 2024, 13:03 IST
Last Updated 6 ಫೆಬ್ರುವರಿ 2024, 13:03 IST
ಮಯಂಕ್ ಅಗರವಾಲ್
ಮಯಂಕ್ ಅಗರವಾಲ್   

ಬೆಂಗಳೂರು: ವಿಮಾನದಲ್ಲಿ ಅನುಮಾನಾಸ್ಪದ ದ್ರವ ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್ ಚೇತರಿಸಿಕೊಂಡಿದ್ದು, ಚೆನ್ನೈನಲ್ಲಿ ಶುಕ್ರವಾರ ನಡೆಯಲಿರುವ ರಣಜಿ ಟ್ರೋಫಿಯ ಸಿ ಗುಂಪಿನ ತಮಿಳುನಾಡು ವಿರುದ್ಧದ ಮುಂದಿನ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ಕಳೆದ ತಿಂಗಳು ತ್ರಿಪುರಾ ವಿರುದ್ಧದ ಪಂದ್ಯದ ನಂತರ ಸೂರತ್‌ಗೆ ತನ್ನ ತಂಡದ ಜೊತೆ ವಿಮಾನದಲ್ಲಿ ತೆರಳುತ್ತಿದ್ದಾಗ ಮಯಂಕ್ ಪಾನೀಯವೊಂದನ್ನು ಸೇವಿಸಿದ್ದರು. ಬಳಿಕ, ಅವರಿಗೆ ಬಾಯಿ ಮತ್ತು ಗಂಟಲಿನಲ್ಲಿ ಉರಿ ಕಾಣಿಸಿಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಘಟನೆಯಲ್ಲಿ ಯಾವುದೋ ಸಂಚು ನಡೆದಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಮಯಂಕ್ ಈ ಸಂಬಂಧ ಎಫ್‌ಐಆರ್ ಸಹ ದಾಖಲಿಸಿದ್ದರು.

ADVERTISEMENT

ಮಯಂಕ್ ಅಗರವಾಲ್ ಅವರಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದು, ಅವರು ತಂಡಕ್ಕೆ ಮರಳಲು ಹಸಿರು ನಿಶಾನೆ ಸಿಕ್ಕಿದೆ.

ಮಯಂಕ್ ಅನುಪಸ್ಥಿತಿಯಲ್ಲಿ ಭರವಸೆಯ ಬ್ಯಾಟರ್ ನಿಖಿಲ್ ಜೋಶ್ ಅವರು, ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದರು. ಹಿರಿಯ ಬ್ಯಾಟರ್ ಮನೀಶ್ ಪಾಂಡೆ ಅವರ ಅಜೇಯ ಅರ್ಧಶತಕದ ನೆರವಿನಿಂದ ಈ ಪಂದ್ಯದಲ್ಲಿ ಕರ್ನಾಟಕ 1 ವಿಕೆಟ್‌ನಿಂದ ಗೆಲುವು ಸಾಧಿಸಿತ್ತು.

ಸಿ ಗುಂಪಿನಲ್ಲಿ 21 ಅಂಕಗಳ ಮೂಲಕ ತಮಿಳುನಾಡು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕರ್ನಾಟಕವು ಸಹ 21 ಅಂಕ ಹೊಂದಿದೆ. ಆದರೆ, ತಮಿಳುನಾಡಿನ ನೆಟ್ ರನ್ ರೇಟ್(2.06) ಕರ್ನಾಟಕ್ಕಿಂತ ಉತ್ತಮವಾಗಿದೆ.

ಅಗರವಾಲ್ ಆಗಮನ ಕರ್ನಾಟಕದ ಬ್ಯಾಟಿಂಗ್ ಬಲ ಹೆಚ್ಚಿಸಲಿದೆ. ಈವರೆಗಿನ 4 ಪಂದ್ಯಗಳಲ್ಲಿ 44ರ ಸರಾಸರಿಯಲ್ಲಿ ಅವರು ಒಟ್ಟು 310 ರನ್ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.