ಮುಂಬೈ: ಕೋವಿಡ್ ಪಾಸಿಟಿವ್ ಆಗಿರುವ ಹಿನ್ನೆಲೆಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಇಂಗ್ಲೆಂಡ್ ವಿರುದ್ಧದ ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಹೀಗಾಗಿ, ಆರಂಭಿಕ ಆಟಗಾರ ಮಯಂಕ್ ಅಗರ್ವಾಲ್ ಅವರಿಗೆ ಇಂಗ್ಲೆಂಡ್‌ನಲ್ಲಿರುವ ಭಾರತೀಯ ತಂಡ ಸೇರಿಕೊಳ್ಳಲು ಬಿಸಿಸಿಐ ಬುಲಾವ್ ನೀಡಿದೆ.
ಅಭ್ಯಾಸ ಪಂದ್ಯದ ವೇಳೆ ರೋಹಿತ್ ಅವರಿಗೆ ರ್‍ಯಾಪಿಡ್ ಆಂಟಿಜೆನ್ ಪರೀಕ್ಷೆಯಲ್ಲಿ ಕೋವಿಡ್ ತಗುಲಿರುವುದು ದೃಢಪಟ್ಟಿತ್ತು.
‘ಮಯಂಕ್ ಅವರು ಇಂದು ಇಂಗ್ಲೆಂಡ್‌ಗೆ ಪಯಣಿಸುತ್ತಿದ್ದಾರೆ. ಅಗತ್ಯವಿದ್ದರೆ ಟೆಸ್ಟ್ ಪಂದ್ಯದಲ್ಲಿ ಆಡಲಿದ್ದಾರೆ. ಬ್ರಿಟನ್ನಿನ ಕೋವಿಡ್ ಪ್ರೋಟೊಕಾಲ್‌ಗಳ ಪ್ರಕಾರ, ಆರ್‌ಟಿ ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಯಾವುದೇ ಕ್ವಾರಂಟೈನ್ ಅಗತ್ಯವಿಲ್ಲ’ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
31 ವರ್ಷದ ಅಗರ್ವಾಲ್ ಜುಲೈ 1 ರಿಂದ ಪ್ರಾರಂಭವಾಗುವ ಪಂದ್ಯಕ್ಕೆ 15 ಜನರ ತಂಡದಲ್ಲಿ ಅವಕಾಶ ಗಿಟ್ಟಿಸುವಲ್ಲಿ ವಿಫಲರಾಗಿದ್ದರು. ರೋಹಿತ್ ಶರ್ಮಾಗೆ ಕೋವಿಡ್ ದೃಢಪಟ್ಟಿರುವುದರಿಂದ ಅವರಿಗೆ ಅವಕಾಶ ಸಿಕ್ಕಿದೆ.
ಒಂದೊಮ್ಮೆ ರೋಹಿತ್ ಶರ್ಮಾ ತಂಡದಿಂದ ಹೊರಗುಳಿದರೆ ಕಪಿಲ್ ದೇವ್ ಬಳಿಕ 35 ವರ್ಷದ ಬಳಿಕ ಭಾರತ ತಂಡದ ನಾಯಕತ್ವ ವಹಿಸಿಕೊಂಡ ವೇಗದ ಬೌಲರ್ ಆಗಲಿದ್ದಾರೆ.
ಕಳೆದ ವರ್ಷ ಭಾರತ ತಂಡದ ಸದಸ್ಯರಲ್ಲಿ ಕೋವಿಡ್ ಸಮಸ್ಯೆ ಹೆಚ್ಚಾಗಿದ್ದರಿಂದ ಮೊಟಕುಗೊಂಡಿದ್ದ ಟೆಸ್ಟ್ ಸರಣಿಯ ಐದನೇ ಪಂದ್ಯ ಜುಲೈ 1ರಿಂದ ಆರಂಭವಾಗುತ್ತಿದೆ. ಸರಣಿಯಲ್ಲಿ ಭಾರತ ತಂಡ 2–1 ಮುನ್ನಡೆ ಸಾಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.