ಮಂಗಳೂರು: ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಮಯಂಕ್ ಅಗರವಾಲ್ ಇಲ್ಲಿನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಉಡುಪಿ ಜಿಲ್ಲೆ ಕುಂದಾಪುರದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿದರು.
ಪತ್ನಿ ಆಶಿತಾ ಸೂದ್ ಜೊತೆ ಕಟೀಲು ದೇವಸ್ಥಾನಕ್ಕೆ ತೆರಳಿದ ಅವರು ಅಕ್ಕಿ, ಬೆಲ್ಲ ಅರಿಶಿನ ಒಳಗೊಂಡ ಮಡಿಲಕ್ಕಿಯನ್ನು ದೇವಿಗೆ ಸಮರ್ಪಿಸಿದರು. ಆನುವಂಶಿಕ ಅರ್ಚಕರಾದ ಕುಮಾರ್ ಅಸ್ರಣ್ಣ ಅವರು ವಸ್ತ್ರ ಮತ್ತು ಪ್ರಸಾದ ನೀಡಿ ಮಯಂಕ್‌ಗೆ ಗೌರವ ಸಲ್ಲಿಸಿದರು. ಆನುವಂಶಿಕ ಮೊಕ್ತೇಸರ ವಾಸುದೇವ ಅಸ್ರಣ್ಣ, ಟ್ರಸ್ಟಿ ವೆಂಕಟರಮಣ ಅಸ್ರಣ್ಣ ಇದ್ದರು.
ಕಟೀಲಿನಿಂದ ಕೊಲ್ಲೂರಿಗೆ ತೆರಳಿದ ಮಯಂಕ್ ದಂಪತಿ ದಾರಿಮಧ್ಯೆ ಕುಂದಾಪುರದ ಮಾರಣಕಟ್ಟೆಯಲ್ಲಿರುವ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಮಧ್ಯಾಹ್ನ ಕೊಲ್ಲೂರಿಗೆ ತಲುಪಿದ ಅವರು ದರ್ಶನ ಮುಗಿಸಿದ ನಂತರ ಕೆಲಹೊತ್ತು ದೇವಸ್ಥಾನದ ಆವರಣದಲ್ಲಿ ಕುಳಿತುಕೊಂಡಿದ್ದರು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ. ಅಲ್ಲಿಯೂ ದಂಪತಿಯನ್ನು ಗೌರವಿಸಲಾಯಿತು.
ಸಂಜೆ ದಕ್ಷಿಣ ಕನ್ನಡದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೂ ಭೇಟಿ ನೀಡಿದರು.
2022ರ ಮಾರ್ಚ್‌ನಲ್ಲಿ ಶ್ರೀಲಂಕಾ ಎದುರು ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯದ ನಂತರ ಮಯಂಕ್‌ಗೆ ತಂಡದಲ್ಲಿ ಅವಕಾಶ ಸಿಗಲಿಲ್ಲ. ಸಿಡ್ನಿಯಲ್ಲಿ 2020ರಲ್ಲಿ ಆಸ್ಟ್ರೇಲಿಯಾ ಎದುರು ನಡೆದ ಪಂದ್ಯದ ನಂತರ ಏಕದಿನ ಕ್ರಿಕೆಟ್‌ನಲ್ಲೂ ಅವರಿಗೆ ಸ್ಥಾನ ಲಭಿಸಲಿಲ್ಲ. ಈಚೆಗೆ ಮುಕ್ತಾಯಗೊಂಡ ಐಪಿಎಲ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ ಮಯಂಕ್ ಕೇವಲ ನಾಲ್ಕು ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿದ್ದರು. ಗರಿಷ್ಠ 32 ರನ್‌ಗಳೊಂದಿಗೆ ಟೂರ್ನಿಯಲ್ಲಿ ಅವರು ಕಲೆ ಹಾಕಿದ ಒಟ್ಟು ರನ್ 64.
ಈ ಬಾರಿಯ ರಣಜಿ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಿದ್ದ ಅವರು 10 ಇನಿಂಗ್ಸ್‌ಗಳಲ್ಲಿ ತಲಾ 2 ಶಕತ ಮತ್ತು ಅರ್ಧಶತಕಗಳೊಂದಿಗೆ 468 ರನ್ ಕಲೆ ಹಾಕಿದ್ದರು. ಜನವರಿಯಲ್ಲಿ ತ್ರಿಪುರಾ ಎದುರಿನ ಪಂದ್ಯ ಮುಗಿಸಿ ನವದೆಹಲಿ ಮೂಲಕ ಸೂರತ್‌ಗೆ ಹೋಗುತ್ತಿದ್ದಾಗ ವಿಮಾನದಲ್ಲಿ ಪಾನೀಯ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.