ADVERTISEMENT

‘ಶರವೇಗಿ’ ಮಯಂಕ್ ಯಾದವ್ ಮೇಲೆ ಕಣ್ಣು: ಭಾರತ–ಬಾಂಗ್ಲಾ ಮೊದಲ ಟಿ20 ಪಂದ್ಯ ಇಂದು

ಪಿಟಿಐ
Published 5 ಅಕ್ಟೋಬರ್ 2024, 23:30 IST
Last Updated 5 ಅಕ್ಟೋಬರ್ 2024, 23:30 IST
ಮಯಂಕ್ ಯಾದವ್ 
ಮಯಂಕ್ ಯಾದವ್    

ಗ್ವಾಲಿಯರ್: ಹೋದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಸಂಚಲನ ಮೂಡಿಸಿದ್ದ ವೇಗದ ಬೌಲರ್ ಮಯಂಕ್ ಯಾದವ್ ಅವರು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ಪ್ರತಿ ಗಂಟೆಗೆ 150 ಕಿ.ಮೀ ವೇಗದಲ್ಲಿ ಎಸೆತಗಳನ್ನು ಹಾಕುವ ಮಯಂಕ್ ಭಾನುವಾರ ಇಲ್ಲಿ ನಡೆಯಲಿರುವ ಬಾಂಗ್ಲಾದೇಶ ಎದುರಿನ ಟಿ20 ಪಂದ್ಯದಲ್ಲಿ ಆಡಲಿದ್ದಾರೆ. ತಂಡದ ಅನುಭವಿ ಬೌಲರ್‌ಗಳು ವಿಶ್ರಾಂತಿ ಪಡೆದಿರುವುದರಿಂದ ಮಯಂಕ್ ಅವರಿಗೆ ಅವಕಾಶ ಸಿಗುವುದು ಬಹುತೇಕ ಖಚಿತವಾಗಿದೆ. ಐಪಿಎಲ್ ಸಂದರ್ಭದಲ್ಲಿ ಗಾಯದ ಸಮಸ್ಯೆಯಿಂದ ಬಳಲಿದ್ದ ಮಯಂಕ್ ಚಿಕಿತ್ಸೆಗೆ ತೆರಳಿದ್ದರು. ಚೇತರಿಸಿಕೊಂಡ ನಂತರ ಕ್ರಿಕೆಟ್‌ಗೆ ಮರಳಿದ್ದಾರೆ. ಬಾಂಗ್ಲಾ ಎದುರಿನ ಮೂರು ಪಂದ್ಯಗಳ ಸರಣಿಯು ಮಯಂಕ್ ಅವರಿಗೆ ಫಿಟ್‌ನೆಸ್ ಪರೀಕ್ಷೆಯ ವೇದಿಕೆಯಾಗಿದೆ.

ದೆಹಲಿಯ ವೇಗಿ ಹರ್ಷಿತ್ ರಾಣಾ ಮತ್ತು ಆಲ್‌ರೌಂಡರ್ ನಿತೀಶ್ ಕುಮಾರ್ ಅವರು ಕೂಡ ಭಾರತ ತಂಡದಲ್ಲಿ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಈಚೆಗೆ ಜಿಂಬಾಬ್ವೆ ಎದುರಿನ ಸರಣಿಯಲ್ಲಿ ಆಡಲು ಹರ್ಷಿತ್ ಆಯ್ಕೆಯಾಗಿದ್ದರು. ಅದರ ನಂತರ ಗಾಯಗೊಂಡಿದ್ದ ಅವರಿಗೆ ಸರಣಿಯಲ್ಲಿ ಆಡಲು ಸಾಧ್ಯವಾಗಿರಲಿಲ್ಲ. 

ADVERTISEMENT

ಇದೇ ತಿಂಗಳು ನ್ಯೂಜಿಲೆಂಡ್ ಎದುರು ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಆಡುವುದಕ್ಕೆ ಆದ್ಯತೆ ನೀಡಿರುವ ಪ್ರಮುಖ ಆಟಗಾರರಾದ ಶುಭಮನ್ ಗಿಲ್, ರಿಷಭ್ ಪಂತ್, ಯಶಸ್ವಿ ಜೈಸ್ವಾಲ್, ಮೊಹಮ್ಮದ್ ಸಿರಾಜ್ ಮತ್ತು ಅಕ್ಷರ್ ಪಟೇಲ್ ಅವರಿಗೆ ಈ ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.

ಸೂರ್ಯಕುಮಾರ್ ಯಾದವ್ ನಾಯಕತ್ವದ ತಂಡದಲ್ಲಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ವೇಗಿ ಅರ್ಷದೀಪ್ ಸಿಂಗ್, ಬ್ಯಾಟರ್ ರಿಯಾನ್ ಪರಾಗ್, ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್ ಅವರ ಮೇಲೆ ಹೆಚ್ಚು ನಿರೀಕ್ಷೆ ಇದೆ. ತಂಡದಲ್ಲಿರುವ ಯುವ ಆಟಗಾರರಿಗೆ ಆಯ್ಕೆಗಾರರ ಗಮನ ಸೆಳೆಯಲು ಇದು ಸದಾವಕಾಶ. 

ಟೆಸ್ಟ್ ಸರಣಿಯಲ್ಲಿ ಸೋತಿರುವ ಪ್ರವಾಸಿ ಬಾಂಗ್ಲಾ ತಂಡವು ಅನುಭವಿ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರಿಲ್ಲದೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುತ್ತಿದೆ. ಶಕೀಬ್ ಅವರು ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ಗೆ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ. ಅವರ ಸ್ಥಾನವನ್ನು ತುಂಬುವುದು ಕಷ್ಟ. ಮೆಹದಿ ಹಸನ್ ಮಿರಾಜ್, ಮೆಹಮೂದ್ ಉಲ್ಲಾ, ನಾಯಕ ಶಾಂತೊ, ಬೌಲರ್‌ಗಳಾದ ಮುಸ್ತಫಿಜುರ್ ರೆಹಮಾನ್, ಲಿಟನ್ ಕುಮಾರ್ ದಾಸ್ ಅವರ ಮೇಲೆ ತಂಡವು ಹೆಚ್ಚು ಅವಲಂಬಿತವಾಗಿದೆ. 

ಸೂರ್ಯಕುಮಾರ್ ಯಾದವ್ 

ತಂಡಗಳು

ಭಾರತ: ಸೂರ್ಯಕುಮಾರ್ ಯಾದವ್ (ನಾಯಕ) ಅಭಿಷೇಕ್ ಶರ್ಮಾ ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್) ರಿಂಕು ಸಿಂಗ್ ಹಾರ್ದಿಕ್ ಪಾಂಡ್ಯ ರಿಯಾನ್ ಪರಾಗ್ ನಿತೀಶಕುಮಾರ್ ರೆಡ್ಡಿ ಶಿವಂ ದುಬೆ ವಾಷಿಂಗ್ಟನ್ ಸುಂದರ್ ರವಿ ಬಿಷ್ಣೋಯಿ ವರುಣ ಚಕ್ರವರ್ತಿ ಜಿತೇಶ್ ಶರ್ಮಾ (ವಿಕೆಟ್‌ಕೀಪರ್) ಅರ್ಷದೀಪ್ ಸಿಂಗ್ ಹರ್ಷಿತ್ ರಾಣಾ ಮಯಂಕ್ ಯಾದವ್.

ಬಾಂಗ್ಲಾದೇಶ: ನಜ್ಮುಲ್ ಹುಸೇನ್ ಶಾಂತೊ (ನಾಯಕ) ತಂಜೀದ್ ಹಸನ್ ತಮೀಮ್ ಪರ್ವೇಜ್ ಹುಸೇನ್ ಇಮಾನ್ ತೌಹಿದ್ ಹೃದಯ್ ಮೆಹಮೂದ್ ಉಲ್ಲಾ ಲಿಟನ್ ಕುಮಾರ್ ದಾಸ್ ಜಾಕಿರ್ ಅಲಿ ಅನಿಕ್ ಮೆಹದಿ ಹಸನ್ ಮಿರಾಜ್ ಶಾಕ್ ಮೆಹದಿ ಹಸನ್ ರಿಷದ್ ಹುಸೇನ್ ಮುಸ್ತಫಿಜುರ್ ರೆಹಮಾನ್ ತಸ್ಕಿನ್ ಅಹಮದ್ ಶರೀಫುಲ್ ಇಸ್ಲಾಂ ತಂಝೀಮ್ ಹಸನ್ ಶಕೀಬ್ ರಕೀಬುಲ್ ಹಸನ್.  ಪಂದ್ಯ ಆರಂಭ: ರಾತ್ರಿ 7 ನೇರಪ್ರಸಾರ: 

ಗ್ವಾಲಿಯರ್‌ನಲ್ಲಿ 14 ವರ್ಷದ ನಂತರ ಪಂದ್ಯ ಶಾಸ್ತ್ರೀಯ ಸಂಗೀತದ ಊರು ಗ್ವಾಲಿಯರ್‌ ನಗರದ ಹೊರವಲಯದಲ್ಲಿ ನಿರ್ಮಾಣವಾಗಿರುವ ಶ್ರೀಮಂತ ಮಾಧವರಾವ್ ಸಿಂಧಿಯಾ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಈ ಕ್ರೀಡಾಂಗಣದಲ್ಲಿ  ಆಯೋಜನೆಯಾಗಿರುವ ಮೊದಲ ಅಂತರರಾಷ್ಟ್ರೀಯ ಪಂದ್ಯ ಇದಾಗಿದೆ.  ಅಲ್ಲದೇ ಗ್ವಾಲಿಯರ್‌ನಲ್ಲಿ 14 ವರ್ಷಗಳ ನಂತರ ನಡೆಯುತ್ತಿರುವ ಅಂತರರಾಷ್ಟ್ರೀಯ ಪಂದ್ಯವೂ ಹೌದು. 2010ರಲ್ಲಿ ಇಲ್ಲಿರುವ ಕ್ಯಾಪ್ಟನ್ ರೂಪ್ ಸಿಂಗ್ ಕ್ರೀಡಾಂಗಣದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಏಕದಿನ ಪಂದ್ಯ ನಡೆದಿತ್ತು. ಆಗ ಸಚಿನ್ ತೆಂಡೂಲ್ಕರ್ ಅವರು ದ್ವಿಶತಕ ಬಾರಿಸಿ ವಿಶ್ವದಾಖಲೆ  ನಿರ್ಮಿಸಿದ್ದರು.  ಹೋಟೆಲ್‌ನಲ್ಲಿಯೇ ಬಾಂಗ್ಲಾ ಆಟಗಾರರ ಪ್ರಾರ್ಥನೆ ಬಾಂಗ್ಲಾದೇಶದ ಆಟಗಾರರು ಶುಕ್ರವಾರದ ಪ್ರಾರ್ಥನೆ ಸಲ್ಲಿಸಲು ನಗರದ ಮೋತಿ ಮಸೀದಿಗೆ ತೆರಳಲಿಲ್ಲ. ಬದಲಿಗೆ ತಮ್ಮ ಹೋಟೆಲ್‌ನಲ್ಲಿಯೇ ಪ್ರಾರ್ಥನೆ ಸಲ್ಲಿಸಿದರು.  ‘ಆಟಗಾರರು ಮೋತಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಆದರೆ ತಂಡವು ಹೋಟೆಲ್‌ನಲ್ಲಿಯೇ ಇರಲು ನಿರ್ಧರಿಸಿತು’ ಎಂದು ಗ್ವಾಲಿಯರ್ ವಲಯ ಐಜಿಪಿ ಅರವಿಂದ್ ಸಕ್ಸೆನಾ ತಿಳಿಸಿದ್ದಾರೆ.  ‘ಬಾಂಗ್ಲಾದೇಶದಲ್ಲಿ ಈಚೆಗೆ ನಡೆದ ರಾಜಕೀಯ ಸಂಘರ್ಷದ ಸಂದರ್ಭದಲ್ಲಿ ಅಲ್ಲಿಯ ಹಿಂದೂಗಳ ಮೇಲೆ ದೌರ್ಜನ್ಯ ಎಸಗಲಾಗಿದೆ. ಆದ್ದರಿಂದ ಗ್ವಾಲಿಯರ್‌ನಲ್ಲಿ ಬಾಂಗ್ಲಾದೇಶಕ್ಕೆ ಆಡಲು ಅವಕಾಶ ನೀಡಬಾರದು’ ಎಂದು ಕೆಲವು ಸಂಘಟನೆಗಳು ಆಗ್ರಹಿಸಿದ್ದವು. ಪಂದ್ಯಕ್ಕೆ ತಡೆಯೊಡ್ಡುವುದಾಗಿಯೂ ಬೆದರಿಕೆ ಹಾಕಿದ್ದವು. ಆದ್ದರಿಂದ ನಗರದಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.