ADVERTISEMENT

IPL | ಪ್ಲೇ ಆಫ್‌ನತ್ತ ಚಿತ್ತ; RCB ಎದುರು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಮುಂಬೈ

​ಪ್ರಜಾವಾಣಿ ವಾರ್ತೆ
Published 9 ಮೇ 2023, 13:42 IST
Last Updated 9 ಮೇ 2023, 13:42 IST
ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮಾ ಹಾಗೂ  ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರಾಟ್‌ ಕೊಹ್ಲಿ
ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮಾ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರಾಟ್‌ ಕೊಹ್ಲಿ   

ಮುಂಬೈ: ಈ ಬಾರಿಯ ಐಪಿಎಲ್‌ ಕ್ರಿಕೆಟ್‌ ಟೂರ್ನಿಯಲ್ಲಿ ‘ಪ್ಲೇ ಆಫ್‌’ ಸ್ಥಾನ ಖಚಿತಪಡಿಸಿಕೊಳ್ಳುವ ಪ್ರಯತ್ನದಲ್ಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ ಇಂದು ಮುಂಬೈ ಇಂಡಿಯನ್ಸ್‌ ವಿರುದ್ಧ ಕಣಕ್ಕಿಳಿದಿದೆ. ಟಾಸ್‌ ಗೆದ್ದಿರುವ ಮುಂಬೈ ತಂಡದ ನಾಯಕ ರೋಹಿತ್‌ ಶರ್ಮಾ ಬೌಲಿಂಗ್‌ ಆಯ್ದುಕೊಂಡಿದ್ದಾರೆ.

ಉಭಯ ತಂಡಗಳು 10 ಪಂದ್ಯಗಳನ್ನು ಆಡಿವೆ. ತಲಾ 5 ಜಯ ಹಾಗೂ 5 ಸೋಲಿನೊಂದಿಗೆ 10 ಪಾಯಿಂಟ್ಸ್‌ಗಳನ್ನು ಕಲೆಹಾಕಿವೆ. ಉತ್ತಮ ರನ್‌ರೇಟ್‌ ಆಧಾರದಲ್ಲಿ ಫಫ್‌ ಡುಪ್ಲೆಸಿ ನಾಯಕತ್ವದ ಆರ್‌ಸಿಬಿ ಬಳಗ, ರೋಹಿತ್‌ ಶರ್ಮಾ ಬಳಗಕ್ಕಿಂತ ಒಂದು ಸ್ಥಾನ ಮೇಲಿದೆ. ಪ್ಲೇ ಆಫ್‌ ಪ್ರವೇಶದ ಹಾದಿಯಲ್ಲಿ ಎರಡೂ ತಂಡಗಳಿಗೆ ಉಳಿದಿರುವ ನಾಲ್ಕು ಪಂದ್ಯಗಳ ಫಲಿತಾಂಶವೂ ಮಹತ್ವದ್ದಾಗಿವೆ.

ತನ್ನ ಹಿಂದಿನ ಪಂದ್ಯದಲ್ಲಿ ಆರ್‌ಸಿಬಿಯು ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಆಘಾತ ಅನುಭವಿಸಿದ್ದರೆ, ಮುಂಬೈ ತಂಡ, ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ಮುಗ್ಗರಿಸಿತ್ತು. ಸೋಲಿನ ನಿರಾಸೆಯನ್ನು ಮರೆತು ಸಂಘಟಿತ ಪ್ರದರ್ಶನ ನೀಡುವುದು ಎರಡೂ ತಂಡಗಳ ಗುರಿ.

ADVERTISEMENT

ಬೆಂಗಳೂರಿನ ತಂಡವು ಈ ಪಂದ್ಯದಲ್ಲೂ ಅಗ್ರ ಕ್ರಮಾಂಕದ ಬ್ಯಾಟರ್‌ ಗಳಾದ ಡುಪ್ಲೆಸಿ, ವಿರಾಟ್‌ ಕೊಹ್ಲಿ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಮೇಲೆ ಭರವಸೆ ಇಟ್ಟಿದೆ. ಈ ಮೂವರು ಜತೆಯಾಗಿ ಮಿಂಚಿದಾಗ ತಂಡಕ್ಕೆ ಗೆಲುವು ದಕ್ಕಿದೆ.

ಏಪ್ರಿಲ್‌ 2ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇವೆರಡು ತಂಡಗಳು ಎದುರಾಗಿದ್ದಾಗ ಆರ್‌ಸಿಬಿ ಎಂಟು ವಿಕೆಟ್‌ಗಳಿಂದ ಗೆದ್ದಿತ್ತು. ಆ ಸೋಲಿಗೆ ಮುಯ್ಯಿ ತೀರಿಸುವ ಲೆಕ್ಕಾಚಾರದೊಂದಿಗೆ ಮುಂಬೈ ಇಂಡಿಯನ್ಸ್‌ ಕಣಕ್ಕಿಳಿಯಲಿದೆ.

ಡುಪ್ಲೆಸಿ ಅತ್ಯಧಿಕ ರನ್‌
ಡುಪ್ಲೆಸಿ ಇದುವರೆಗೆ 511 ರನ್‌ಗಳನ್ನು ಕಲೆಹಾಕಿದ್ದು, ಅತ್ಯಧಿಕ ರನ್‌ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ಟೂರ್ನಿಯಲ್ಲಿ 500ಕ್ಕೂ ಅಧಿಕ ರನ್‌ ಗಳಿಸಿರುವುದು ಅವರು ಮಾತ್ರ. ಕೊಹ್ಲಿ ಆರು ಅರ್ಧಶತಕಗಳ ನೆರವಿನಿಂದ 419 ರನ್‌ ಪೇರಿಸಿದ್ದಾರೆ.
ರೋಹಿತ್‌ ಕಳಪೆ ಫಾರ್ಮ್‌
ನಾಯಕ ರೋಹಿತ್‌ ಅವರ ಕಳಪೆ ಫಾರ್ಮ್‌ ಮುಂಬೈ ತಂಡದ ಚಿಂತೆಗೆ ಕಾರಣವಾಗಿದೆ. ಅವರು 10 ಪಂದ್ಯಗಳಿಂದ 18.39ರ ಸರಾಸರಿಯಲ್ಲಿ 184 ರನ್‌ ಮಾತ್ರ ಗಳಿಸಿದ್ದಾರೆ. ಒಮ್ಮೆ ಮಾತ್ರ ಅರ್ಧಶತಕದ ಗಡಿ ದಾಟಿದ್ದಾರೆ. ತಂಡಕ್ಕೆ ಬಿರುಸಿನ ಆರಂಭ ನೀಡಲು ಅವರಿಗೆ ಆಗದಿರುವುದು ಇತರ ಬ್ಯಾಟರ್‌ಗಳ ಮೇಲಿನ ಒತ್ತಡ ಹೆಚ್ಚಿಸಿದೆ. ಇಶಾನ್‌ ಕಿಶನ್‌, ಸೂರ್ಯಕುಮಾರ್‌ ಯಾದವ್‌, ಕ್ಯಾಮರಾನ್ ಗ್ರೀನ್‌, ತಿಲಕ್‌ ವರ್ಮಾ ಮತ್ತು ಟಿಮ್‌ ಡೇವಿಡ್‌ ಅವರು ಮಿಂಚುತ್ತಿರುವುದರಿಂದ ರೋಹಿತ್‌ ಅವರ ಕಳಪೆ ಫಾರ್ಮ್‌ ನಡುವೆಯೂ ತಂಡ ‘ಪ್ಲೇ ಆಫ್‌’ ರೇಸ್‌ನಲ್ಲಿ ಉಳಿದುಕೊಂಡಿದೆ. ‘ಡೆತ್‌ ಬೌಲಿಂಗ್‌’ಅನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ಸವಾಲು ಕೂಡಾ ತಂಡದ ಮುಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.