ಜೊಹಾನೆಸ್‌ಬರ್ಗ್: ಬ್ಯಾಟಿಂಗ್ ತಾರೆಗಳಾದ ಡೇವಿಡ್ ಮಿಲ್ಲರ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರು ಪ್ರವಾಸಿ ಭಾರತ ವಿರುದ್ಧ ನವೆಂಬರ್ ಎರಡನೇ ವಾರದಿಂದ ನಡೆಯುವ ನಾಲ್ಕು ಪಂದ್ಯಗಳ ಟಿ20 ಸರಣಿ ಆಡಲಿರುವ ದಕ್ಷಿಣ ಆಫ್ರಿಕಾ ತಂಡದಲ್ಲಿ ಮರಳಿ ಸ್ಥಾನ ಪಡೆದಿದ್ದಾರೆ.
ಸರಣಿಯ ಮೊದಲ ಪಂದ್ಯ ಡರ್ಬನ್‌ನಲ್ಲಿ ನವೆಂಬರ್ 8ರಂದು ನಡೆಯಲಿದೆ. ಜೂನ್‌ನಲ್ಲಿ ಆತಿಥೇಯ ಭಾರತ ಕೈಲಿ ವಿಶ್ವಕಪ್ ಫೈನಲ್‌ನಲ್ಲಿ ಅನುಭವಿಸಿದ ಏಳು ರನ್ ಸೋಲಿಗೆ ಸೇಡುತೀರಿಸಲು ಹರಿಣಗಳ ಪಡೆಗೆ ಇದು ಅವಕಾಶ ಒದಗಿಸಿದೆ.
ಎಡಗೈ ವೇಗದ ಬೌಲರ್ ಮಾರ್ಕೊ ಯಾನ್ಸೆನ್ ಮತ್ತು ಎಡಗೈ ಸ್ಪಿನ್ನರ್ ಕೇಶವ ಮಹರಾಜ್ ಅವರೂ ತಂಡಕ್ಕೆ ವಾಪಸಾಗಿದ್ದಾರೆ. ಈ ನಾಲ್ಕು ಮಂದಿ ಸೆಪ್ಟೆಂಬರ್‌ನಲ್ಲಿ ಐರ್ಲೆಂಡ್ ವಿರುದ್ಧ ನಡೆದ ಸರಣಿಯಲ್ಲಿ ಆಡಿರಲಿಲ್ಲ. ಇವರು ಆ ವೇಳೆ ವಿವಿಧೆಡೆ ಫ್ರಾಂಚೈಸಿ ಲೀಗ್‌ನಲ್ಲಿ ಆಡುತ್ತಿದ್ದರು.
ಈ ಸರಣಿಯ ನಂತರ ನಾಲ್ಕು ಟೆಸ್ಟ್‌ಗಳ ಸರಣಿಯನ್ನು ದಕ್ಷಿಣ ಆಫ್ರಿಕಾ ಆಡಲಿರುವ ಕಾರಣ, ಕಗಿಸೊ ರಬಾಡ ಅವರಿಗೆ ಟಿ20 ಸರಣಿಗೆ ವಿಶ್ರಾಂತಿ ನೀಡಲಾಗಿದೆ.
ಟಿ20 ಫೈನಲ್ ಆಡಿದ ತಂಡದಲ್ಲಿದ್ದ ಕ್ವಿಂಟನ್ ಡಿಕಾಕ್ ಮತ್ತು ಆ್ಯನ್ರಿಚ್ ನಾಕಿಯಾ, ಎಡಗೈ ಸ್ಪಿನ್ನರ್ ತಬ್ರೇಜ್ ಸಂಶಿ ಅವರೂ ಈ ತಂಡದಲ್ಲಿಲ್ಲ. ಡಿಕಾಕ್ ಮತ್ತು ನಾಕಿಯಾ ಅವರು ಕೇಂದ್ರೀಯ ಗುತ್ತಿಗೆಯಲ್ಲಿ ಇಲ್ಲ. 31 ವರ್ಷದ ಡಿಕಾಕ್ ಅವರನ್ನು ಪರಿಗಣಿಸಲಾಗಿಲ್ಲ.
ತಂಡ ಹೀಗಿದೆ:
ಏಯ್ಡನ್ ಮರ್ಕರಂ (ನಾಯಕ), ಒಟ್ಟೆನೀಲ್ ಬಾರ್ತ್‌ಮ್ಯಾನ್, ಜೆರಾಲ್ಡ್ ಕೋಝಿ, ಡೊನಾವನ್ ಫೆರೀರಾ, ರೀಝಾ ಹೆಂಡ್ರಿಕ್ಸ್, ಮಾರ್ಕೊ ಯಾನ್ಸೆನ್, ಹೆನ್ರಿಚ್ ಕ್ಲಾಸೆನ್, ಪ್ಯಾಟ್ರಿಕ್ ಕ್ರುಜೆರ್, ಕೇಶವ ಮಹಾರಾಜ್, ಡೇವಿಡ್ ಮಿಲ್ಲರ್, ಮಿಹ್ಲಾಲಿ ಪೊಂಗ್ವಾನಾ, ಎನ್‌ಕ್ವೆಬಾ ಪೀಟರ್, ರಯಾನ್ ರಿಕೆಲ್ಟನ್, ಆ್ಯಂಡಿಲೆ ಸಿಮೆಲೇನ್, ಲುಥೊ ಸಿಪಮ್ಲಾ (ಮೂರು ಮತ್ತು ನಾಲ್ಕನೇ ಪಂದ್ಯಕ್ಕೆ) ಮತ್ತು ಟ್ರಿಸ್ಟನ್ ಸ್ಟಬ್ಸ್.
ವೇಳಾಪಟ್ಟಿ
ನವೆಂಬರ್ 8; ಡರ್ಬನ್
ನವೆಂಬರ್ 10; ಗೆಬೆರ್ಹಾ
ನವೆಂಬರ್ 13; ಸೆಂಚೂರಿಯನ್
ನವೆಂಬರ್ 15: ಜೊಹಾನೆಸ್‌ಬರ್ಗ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.