ADVERTISEMENT

T20 WC: ಕಾನ್ವೆ, ನೀಶಮ್, ಮಿಚೆಲ್ 'ಮಿಂಚು'; ಫೈನಲ್‌ಗೆ ಕಿವೀಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ನವೆಂಬರ್ 2021, 17:55 IST
Last Updated 10 ನವೆಂಬರ್ 2021, 17:55 IST
ಡೆರಿಲ್ ಮಿಚೆಲ್, ಜೇಮ್ಸ್ ನೀಶಮ್ ಅಬ್ಬರ
ಡೆರಿಲ್ ಮಿಚೆಲ್, ಜೇಮ್ಸ್ ನೀಶಮ್ ಅಬ್ಬರ   

ಅಬುಧಾಬಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಬುಧವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಐದು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿರುವ ನ್ಯೂಜಿಲೆಂಡ್ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಈ ಮೂಲಕ 2019ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಎದುರಾದ ಸೋಲಿಗೆ ಸೇಡು ತೀರಿಸಿಕೊಂಡಿದೆ. ಅಲ್ಲದೆ ಇದೇ ಮೊದಲ ಬಾರಿಗೆ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದೆ.

ಈಗ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಎರಡನೇ ಸೆಮಿಫೈನಲ್‌ ವಿಜೇತ ತಂಡದ ಸವಾಲನ್ನು ಎದುರಿಸಲಿದೆ. ಗುರುವಾರ ನಡೆಯಲಿರುವ ಎರಡನೇ ಸೆಮಿಫೈನಲ್‌ ಮುಖಾಮುಖಿಯಲ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಲಿವೆ.

ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, ಮೋಯಿನ್ ಅಲಿ (51*) ಹಾಗೂ ಡೇವಿಡ್ ಮಲಾನ್ (42) ಉಪಯುಕ್ತ ಆಟದ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 166 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು.

ಬಳಿಕ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಡೆರಿಲ್ ಮಿಚೆಲ್ (72*), ಡೆವೊನ್ ಕಾನ್ವೆ (46)ಹಾಗೂ ಜೇಮ್ಸ್ ನೀಶಮ್ (27) ದಿಟ್ಟ ಹೋರಾಟದ ಬೆಂಬಲದೊಂದಿಗೆ ಇನ್ನು ಆರು ಎಸೆತಗಳು ಬಾಕಿ ಉಳಿದಿರುವಂತೆಯೇ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಸವಾಲಿನ ಮೊತ್ತ ಬೆನ್ನತ್ತಿದ್ದ ಕಿವೀಸ್ ಆರಂಭ ಉತ್ತಮವಾಗಿರಲಿಲ್ಲ. ಮಾರ್ಟಿನ್ ಗಪ್ಟಿಲ್ (4) ಹಾಗೂ ನಾಯಕ ವಿಲಿಯಮ್ಸನ್ (5) ಹೊರದಬ್ಬಿದ ಕ್ರಿಸ್ ವೋಕ್ಸ್ ಡಬಲ್ ಆಘಾತ ನೀಡಿದರು. ಈ ಪೈಕಿ ವಿಲಿಯಮ್ಸನ್ ಕೆಟ್ಟ ಹೊಡೆತಕ್ಕೆ ದೊಡ್ಡ ಬೆಲೆಯನ್ನೇ ತೆರಬೇಕಾಯಿತು.

ಈ ಹಂತದಲ್ಲಿ ಜೊತೆಗೂಡಿದ ಡೆರಿಲ್ ಮಿಚೆಲ್ ಹಾಗೂ ಡೆವೊನ್ ಕಾನ್ವೆ ಮಹತ್ವದ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು. ಅಲ್ಲದೆ ಆಂಗ್ಲರ ಬೌಲಿಂಗ್ ಪಡೆಯನ್ನು ಎಚ್ಚರಿಕೆಯಿಂದ ನಿಭಾಯಿಸಿದರು.

10 ಓವರ್ ಅಂತ್ಯಕ್ಕೆ ಕಿವೀಸ್ ಎರಡು ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿತ್ತು. ಅಂತಿಮ 60 ಎಸೆತಗಳಲ್ಲಿ ಗೆಲುವಿಗೆ 109 ರನ್ ಬೇಕಿತ್ತು. ಪಂದ್ಯ ರೋಚಕ ಹಂತವನ್ನು ತಲುಪಿತ್ತು.

ನಿರ್ಣಾಯಕ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಕಾನ್ವೆ ವಿಕೆಟ್ ನಷ್ಟವಾಯಿತು. ಅಲ್ಲದೆ ಕೇವಲ 4 ರನ್ನಿನಿಂದ ಅರ್ಧಶತಕ ವಂಚಿತರಾದರು. 38 ಎಸೆತಗಳನ್ನು ಎದುರಿಸಿದ ಕಾನ್ವೆ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 46 ರನ್ ಗಳಿಸಿದರು. ಅಲ್ಲದೆ ಮೂರನೇ ವಿಕೆಟ್‌ಗೆ ಮಿಚೆಲ್ ಜೊತೆಗೆ 82 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಅಂತಿಮ 30 ಎಸೆತಗಳಲ್ಲಿ ಕಿವೀಸ್ ಗೆಲುವಿಗೆ 60 ರನ್ ಅಗತ್ಯವಿತ್ತು. ಈ ನಡುವೆ ಕಾನ್ವೆ ಜೊತೆಗೆ ಗ್ಲೆನ್ ಫಿಲಿಪ್ಸ್ (2) ವಿಕೆಟ್‌ಗಳನ್ನು ಲಿವಿಂಗ್‌ಸ್ಟೋನ್ಕಬಳಿಸುವುದರೊಂದಿಗೆ ಇಂಗ್ಲೆಂಡ್ ಗೆಲುವು ದಾಖಲಿಸಿದೆ ಎಂದೇ ಅಂದಾಜಿಸಲಾಗಿತ್ತು.

ಆದರೆ ಕ್ರಿಸ್ ಜಾರ್ಡನ್ ಎಸೆದ ಇನ್ನಿಂಗ್ಸ್‌ನ 17ನೇ ಓವರ್‌ನಲ್ಲಿ 23 ರನ್ ಸೇರಿದಂತೆ ಕೇವಲ 11 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನಿಂದ 27 ರನ್ ಸೊರೆಗೈದ ಜೇಮ್ಸ್ ನೀಶಮ್ ಪಂದ್ಯಕ್ಕೆ ತಿರುವು ನೀಡಿದರು.

ವಿಕೆಟ್‌ನ ಇನ್ನೊಂದು ತುದಿಯಿಂದ ದಿಟ್ಟ ಹೋರಾಟ ತೋರಿದ ಡೆರಿಲ್ ಮಿಚೆಲ್, ಕಿವೀಸ್‌ಗೆ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು. 47 ಎಸೆತಗಳನ್ನು ಎದುರಿಸಿದ ಮಿಚೆಲ್ ತಲಾ ನಾಲ್ಕು ಬೌಂಡರಿ ಹಾಗೂ ಸಿಕ್ಸರ್‌ಗಳ ನೆರವಿನಿಂದ 72 ರನ್ ಗಳಿಸಿ ಔಟಾಗದೆ ಉಳಿದರು. ಈ ಮೂಲಕ 19 ಓವರ್‌ಗಳಲ್ಲಿ ಗುರಿ ತಲುಪಿತು.

ಈ ಮೊದಲು ಇಂಗ್ಲೆಂಡ್ ತಂಡಕ್ಕೆ ಜೋಸ್ ಬಟ್ಲರ್ ಹಾಗೂ ಜಾನಿ ಬೆಸ್ಟೊ (13) ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 37 ರನ್ ಪೇರಿಸಿದರು. ಆದರೆ ಬೆಸ್ಟೊ ಬೆನ್ನಲ್ಲೇ ಬಟ್ಲರ್ ವಿಕೆಟ್ ಕಳೆದುಕೊಂಡಿರುವುದು ಹಿನ್ನಡೆಗೆ ಒಳಗಾಯಿತು.

ಈ ಹಂತದಲ್ಲಿ ಜೊತೆಗೂಡಿದ ಡೇವಿಡ್ ಮಲಾನ್ ಹಾಗೂ ಮೋಯಿನ್ ಅಲಿ ತಂಡವನ್ನು ಮುನ್ನಡೆಸಿದರು. ಕಿವೀಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು.

ಈ ನಡುವೆ 42 ರನ್ (30 ಎಸೆತ, 4 ಬೌಂಡರಿ, 1 ಸಿಕ್ಸರ್) ಗಳಿಸಿದ ಮಲಾನ್ ಅರ್ಧಶತಕ ವಂಚಿತರಾದರು.

ಕೊನೆಯ ಹಂತದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ (17) ಜೊತೆ ಸೇರಿದ ಮೋಯಿನ್ ಅಲಿ ರನ್ ಗತಿ ಏರಿಸುವಲ್ಲಿ ನೆರವಾದರು. ಪಿಚ್ ಪರಿಸ್ಥಿತಿಯನ್ನು ಚೆನ್ನಾಗಿ ಗ್ರಹಿಸಿದ ಮೋಯಿನ್ ಆಕರ್ಷಕ ಇನ್ನಿಂಗ್ಸ್ ಕಟ್ಟಿದರು. ಅಲ್ಲದೆ ಆರಂಭದಲ್ಲಿ ಸಿಂಗಲ್ಸ್ ಕದಿಯುತ್ತಾ ಕೊನೆಯ ಹಂತದಲ್ಲಿ ನಿರಂತಕವಾಗಿ ಬ್ಯಾಟ್ ಬೀಸಿದರು.

ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಅರ್ಧಶತಕ ಗಳಿಸಿದ ಮೋಯಿನ್ ಅಲಿ, 51 ರನ್ ಗಳಿಸಿ ಔಟಾಗದೆ ಉಳಿದರು. 37 ಎಸೆತಗಳನ್ನು ಎದುರಿಸಿದ ಮೋಯಿನ್ ಇನ್ನಿಂಗ್ಸ್‌ನಲ್ಲಿ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಸೇರಿದ್ದವು.

ಇನ್ನುಳಿದಂತೆ ನಾಯಕ ಏಯಾನ್ ಮಾರ್ಗನ್ 4 ರನ್ ಗಳಿಸಿ ಅಜೇಯರಾಗುಳಿದರು. ಮೋಯಿನ್, ಮಲಾನ್ ಬಲದಿಂದ ಆಂಗ್ಲರ ಪಡೆ ಕೊನೆಯ 10 ಓವರ್‌ಗಳಲ್ಲಿ 99 ರನ್ ಸೊರೈಗೈದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.