ADVERTISEMENT

ಸಾಧನಾ ಪಥದಿಂದ ನಿರ್ಗಮಿಸಿದ ಜೂಲನ್‌ಗೆ ಭಾವುಕ ವಿದಾಯ: ಹೀಗಿತ್ತು ಬೀಳ್ಕೊಡುಗೆ...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಸೆಪ್ಟೆಂಬರ್ 2022, 6:06 IST
Last Updated 25 ಸೆಪ್ಟೆಂಬರ್ 2022, 6:06 IST
   

ಲಂಡನ್: ವಿಶ್ವ ಹಾಗೂ ಭಾರತದ ಮಹಿಳಾ ಕ್ರಿಕೆಟ್‌ ಕಂಡ ಅತ್ಯಂತ ಯಶಸ್ವಿ ವೇಗದ ಬೌಲರ್‌ ಜೂಲನ್‌ ಗೋಸ್ವಾಮಿ ಅವರಿಗೆ ಭಾವನಾತ್ಮಕ ಬೀಳ್ಕೊಡುಗೆ ನೀಡಲಾಯಿತು.

ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಇಂಗ್ಲೆಂಡ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದ ವೇಳೆ ಗೋಸ್ವಾಮಿ ಅವರಿಗೆ ಹರ್ಮನ್‌ಪ್ರೀತ್‌ ಕೌರ್‌ ಬಳಗ ಗೆಲುವಿನ ಕಾಣಿಕೆ ನೀಡಿತು.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ (ಬಿಸಿಸಿಐ) ಸೌರವ್ ಗಂಗೂಲಿ, ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ನೇತೃತ್ವದಲ್ಲಿ ಗೋಸ್ವಾಮಿ ಅವರಿಗೆ ವಿದಾಯದ ಗೌರವ ಸಲ್ಲಸಲಾಯಿತು.

ಇಂಗ್ಲೆಂಡ್ ಆಟಗಾರ್ತಿಯರಿಂದ ಚಪ್ಪಾಳೆಯ ಸ್ವಾಗತ

ಕೊನೆಯ ಪಂದ್ಯದಲ್ಲಿ ಬ್ಯಾಟಿಂಗ್‌ಗಾಗಿ ಕ್ರೀಸ್‌ಗೆ ಬರುವಾಗ ಇಂಗ್ಲೆಂಡ್‌ ತಂಡದ ಆಟಗಾರ್ತಿಯರು ಸಾಲಾಗಿ ನಿಂತು (ಗಾರ್ಡ್‌ ಆಫ್‌ ಆನರ್‌) ಜೂಲನ್‌ಗೆ ಗೌರವ ಸಲ್ಲಿಸಿದರು. ಆ್ಯಮಿ ಜೋನ್ಸ್‌ ನೇತೃತ್ವದಲ್ಲಿ ಇಂಗ್ಲೆಂಡ್‌ ತಂಡದ ಸದಸ್ಯರು ಚಪ್ಪಾಳೆ ಮೂಲಕ ಕ್ರೀಸ್‌ಗೆ ಸ್ವಾಗತಿಸಿದರು. ಜೂಲನ್‌ ತಮ್ಮ ಬಲಗೈ ಮೇಲಕ್ಕೆತ್ತಿ ಗೌರವ ಸ್ವೀಕರಿಸಿದರು.

ಆ ಬಳಿಕ ಫೀಲ್ಡಿಂಗ್‌ಗೆ ಬರುವಾಗ ಭಾರತ ತಂಡದ ಆಟಗಾರ್ತಿಯರು ಕೂಡಾ ಸಾಲಾಗಿ ನಿಂತು ಜೂಲನ್‌ಗೆ ಗೌರವ ಸಲ್ಲಿಸಿದರು.

ಇಂಗ್ಲೆಂಡ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯವನ್ನು ಭಾರತ 16 ರನ್‌ಗಳಿಂದ ಗೆದ್ದಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 3–0 ರಲ್ಲಿ ಜಯಿಸಿದೆ. ಇಂಗ್ಲೆಂಡ್‌ ನೆಲದಲ್ಲಿ ಭಾರತ ಮಹಿಳಾ ತಂಡ ‘ಕ್ಲೀನ್‌ಸ್ವೀಪ್‌’ ಸಾಧನೆ ಮಾಡಿದ್ದು ಇದೇ ಮೊದಲಾಗಿದೆ.

ಮಹಿಳಾ ಕ್ರಿಕೆಟ್‌ನಲ್ಲಿ ಜೂಲನ್ ಸಾಧನೆ

* ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು (255) ವಿಕೆಟ್ ಕಬಳಿಸಿದ ಆಟಗಾರ್ತಿ. 204 ಪಂದ್ಯಗಳಲ್ಲಿ (203 ಇನ್ನಿಂಗ್ಸ್) ಅವರು ಈ ಸಾಧನೆ ಮಾಡಿದ್ದಾರೆ. 3.37 ಎಕಾನಮಿ ಹೊಂದಿದ್ದಾರೆ.

* ಒಟ್ಟು 1667.3 ಓವರ್ ಬೌಲಿಂಗ್ ಮಾಡಿದ್ದು, ಇದರಲ್ಲಿ 265 ಮೇಡನ್ ಓವರ್‌ಗಳು ಸೇರಿವೆ.

* ಮಹಿಳಾ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಅತಿಹೆಚ್ಚು, 40 ವಿಕೆಟ್

* ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಸುದೀರ್ಘ ಕಾಲ ಆಡಿದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆ. ಇವರು 20 ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ತಂಡದ ಪರ ಆಡಿದ್ದಾರೆ.

* 1,228 ರನ್ ಗಳಿಸಿದ್ದು, 50 ಕ್ಯಾಚ್ ಹಿಡಿದಿದ್ದಾರೆ.

* ಟೆಸ್ಟ್ ಕ್ರಿಕೆಟ್‌ನಲ್ಲಿ 10 ವಿಕೆಟ್ ಪಡೆದ ಅತಿ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆ. 2006ರಲ್ಲಿ 23 ವರ್ಷ ವಯಸ್ಸಿನಲ್ಲಿ ಜೂಲನ್ ಅವರು ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು.

* 12 ಟೆಸ್ಟ್ ಪಂದ್ಯಗಳನ್ನಾಡಿ 44 ವಿಕೆಟ್ ಪಡೆದಿದ್ದಾರೆ.

* 68 ಟಿ20 ಪಂದ್ಯಗಳಲ್ಲಿ 56 ವಿಕೆಟ್ ಗಳಿಸಿದ್ದಾರೆ.

* ಜೂಲನ್ ಗೋಸ್ವಾಮಿ ಅವರ ಕ್ರಿಕೆಟ್ ಜೀವನದ ಯಶೋಗಾಥೆಗೆ ಸಂಬಂಧಿಸಿದ ಬಯೋಪಿಕ್ ‘ಚಕ್ಡಾ ಎಕ್ಸ್‌ಪ್ರೆಸ್’ ಚಿತ್ರೀಕರಣ ಹಂತದಲ್ಲಿದ್ದು, ಜೂಲನ್ ಪಾತ್ರದಲ್ಲಿ ಅನುಷ್ಕಾ ಶರ್ಮಾ ನಟಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.