ಹ್ಯಾಮಿಲ್ಟನ್, ನ್ಯೂಜಿಲೆಂಡ್: ಭಾರತದ ಮಹಿಳೆಯರ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ವಿಶ್ವಕಪ್‌ನಲ್ಲಿ ಅತಿಹೆಚ್ಚು ಪಂದ್ಯಗಳನ್ನು ಮುನ್ನಡೆಸಿದ ಹೊಸ ದಾಖಲೆ ಮಾಡಿದ್ದಾರೆ.
ಶನಿವಾರ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಮಿಥಾಲಿ ರಾಜ್ ಅವರು ಆಸ್ಟ್ರೇಲಿಯಾ ತಂಡದ ನಾಯಕಿ ಬೆಲಿಂಡಾ ಕ್ಲಾರ್ಕ್ ಅವರ ದಾಖಲೆಯನ್ನು ಮುರಿದರು.
ಇಂದು(ಶನಿವಾರ) ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಪಂದ್ಯವು ಸೇರಿದಂತೆ ಒಟ್ಟು 24 ಪಂದ್ಯಗಳಲ್ಲಿ ಭಾರತ ತಂಡವನ್ನು ಮಿಥಾಲಿ ಮುನ್ನಡೆಸಿದ್ದಾರೆ. ಈ ಪೈಕಿ 14 ಪಂದ್ಯಗಳಲ್ಲಿ ಭಾರತ ಗೆದ್ದಿದೆ. 8 ಪಂದ್ಯಗಳಲ್ಲಿ ಪರಾಭವ ಕಂಡಿದೆ. ಕ್ಲಾರ್ಕ್ ಅವರು 23 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದಾರೆ.
ಎರಡಕ್ಕಿಂತ ಹೆಚ್ಚು ವಿಶ್ವಕಪ್ ಟೂರ್ನಿಗಳಲ್ಲಿ ಕ್ರಮವಾಗಿ ತಮ್ಮ ದೇಶದ ತಂಡಗಳನ್ನು ಮುನ್ನಡೆಸಿದ ಖ್ಯಾತಿ ಮಿಥಾಲಿ ಮತ್ತು ಕ್ಲಾರ್ಕ್ ಅವರ ಹೆಸರಲ್ಲಿದೆ.
ಕಳೆದ ಭಾನುವಾರ, 39 ವರ್ಷದ ಮಿಥಾಲಿ ಅವರು 6 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿದ ಮೊದಲ ಮಹಿಳೆಯಾಗಿ ಗುರುತಿಸಿಕೊಂಡರು. ವಿಶ್ವಕಪ್ ಕ್ರಿಕೆಟ್‌ನಲ್ಲಿ ಒಟ್ಟಾರೆ ಈ ಸಾಧನೆ ಮಾಡಿದ 3ನೇ ಕ್ರೀಡಾಪಟು ಎನಿಸಿಕೊಂಡರು. ಈ ಮೂಲಕ ಭಾರತದ ಸಚಿನ್ ತೆಂಡೂಲ್ಕರ್ ಮತ್ತು ಪಾಕಿಸ್ತಾನದ ಜಾವೇದ್ ಮಿಯಾಂದಾದ್ ಅವರ ಸಾಲಿಗೆ ಸೇರ್ಪಡೆಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.