ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಸಾಂಪ್ರದಾಯಿಕ ಪೋಷಾಕು ತೊಟ್ಟು ಮುಖಕ್ಕೆ ಪ್ರಸಾದನ ಸಾಧನ ಹಚ್ಚಿಕೊಂಡು ವೇದಿಕೆಯಲ್ಲಿ ಥೈಯುಂ ಥೈ; ಥೈಯುಂ ದತ್ತ ಥೈ; ತಥೈ ಥಾಹ, ಧಿಥೈ ಥಾಹ….ಮುಂತಾದ ಲಯದಲ್ಲಿ ‘ಅಡವು’ಗಳೊಂದಿಗೆ ಮುದ್ರೆಗಳನ್ನು ಹಾಕುತ್ತಿದ್ದ ಆ ಬಾಲಕಿ ಹತ್ತನೇ ವಯಸ್ಸಿನ ವರೆಗೂ ನೃತ್ಯದಲ್ಲೇ ಸಾಧನೆ ಮಾಡುವ ಕನಸು ಕಂಡಿದ್ದಳು. ಅದೇ ಆಶಯದೊಂದಿಗೆ ಮುಂದುವರಿದಿದ್ದರೆ ಈಗ ಆ ಕ್ಷೇತ್ರದಲ್ಲಿ ಹೆಸರು ಮಾಡುತ್ತಿದ್ದಳೋ…ಎಷ್ಟು ವೇದಿಕೆ ಹತ್ತಿರುತ್ತಿದ್ದಳೋ…
ಆದರೆ ಬಾಲಕಿಯ ಹಾದಿ ಬದಲಾಯಿತು. ಒಂದು ದಿನ ಏಕಾಏಕಿ ಕ್ರಿಕೆಟ್‌ನತ್ತ ಮನಸ್ಸು ಹೊರಳಿತು. ಅಲ್ಲಿಂದ ಆಕೆಯ ದಿನಚರಿ ಬದಲಾಯಿತು. ಬದುಕು ಬದಲಾಯಿತು; ಭವಿಷ್ಯವೂ ಬದಲಾಯಿತು. ಗೆಜ್ಜೆ ಬಿಟ್ಟು ಕಾಲಿಗೆ ಪ್ಯಾಡ್ ಕಟ್ಟಿದಳು, ಭರತನಾಟ್ಯದ ಪೋಷಾಕು ಕಳಚಿಟ್ಟು ಕ್ರೀಡಾ ವಸ್ತ್ರ ತೊಟ್ಟಳು, ಪ್ರಸಾದನ ಸಾಮಗ್ರಿಗಳ ಜಾಗದಲ್ಲಿ ಬ್ಯಾಟ್, ಚೆಂಡು ಬಂದವು. ಆಕೆ ಮೈದಾನದಲ್ಲೆ ಬೆಳೆದಳು. ಭಾರತ ತಂಡದ ನಾಯಕಿಯಾದಳು, ದಾಖಲೆಗಳನ್ನೆಲ್ಲ ಮುರಿದು ಹೊಸ ದಾಖಲೆಗಳನ್ನು ನಿರ್ಮಿಸಿದಳು.
ಆ ಕ್ರೀಡಾಪಟು ಬೇರೆ ಯಾರೂ ಅಲ್ಲ, ಮಹಿಳೆಯರ ಕ್ರಿಕೆಟ್‌ನಲ್ಲಿ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತ ಸಾಗಿದೆ ಮಿಥಾಲಿ ರಾಜ್. ಅಂತರರಾಷ್ಟ್ರೀಯ ಕ್ರಿಕೆಟ್‌ನ 23 ವರ್ಷಗಳ ಪಯಣಕ್ಕೆ ಈಗ ಅಲ್ಪ ವಿರಾಮ ಹಾಕಿರುವ ಅವರು, ಎಲ್ಲ ಮಾದರಿಗಳ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ರಾಜಸ್ತಾನದ ಜೋಧ್‌ಪುರದಲ್ಲಿ ತಮಿಳು ಕುಟುಂಬದ ದೊರೈರಾಜ್ ಮತ್ತು ಲೀಲಾ ಅವರ ಪುತ್ರಿಯಾಗಿ ಜನಿಸಿದ (1982, ಡಿಸೆಂಬರ್ 3) ಮಿಥಾಲಿ ಬೆಳೆದದ್ದು ಮುತ್ತಿನ ನಗರಿ ಹೈದರಾಬಾದ್‌ನಲ್ಲಿ. ವಾಯುಸೇನೆಯಲ್ಲಿ ಅಧಿಕಾರಿಯಾಗಿದ್ದ ತಂದೆ ನಿವೃತ್ತಿಯ ನಂತರ ಬ್ಯಾಂಕ್ ಉದ್ಯೋಗಿಯಾದರು. ಅವರೊಂದಿಗೆ ಹೈದರಾಬಾದ್‌ಗೆ ಬಂದ ಮಿಥಾಲಿ ಕ್ರಿಕೆಟ್ ಬದುಕಿಗೆ ಹಾದಿ ತೋರಿದ್ದು ಸಿಕಂದರಾಬಾದ್ ನಗರ. ಬ್ಯಾಟಿಂಗ್ ಜೊತೆಯಲ್ಲಿ ಲೆಗ್ ಸ್ಪಿನ್ ಬೌಲಿಂಗ್ ಮಾಡುವುದು ಕೂಡ ಅಭ್ಯಾಸವಾಯಿತು. ಭಾರತ ತಂಡಕ್ಕೆ ಪ್ರವೇಶಿಸಿದಾಗ ಮಹಿಳಾ ಕ್ರಿಕೆಟ್ ಅಷ್ಟೊಂದು ಬೆಳವಣಿಗೆ ಕಂಡಿರಲಿಲ್ಲ. ಆದ್ದರಿಂದಲೇ ಅವರು ಹೆಚ್ಚು ಬೆಳಕಿಗೂ ಬಂದಿರಲಿಲ್ಲ. ಆದರೆ ತಮ್ಮ ಮೋಹಕ ಬ್ಯಾಟಿಂಗ್ ಶೈಲಿ ಮತ್ತು ಪ್ರಬಲ ಹೊಡೆತಗಳ ಮೂಲಕ ಭಾರತ ಮಹಿಳಾ ಕ್ರಿಕೆಟ್‌ಗೆ ಹೊಸ ಭಾಷ್ಯ ಬರೆಯಲು ಅವರಿಗೆ ಸಾಧ್ಯವಾಯಿತು. ವೃತ್ತಿ ಬದುಕಿನಲ್ಲಿ ವೇಗದ ಬೆಳವಣಿಗೆ ಕಂಡ ಮಿಥಾಲಿ ಟೆಸ್ಟ್ ಮತ್ತು ಏಕದಿನ ತಂಡಗಳ ನಾಯಕಿಯಾದರು. ನಂತರ ದಾಖಲೆಗಳ ಒಡತಿಯಾದರು.
ಇದನ್ನೂ ಓದಿ–ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮಿಥಾಲಿ ರಾಜ್ ವಿದಾಯ
ಮೊದಲುಗಳ ರಾಣಿ....
ದಕ್ಷಿಣ ಆಫ್ರಿಕಾ ವಿರುದ್ಧ 2021ರಲ್ಲಿ ಮುಕ್ತಾಯಗೊಂಡ ಏಕದಿನ ಸರಣಿಯ ಸಂದರ್ಭದಲ್ಲಿ ಎರಡು ದಾಖಲೆಗಳು ಮಿಥಾಲಿ ರಾಜ್ ಮುಡಿಯೇರಿದವು. ಒಂದು, ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟಾರೆ 10 ಸಾವಿರ ರನ್ ದಾಟಿದ ಮೊದಲ ಆಟಗಾರ್ತಿ ಎಂಬುದು. ಮತ್ತೊಂದು ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಏಳು ಸಾವಿರ ರನ್ ದಾಟಿದ ಮೊದಲ ಕ್ರಿಕೆಟರ್ ಎಂಬುದು.
ಮಹಿಳೆಯರ ಏಕದಿನ ಕ್ರಿಕೆಟ್‌ನಲ್ಲಿ ಸತತ ಏಳು ಅರ್ಧಶತಕ ಸಿಡಿಸುವ ಮೂಲಕ ಮಿಥಾಲಿ ದಾಖಲೆಗಳ ಲೋಕಕ್ಕೆ ಪದಾರ್ಪಣೆ ಮಾಡಿದ್ದರು. ನಂತರ ಅತಿಹೆಚ್ಚು ಅರ್ಧಶತಕ ಗಳಿಸಿದ ಆಟಗಾರ್ತಿ ಎನಿಸಿಕೊಂಡರು. ಆರು ಸಾವಿರ ರನ್ ಗಳಿಸಿದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಶ್ರೇಯ ಗಳಿಸಿದ ಬೆನ್ನಲ್ಲೇ ಏಳು ಸಾವಿರ ರನ್ ಕಲೆ ಹಾಕಿದ ಏಕೈಕ ಬ್ಯಾಟ್ಸ್‌ವುಮನ್ ಎಂಬ ಖ್ಯಾತಿಯೂ ಅವರದಾಯಿತು. ಪುರುಷರದೇ ಪಾರಮ್ಯ ಇರುವ ಕ್ರಿಕೆಟ್‌ನಲ್ಲಿ, ಅದರಲ್ಲೂ ಹೊಡಿಬಡಿ ಆಟದ ಟಿ20ಯಲ್ಲಿ ಭಾರತದ ಪುರುಷರು ಕೂಡ ಮಾಡದ ಸಾಧನೆಯೊಂದು ಅವರಿಂದ ಆಯಿತು. ಟಿ20 ಕ್ರಿಕೆಟ್‌ನಲ್ಲಿ ಎರಡು ಸಾವಿರ ರನ್ ಗಳಿಸಿದ ಭಾರತದ ಮೊದಲ ಕ್ರಿಕೆಟರ್ ಎಂಬ ದಾಖಲೆ 2018ರ ಮಹಿಳಾ ಟಿ20 ಏಷ್ಯಾಕಪ್‌ನ ಸಂದರ್ಭದಲ್ಲಿ ಆಯಿತು. ಈ ಮೈಲಿಗಲ್ಲು ದಾಟಿದ ಜಗತ್ತಿನ ಮೊದಲ ಮಹಿಳಾ ಕ್ರಿಕೆಟರ್ ಎಂಬ ಗರಿಮೆ ಅವರದಾಯಿತು.
2005ರಲ್ಲಿ ಭಾರತ ಏಕದಿನ ತಂಡದ ನಾಯಕಿಯಾದ ಅವರು 2005 ಮತ್ತು 2017ರ ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಿ ಒಂದಕ್ಕಿಂತ ಹೆಚ್ಚು ಬಾರಿ ವಿಶ್ವಕಪ್ ಫೈನಲ್‌ಗಳಲ್ಲಿ ರಾಷ್ಟ್ರೀಯ ತಂಡದ ನಾಯಕಿಯಾದ ಭಾರತದ ಏಕೈಕ ಆಟಗಾರ್ತಿ ಎನಿಸಿಕೊಂಡರು. ವಿಶ್ವಕಪ್‌ನಲ್ಲಿ ಅತಿಹೆಚ್ಚು ಪಂದ್ಯಗಳನ್ನು ಮುನ್ನಡೆಸಿದ ದಾಖಲೆಯೂ ಇವರದ್ದಾಗಿದೆ. ಮಿಥಾಲಿ ಒಟ್ಟು ಆರು ವಿಶ್ವಕಪ್ ಟೂರ್ನಿಗಳಲ್ಲಿ ಭಾಗಿಯಾಗಿದ್ದಾರೆ.
2019ರಲ್ಲಿ, 200 ಏಕದಿನ ಪಂದ್ಯಗಳನ್ನು ಆಡಿದ ಮೊದಲ ಮಹಿಳೆ ಎಂಬ ದಾಖಲೆಯೂ ಅವರ ಮುಡಿಯೇರಿತು. ಆ ವರ್ಷ ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಮಿಥಾಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡು ದಶಕಗಳ ಕಾಲ ಆಡಿದ ಮೊದಲ ಮಹಿಳೆ ಎನಿಸಿಕೊಂಡರು. ಇಂಥ ಮಹಾನ್ ಆಟಗಾರ್ತಿಗೆ ವಿಸ್ಡನ್ ವರ್ಷದ ಕ್ರಿಕೆಟ್ ಪಟು (2017), ಅರ್ಜುನ ಪ್ರಶಸ್ತಿ (2003) ಮತ್ತು ಪದ್ಮಶ್ರೀ (2015) ಪುರಸ್ಕಾರ ಸಂದಿದೆ. 2021ರಲ್ಲಿ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ 'ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ' ಗೌರವ ಸಂದಿದೆ.
ಕ್ರಿಕೆಟ್ ಅಂಗಳಲ್ಲಿ ಈವರೆಗೂ...
232 ಏಕದಿನ, 12 ಟೆಸ್ಟ್ ಮತ್ತು 89 ಟಿ20 ಪಂದ್ಯಗಳನ್ನು ಆಡಿರುವ ಅವರು ಕ್ರಮವಾಗಿ 7,805 ರನ್ (7 ಶತಕ, 64 ಅರ್ಧಶತಕ; ಗರಿಷ್ಠ ಅಜೇಯ 125), 699 (1 ಶತಕ, 4 ಅರ್ಧಶತಕ; ಗರಿಷ್ಠ 214) ಮತ್ತು 2364 (17 ಅರ್ಧಶತಕ; ಗರಿಷ್ಠ ಅಜೇಯ 97) ರನ್ ಗಳಿಸಿದ್ದಾರೆ. ಅವರ ಉತ್ಸಾಹ, ಹೊಡೆತಗಳ ಭಂಗಿ ಮತ್ತು ಪಾದಚಲನೆಯ ನಾಜೂಕು ಭರತನಾಟ್ಯದ ಸೊಬಗನ್ನೂ ತೋರುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.