ADVERTISEMENT

ಮೊದಲ ಸಲ ಪಿಂಕ್ ಬಾಲ್ ಎದುರಿಸಿದ ವಿರಾಟ್!

ಇಂದೋರ್ ನೆಟ್ಸ್‌ನಲ್ಲಿ ಭಾರತ ತಂಡದ ಅಭ್ಯಾಸ

ಪಿಟಿಐ
Published 22 ನವೆಂಬರ್ 2019, 10:25 IST
Last Updated 22 ನವೆಂಬರ್ 2019, 10:25 IST
ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದ ನೆಟ್ಸ್‌ನಲ್ಲಿ ಮಂಗಳವಾರ ಬ್ಯಾಟಿಂಗ್ ಅಭ್ಯಾಸ ನಡೆಸಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಪಿಂಕ್ ಚೆಂಡು ಎದುರಿಸಿದರು  –ಎಎಫ್‌ಪಿ ಚಿತ್ರ
ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದ ನೆಟ್ಸ್‌ನಲ್ಲಿ ಮಂಗಳವಾರ ಬ್ಯಾಟಿಂಗ್ ಅಭ್ಯಾಸ ನಡೆಸಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಪಿಂಕ್ ಚೆಂಡು ಎದುರಿಸಿದರು  –ಎಎಫ್‌ಪಿ ಚಿತ್ರ   

ಇಂದೋರ್: ಭಾರತ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಮೊಟ್ಟಮೊದಲ ಬಾರಿಗೆ ನಸುಗೆಂಪು ವರ್ಣದ ಚೆಂಡಿನ ಎಸೆತಗಳನ್ನು ಎದುರಿಸಿದರು.

ಬಾಂಗ್ಲಾದೇಶ ಎದುರಿನ ಟೆಸ್ಟ್ ಸರಣಿಯಲ್ಲಿ ನವೆಂಬರ್ 22ರಂದು ನಡೆಯುವಎರಡನೇ ಪಂದ್ಯವು ಹಗಲು ರಾತ್ರಿ ನಡೆಯಲಿದೆ. ಭಾರತ ತಂಡವು ಆಡುತ್ತಿರುವ ಮೊಟ್ಟಮೊದಲ ಹೊನಲುಬೆಳಕಿನ ಟೆಸ್ಟ್‌ ಇದಾಗಲಿದೆ. ಕೋಲ್ಕತ್ತದಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಇಂದೋರ್‌ನ ನೆಟ್ಸ್‌ನಲ್ಲಿ ಮಂಗಳವಾರದಿಂದಲೇ ವಿರಾಟ್ ಅಭ್ಯಾಸ ಆರಂಭಿಸಿದರು.

ಇದೇ 14ರಿಂದ ಇಲ್ಲಿಯ ಹೋಳ್ಕರ್ ಮೈದಾನದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾ ಮುಖಾಮುಖಿಯಾಗಲಿವೆ. ಇಲ್ಲಿಗೆ ಸೋಮವಾರ ರಾತ್ರಿ ಬಂದಿಳಿದಿರುವ ಆತಿಥೇಯ ತಂಡವು ಇಂದು ಬೆಳಿಗ್ಗೆ ತಾಲೀಮು ನಡೆಸಿತು. ಆದರೆ ಈ ಸಂದರ್ಭದಲ್ಲಿ ವಿರಾಟ್ ಅಚ್ಚರಿ ಮೂಡಿಸಿದರು.

ADVERTISEMENT

ಬ್ಯಾಟ್ ಹಿಡಿದು ಅಂಗಳಕ್ಕೆ ಬಂದ ವಿರಾಟ್ ಅವರಿಗೆ ನೆಟ್ ಪ್ರಾಕ್ಟಿಸ್‌ ಬೌಲರ್‌ಗಳು ಪಿಂಕ್ ಬಾಲ್‌ನಿಂದ ಎಸೆತಗಳನ್ನು ಹಾಕಿದರು. ಸ್ವಲ್ಪ ಹೊತ್ತು ಆಡಿದ ನಂತರ ಕೆಂಪು ಚೆಂಡು ಮತ್ತು ಪಿಂಕ್ ಬಾಲ್ ಎರಡನ್ನೂ ಅವರು ಎದುರಿಸಿದರು. ಥ್ರೋಡೌನ್ ಪರಿಣತ, ಕನ್ನಡಿಗ ರಾಘವೇಂದ್ರ ಮತ್ತು ಶ್ರೀಲಂಕೆಯ ನುವಾನ ಸೇನಾವಿರಾಟನೆ ಅವರು ಎಸೆತಗಳನ್ನು ಹಾಕಿದರು.

ವಿರಾಟ್ ನಂತರ ಚೇತೇಶ್ವರ್ ಪೂಜಾರ ಕೂಡ ಇದೇ ರೀತಿ ಎರಡೂ ಚೆಂಡುಗಳಲ್ಲಿ ಅಭ್ಯಾಸ ನಡೆಸಿದರು. ಯುವ ಆಟಗಾರ ಶುಭಮನ್ ಗಿಲ್ ಕೂಡ ಇದೇ ರೀತಿ ಅಭ್ಯಾಸ ಮಾಡಿದರು. ಒಂದು ಎಸೆತವು ತುಸು ಹೆಚ್ಚು ಪುಟಿದೆ್ದು ಅವರಿಗೆ ಬಡಿಯಿತು. ಆದರೆ ಗಾಯದ ಆತಂಕವಿಲ್ಲ ಎಂದು ತಂಡದ ಮೂಲಗಳು ತಿಳಿಸಿವೆ.

ಪಿಂಕ್ ಟೆಸ್ಟ್ ಪಂದ್ಯಕ್ಕೆ ಸಮಯ ಕಡಿಮೆ ಇರುವುದರಿಂದ ಈಚೆಗೆ ತಂಡದ ಆಜಿಂಕ್ಯ ರಹಾನೆ, ಮಯಂಕ್ ಅಗರವಾಲ್, ಪೂಜಾರ, ಮೊಹಮ್ಮದ್ ಶಮಿ ಅವರಿಗೆ ಎನ್‌ಸಿಎದಲ್ಲಿ ಹೊನಲು ಬೆಳಕಿನಲ್ಲಿ ಅಭ್ಯಾಸ ಶಿಬಿರ ನಡೆಸಲಾಗಿತ್ತು.

ಇಂದೋರ್‌ನಲ್ಲಿ ಮಕ್ಕಳೊಂದಿಗೆ ಗಲ್ಲಿ ಕ್ರಿಕೆಟ್ ಆಡಿದ ವಿರಾಟ್ ಕೊಹ್ಲಿ –ಟ್ವಿಟರ್ ಚಿತ್ರ

ಗಲ್ಲಿ ಕ್ರಿಕೆಟ್ ಆಡಿದ ಕೊಹ್ಲಿ
ಇಂದೋರ್ ನಗರದ ಬಿಚೋಲಿ ಮರ್ದಾನಾ ಪ್ರದೇಶದ ಮಕ್ಕಳಿಗೆ ಮಂಗಳವಾರ ಹಬ್ಬದ ಸಂಭ್ರಮ. ಅದಕ್ಕೆ ಕಾರಣ ವಿರಾಟ್ ಕೊಹ್ಲಿ.

ತಮ್ಮ ನೆಚ್ಚಿನ ಆಟಗಾರ ವಿರಾಟ್ ಜೊತೆಗೆ ಗಲ್ಲಿ ಕ್ರಿಕೆಟ್ ಆಡುವ ಅವಕಾಶ ಇಲ್ಲಿಯ ಮಕ್ಕಳಿಗೆ ಲಭಿಸಿತ್ತು. ಜೀನ್ಸ್‌ ಮತ್ತು ಶರ್ಟ್‌ನಲ್ಲಿ ಕಣಕ್ಕಿಳಿದಿದ್ದ ಕೊಹ್ಲಿ ಮಕ್ಕಳೊಂದಿಗೆ ಬೆರೆತು ಮಕ್ಕಳಾದರು.

ಫೋಟೋ ಶೂಟ್ ಅಂಗವಾಗಿ ಮಕ್ಕಳೊಂದಿಗೆ ಗಲ್ಲಿ ಕ್ರಿಕೆಟ್ ಆಯೋಜಿಸಲಾಗಿತ್ತು. ಈ ವಿಡಿಯೊ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಸುದ್ದಿ ಮಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.