ಗಾಲ್: ಎರಡಗೈ ಸ್ಪಿನ್ ಮಾಂತ್ರಿಕ ರಂಗನಾ ಹೆರಾತ್ ಅವರಿಗೆ ಸಂಭ್ರಮದ ವಿದಾಯ ಹೇಳಲು ಶ್ರೀಲಂಕಾ ನಡೆಸಿದ ಪ್ರಯತ್ನಕ್ಕೆ ಕೊನೆಗೂ ಫಲ ಸಿಗಲಿಲ್ಲ. ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರು 211 ರನ್‌ಗಳಿಂದ ಸೋತರು.
ಮೊದಲ ಇನಿಂಗ್ಸ್‌ನಲ್ಲಿ ಶ್ರೀಲಂಕಾ 139 ರನ್‌ಗಳ ಹಿನ್ನಡೆ ಅನುಭವಿಸಿತ್ತು. ಪದಾರ್ಪಣೆ ಪಂದ್ಯದಲ್ಲಿ ಬೆನ್ ಫೋಕ್ಸ್ ಶತಕ ಗಳಿಸಿ ಮಿಂಚಿದ್ದರು. ಎರಡನೇ ಇನಿಂಗ್ಸ್‌ನಲ್ಲಿ ಕೀಟನ್ ಜೆನಿಂಗ್ಸ್ ಅವರ ಶಕತದ ನೆರವಿನಿಂದ ಇಂಗ್ಲೆಂಡ್ 322 ರನ್ ಗಳಿಸಿತ್ತು. 462 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಆತಿಥೇಯರು ನಾಲ್ಕನೇ ದಿನವಾದ ಶುಕ್ರವಾರ 250 ರನ್‌ಗಳಿಗೆ ಪತನ ಕಂಡರು.
ಆಫ್ ಸ್ಪಿನ್ನರ್ ಮೋಯಿನ್ ಅಲಿ ಮತ್ತು ಎಡಗೈ ಸ್ಪಿನ್ನರ್ ಜಾಕ್ ಲೀಚ್ ಜೋಡಿ ಶ್ರೀಲಂಕಾದ ಪತನಕ್ಕೆ ಪ್ರಮುಖ ಕಾರಣರಾದರು. ಮೊದಲ ಇನಿಂಗ್ಸ್‌ನಲ್ಲಿ ಅರ್ಧ ಶತಕ ಗಳಿಸಿದ್ದ ಏಂಜೆಲೊ ಮ್ಯಾಥ್ಯೂಸ್ ಎರಡನೇ ಇನಿಂಗ್ಸ್‌ನಲ್ಲೂ ಮಿಂಚಿದರು.
ಕುಶಾಲ್ ಮೆಂಡಿಸ್ 45 ರನ್ ಗಳಿಸಿದರು. ಉಳಿದ ಯಾರಿಗೂ ನಿರೀಕ್ಷೆಗೆ ತಕ್ಕ ಸಾಮರ್ಥ್ಯ ತೋರಲು ಆಗಲಿಲ್ಲ. ವೃತ್ತಿ ಜೀವನದ ಕೊನೆಯ ಇನಿಂಗ್ಸ್‌ನಲ್ಲಿ ರಂಗನಾ ಹೆರಾತ್ ಐದು ರನ್ ಗಳಿಸಿ ರನ್ ಔಟಾದರು.
ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್: 342 ಮತ್ತು 6ಕ್ಕೆ 322 ಡಿಕ್ಲೇರ್; ಶ್ರೀಲಂಕಾ: 203 ಮತ್ತು 250 (ಕುಶಾಲ್ ಸಿಲ್ವಾ 30, ಕುಶಾಲ್ ಮೆಂಡಿಸ್ 45, ಏಂಜೆಲೊ ಮ್ಯಾಥ್ಯೂಸ್ 53, ಕುಶಾಲ್ ಪೆರೇರ 30; ಮೋಯಿನ್ ಅಲಿ 71ಕ್ಕೆ4, ಲೀಚ್ 60ಕ್ಕೆ3). ಫಲಿತಾಂಶ: ಇಂಗ್ಲೆಂಡ್‌ಗೆ 211 ರನ್‌ಗಳ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.