ಲಾಹೋರ್: ಏಕದಿನ ಕ್ರಿಕೆಟ್ ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲಿ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ತಾಂತ್ರಿಕ ಸಮಿತಿಯಿಂದ ಹೊರ ನಡೆದಿದ್ದಾರೆ.
ಇತ್ತೀಚೆಗೆ ನಡೆದ ಏಷ್ಯಾ ಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ನೀರಸ ಪ್ರದರ್ಶನ ನೀಡಿತ್ತು. ಭಾರತ ಹಾಗೂ ಶ್ರೀಲಂಕಾ ತಂಡಗಳ ಎದುರು ಸೋಲು ಕಂಡಿತ್ತು. ಈ ಕುರಿತಂತೆ ನಡೆದ ಪುನರಾವಲೋಕನ ಸಭೆ ಬಳಿಕ ಹಫೀಜ್ ಹಫೀಜ್ ಈ ನಿರ್ಧಾರ ಕೈಗೊಂಡಿದ್ದಾರೆ.
'ನಾನು ಪಾಕಿಸ್ತಾನ ಕ್ರಿಕೆಟ್ ತಾಂತ್ರಿಕ ಸಮಿತಿಯಿಂದ ಹೊರನಡೆಯಲು ನಿರ್ಧರಿಸಿದ್ದೇನೆ. ಗೌರವ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ. ಅವಕಾಶ ಕಲ್ಪಿಸಿದ ಝಕಾ ಅಶ್ರಫ್ (ಪಿಸಿಬಿ ಮುಖ್ಯಸ್ಥ) ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅಗತ್ಯವಿದ್ದಾಗ ಸಲಹೆಗಳನ್ನು ನೀಡಲು ಸದಾ ಸಿದ್ಧನಿದ್ದೇನೆ. ಪಾಕಿಸ್ತಾನಕ್ಕೆ ನನ್ನ ಶುಭ ಹಾರೈಕೆ ಯಾವಾಗಲೂ ಇರಲಿದೆ' ಎಂದು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಅಶ್ರಫ್ ಕರೆದಿದ್ದ ಪುನರಾವಲೋಕನ ಸಭೆಗೆ ಹಫೀಜ್ ಅವರಲ್ಲದೆ, ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ, ಮುಖ್ಯ ಕೋಚ್ ಗ್ರಾಂಟ್ ಬ್ರಾಡ್‌ಬರ್ನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲ್ಮಾನ್ ನಾಸೆರ್, ಮಾಜಿ ನಾಯಕ ಮಿಶ್ಬಾ ಉಲ್ ಹಕ್ ಭಾಗಿಯಾಗಿದ್ದರು.
ಸಭೆ ಬಳಿಕ ವಿಶ್ವಕಪ್‌ಗೆ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದೆ. ಏಷ್ಯಾಕಪ್ ಟೂರ್ನಿ ವೇಳೆ ಗಾಯಗೊಂಡಿದ್ದ ವೇಗಿ ನಸೀಮ್ ಶಾ ಹಾಗೂ ಆಲ್‌ರೌಂಡರ್ ಫಹೀಮ್ ಅಶ್ರಫ್ ಬದಲು ಜಮಾನ್ ಖಾನ್ ಮತ್ತು ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರಿಗೆ ಮೀಸಲು ಆಟಗಾರರಾಗಿ ಸ್ಥಾನ ನೀಡಲಾಗಿದೆ.
ಭಾರತದ ಆತಿಥ್ಯದಲ್ಲಿ ನಡೆಯುಲಿರುವ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 5ರಂದು ಆರಂಭವಾಗಲಿದೆ.
ವಿಶ್ವಕಪ್‌ಗೆ ಪಾಕಿಸ್ತಾನ ತಂಡ
ಬಾಬರ್ ಅಜಮ್ (ನಾಯಕ), ಶದಾಬ್ ಖಾನ್ (ಉಪನಾಯಕ), ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಸೌದ್ ಶಕೀಲ್, ಅಬ್ದುಲ್ಲಾ ಶಫೀಕ್, ಇಫ್ತಿಕರ್ ಅಹ್ಮದ್, ಅಘಾ ಸಲ್ಮಾನ್, ಉಸಾಮ ಮಿರ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಹಸನ್ ಅಲಿ, ಮೊಹಮ್ಮದ್ ವಾಸಿಂ ಜೂನಿಯರ್, ಮೊಹಮ್ಮದ್ ನವಾಜ್,
ಮೀಸಲು ಆಟಗಾರರು: ಅಬ್ರಾರ್ ಅಹ್ಮದ್, ಜಮಾನ್ ಖಾನ್, ಮೊಹಮ್ಮದ್ ಹ್ಯಾರಿಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.