ಕೋಲ್ಕತ್ತ: ಭಾರತದ ಅಗ್ರ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿರುವ ಮೊಹಮ್ಮದ್ ಶಮಿ ಅವರ ಬಹುನಿರೀಕ್ಷಿತ ಪುನರಾಗಮನಕ್ಕೆ ವೇದಿಕೆ ಸಜ್ಜಾಗಿದೆ. ಅವರು ಬುಧವಾರ ಇಂದೋರ್‌ನಲ್ಲಿ ಮಧ್ಯಪ್ರದೇಶ ವಿರುದ್ಧ ನಡೆಯಲಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ ಬುಧವಾರ ತಿಳಿಸಿದೆ.
ಸುಮಾರು ಒಂದು ವರ್ಷದ ನಂತರ ಅವರು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಕಳೆದ ವರ್ಷದ ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್ ಸಂದರ್ಭದಲ್ಲಿ ಗಾಯಾಳಾದ ನಂತರ ಯಾವುದೇ ಟೂರ್ನಿಯಲ್ಲಿ ಆಡಿರಲಿಲ್ಲ. ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಪುನಃಶ್ಚೇತನ ಭಾಗವಾಗಿ ಆರೈಕೆಯಲ್ಲಿದ್ದರು.
‘ಭಾರತದ ಕ್ರಿಕೆಟ್ ಮತ್ತು ಬಂಗಾಳ ರಣಜಿ ಟ್ರೋಫಿ ತಂಡದ ಶಕ್ತಿತುಂಬಲು ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಪುನರಾಗಮನ ಮಾಡಲಿದ್ದಾರೆ. ಇಂದೋರ್‌ನಲ್ಲಿ ಬುಧವಾರ ಎಲೈಟ್ ಸಿ ಗುಂಪಿನ ಪಂದ್ಯದಲ್ಲಿ ಅವರು ಮಧ್ಯಪ್ರದೇಶ ವಿರುದ್ಧ ಆಡುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲಿದ್ದಾರೆ’ ಎಂದು ಸಿೆಬಿ ಕಾರ್ಯದರ್ಶಿ ನರೇಶ್ ಓಝಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿರುವ ಭಾರತ ತಂಡದ ಬೌಲಿಂಗ್ ಪಡೆಯು, ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವನ್ನು ಬಿಟ್ಟರೆ ಹೆಚ್ಚುಕಮ್ಮಿ ಅನನುಭವಿಗಳಿಂದ ಕೂಡಿದೆ. ಆಕಾಶ್ ದೀಪ್, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ ಮತ್ತು ಪ್ರಸಿದ್ಧಕೃಷ್ಣ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಅನುಭವ ಹೊಂದಿಲ್ಲ.
ಆಸ್ಟ್ರೇಲಿಯಾ ವಿರುದ್ಧ 2018–19ರ ಪ್ರವಾಸದಲ್ಲಿ ಭಾರತದ 2–1 ಚಾರಿತ್ರಿಕ ಸರಣಿ ಗೆಲುವಿನಲ್ಲಿ, 34 ವರ್ಷ ವಯಸ್ಸಿನ ಶಮಿ ಪಾತ್ರ ಪ್ರಮುಖವಾಗಿತ್ತು. ಅವರು 26.18 ಸರಾಸರಿಯಲ್ಲಿ 16 ವಿಕೆಟ್‌ಗಳನ್ನು ಬಾಚಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.