ದುಬೈ: ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ರ‍್ಯಾಂಕಿಂಗ್‌ನಲ್ಲಿ ಬೌಲರ್‌ಗಳ ವಿಭಾಗದಲ್ಲಿ ಅಗ್ರಸ್ಥಾನಕ್ಕೆ ಮರಳಿದ್ದಾರೆ.
ಈಚೆಗೆ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಬೌಲಿಂಗ್ ಮಾಡಿದರು. ಫೈನಲ್‌ನಲ್ಲಿ ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್ ಸೇರಿದಂತೆ ಒಟ್ಟು ಅರ್ಧಡಜನ್ ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡಿದ್ದರು. ಇದರಿಂದಾಗಿ ಅವರು ಅಗ್ರಸ್ಥಾನಕ್ಕೇರಿದರು. ಅವರ ಖಾತೆಯಲ್ಲಿ ಈಗ 694 ಅಂಕಗಳು ಇವೆ. ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ (678) ಅವರು ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.
ಸಿರಾಜ್ ಹೋದ ಜನವರಿಯಲ್ಲಿ ಕೆಲಕಾಲ ಅಗ್ರಸ್ಥಾನದಲ್ಲಿದ್ದರು. ನಂತರ ಅವರನ್ನು ಹ್ಯಾಜ್‌ಲ್‌ವುಡ್ ಹಿಂದಿಕ್ಕಿದ್ದರು. ಇದೀಗ ಹೈದರಾಬಾದ್ ಎಕ್ಸ್‌ಪ್ರೆಸ್ ಸಿರಾಜ್ ಎಂಟು ಸ್ಥಾನಗಳ ಬಡ್ತಿಯೊಂದಿಗೆ ಮೊದಲಿಗರಾಗಿದ್ದಾರೆ.
ಭಾರತದ ಜಸ್‌ಪ್ರೀತ್ ಬೂಮ್ರಾ ಅವರು ಎರಡು ಸ್ಥಾನಗಳ ಬಡ್ತಿ ಪಡೆದು 27ನೇ ಸ್ಥಾನಕ್ಕೆ ಹಾಗೂ ಹಾರ್ದಿಕ್ ಪಾಂಡ್ಯ ಅವರು 50ನೇ ಸ್ಥಾನಕ್ಕೇರಿದ್ದಾರೆ. ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಒಂಬತ್ತನೇ ಸ್ಥಾನಕ್ಕೇರಿದ್ದಾರೆ.
ಏಕದಿನ ಕ್ರಿಕೆಟ್ ಬ್ಯಾಟಿಂಗ್ ವಿಭಾಗದಲ್ಲಿ ಪಾಕಿಸ್ತಾನದ ಬಾಬರ್ ಆಜಂ ಪ್ರಥಮ ಹಾಗೂ ಭಾರತದ ಶುಭಮನ್ ಗಿಲ್ ದ್ವಿತೀಯ ಸ್ಥಾನದಲ್ಲಿ ಮುಂದುವರಿದಿದ್ದಾರೆ. ವಿರಾಟ್ ಕೊಹ್ಲಿ ಎಂಟನೇ ಹಾಗೂ ರೋಹಿತ್ ಶರ್ಮಾ ಹತ್ತನೇ ಸ್ಥಾನ ಗಳಿಸಿದ್ದಾರೆ.
ಆಲ್‌ರೌಂಡರ್ ವಿಭಾಗದಲ್ಲಿ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಮೊದಲ ಸ್ಥಾನದಲ್ಲಿದ್ದಾರೆ. ಅಫ್ಗಾನಿಸ್ತಾನದ ಮೊಹಮ್ಮದ್ ನಬಿ ಎರಡನೇ ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.