ನವದೆಹಲಿ: ಹಿಮ್ಮಡಿ ಗಾಯಕ್ಕೆ ಒಳಗಾಗಿರುವ ಭಾರತ ಕ್ರಿಕೆಟ್ ತಂಡದ ಹಿರಿಯ ವೇಗಿ ಮೊಹಮ್ಮದ್ ಶಮಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಆರಂಭವಾಗಲಿರುವ ಐಪಿಎಲ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಶಮಿ ಅವರಿಗೆ ಇಂಗ್ಲೆಂಡ್‌ನಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲೂ ಅವರು ಆಡುತ್ತಿಲ್ಲ. ಕಳೆದ ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಡಿದ್ದರು.
ಜನವರಿ ಕೊನೆಯ ವಾರದಲ್ಲಿ ಲಂಡನ್‌ನಲ್ಲಿ ಹಿಮ್ಮಡಿ ಗಾಯಕ್ಕೆ ಶಮಿ ಇಂಜೆಕ್ಷನ್ ಪಡೆದಿದ್ದರು. ಮೂರು ವಾರಗಳ ಬಳಿಕ ಸಣ್ಣ ಓಟದ ಮೂಲಕ ಮೈದಾನಕ್ಕೆ ಮರಳಬಹುದು ಎಂದು ವೈದ್ಯರು ಸೂಚಿಸಿದ್ದರು. ಆದರೆ, ಇಂಜೆಕ್ಷನ್‌ನಿಂದ ಅವರ ಗಾಯದ ಶಮನ ಆಗಿಲ್ಲ. ಈಗ ಉಳಿದಿರುವ ದಾರಿ ಶಸ್ತ್ರಚಿಕಿತ್ಸೆ ಒಂದೇ.. ಶಸ್ತ್ರಚಿಕಿತ್ಸೆಗಾಗಿ ಅವರು ಶೀಘ್ರದಲ್ಲೇ ಬ್ರಿಟನ್‌ಗೆ ತೆರಳಲಿದ್ದಾರೆ. ಐಪಿಎಲ್‌ನಲ್ಲಿ ಆಡುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.
24 ವಿಕೆಟ್ ಪಡೆಯುವ ಮೂಲಕ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ಫೈನಲ್‌ಗೇರುವಲ್ಲಿ ಶಮಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಹಿಮ್ಮಡಿ ಊರಲು ಸಾಧ್ಯವಾಗದಷ್ಟು ನೋವಿದ್ದರೂ ಆಟದ ಮೇಲೆ ಪರಿಣಾಮ ಬೀರದಂತೆ ನೋಡಿಕೊಂಡಿದ್ದರು.
ಟೆಸ್ಟ್‌ನಲ್ಲಿ 229, ಏಕದಿನ ಕ್ರಿಕೆಟ್‌ನಲ್ಲಿ 195 ಮತ್ತು ಟಿ20ಯಲ್ಲಿ 24 ವಿಕೆಟ್ ಪಡೆದಿರುವ ಅವರಿಗೆ ಇತ್ತೀಚೆಗೆ ಸರ್ಕಾರ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ.
ಅಕ್ಟೋಬರ್–ನವೆಂಬರ್ ತಿಂಗಳಲ್ಲಿ ತವರಿನಲ್ಲಿ ನಡೆಯಲಿರುವ ಬಾಂಗ್ಲಾದೇಶ–ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗಳಿಗೂ ಶಮಿ ಲಭ್ಯವಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
‘ಶಮಿ ನೇರ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಅದು ಎನ್‌ಸಿಎ ನಿರ್ಧಾರವಾಗಿದೆ. ಎರಡು ತಿಂಗಳ ವಿಶ್ರಾಂತಿ ಮತ್ತು ಗಾಯ ಶಮನಕ್ಕೆ ನೀಡಿದ ಇಂಜೆಕ್ಷನ್ ಕೆಲಸ ಮಾಡಿಲ್ಲ. ಅವರು ಭಾರತ ಕ್ರಿಕೆಟ್‌ನ ಆಸ್ತಿಯಾಗಿದ್ದು, ಆಸ್ಟ್ರೇಲಿಯಾದಲ್ಲಿ ನಡೆಯುವ ಸರಣಿಗೆ ಅವರ ಅಗತ್ಯವಿದೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.