ನವದೆಹಲಿ: ‘ಮೂರು ವರ್ಷಗಳ ಹಿಂದೆ ಐಪಿಎಲ್‌ನಲ್ಲಿ ವೈಫಲ್ಯ ಅನುಭವಿಸಿದಾಗ, ಕ್ರಿಕೆಟ್ ಬಿಡು ನಿನ್ನ ಅಪ್ಪನೊಂದಿಗೆ ಆಟೋರಿಕ್ಷಾ ಓಡಿಸಲು ಹೋಗೆಂದು ಜನರು ವ್ಯಂಗ್ಯವಾಡಿದ್ದರು. ಬಹಳ ನೊಂದಿದ್ದೆ. ಆದರೆ, ಮಹೇಂದ್ರಸಿಂಗ್ ಧೋನಿ ಹೇಳಿದ ಮಾತುಗಳು ಹೊಸ ಹುಮ್ಮಸ್ಸು ತುಂಬಿದವು. ಯಶಸ್ಸು ಒಲಿಯಿತು’ ಭಾರತ ಕ್ರಿಕೆಟ್ ತಂಡದ ಮಧ್ಯಮವೇಗದ ಬೌಲರ್ ಮೊಹಮ್ಮದ್ ಸಿರಾಜ್ ಮಾತುಗಳು ಇವು.
ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಅವರು ಹಿಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
2019ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸಿರಾಜ್ ಆಡಿದ್ದರು. ಅದರಲ್ಲಿ ಅವರು ಒಂಬತ್ತು ಪಂದ್ಯಗಳಲ್ಲಿ ಏಳು ವಿಕೆಟ್ ಮಾತ್ರ ಗಳಿಸಿದ್ದರು. ದುಬಾರಿಯೂ ಆಗಿದ್ದರು. ಆ ಋತುವಿನಲ್ಲಿ ಬೆಂಗಳೂರು ತಂಡವು ಆರು ತಂಡಗಳಲ್ಲಿ ಸೋಲಿನ ಕಹಿ ಅನುಭವಿಸಿತ್ತು. ಅದರಲ್ಲೂ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಎದುರು ಸಿರಾಜ್ ಬೌಲಿಂಗ್‌ನಲ್ಲಿ ಬ್ಯಾಟರ್‌ಗಳು ಐದು ಸಿಕ್ಸರ್ ಸಿಡಿಸಿದ್ದರು. ಕೇವಲ 2.2 ಓವರ್‌ಗಳಲ್ಲಿ 36 ರನ್‌ಗಳನ್ನು ಸಿರಾಜ್ ಕೊಟ್ಟಿದ್ದರು. ಎರಡು ಬೀಮರ್ ಕೂಡ ಎಸೆದಿದ್ದರು. ಅದರಿಂದಾಗಿ ನಾಯಕ ವಿರಾಟ್ ಕೊಹ್ಲಿಗೆಸಿರಾಜ್ ಬೌಲಿಂಗ್ ನಿಲ್ಲಿಸುವುದು ಅನಿವಾರ್ಯವಾಯಿತು.
‘ಆ ದಿನ ನಾನು ಎರಡು ಬೀಮರ್ ಹಾಕಿದಾಗ, ಜನರು ವ್ಯಂಗ್ಯವಾಡಿದ್ದರು. ಆಟೊ ಓಡಿಸಲು ಹೋಗಿಬಿಡು ಅಂದಿದ್ದರು. ಇನ್ನೂ ಬಹಳಷ್ಟು ನಿಂದಿಸಿದ್ದರು. ಆದರೆ ಈ ಹಂತದವರೆಗೂ ಬೆಳೆಯಲು ನಾನು ಪಟ್ಟ ಶ್ರಮವನ್ನು ಕಡೆಗಣಿಸಿದರೆಂಬ ಬೇಸರವಾಗಿತ್ತು. ಆದರೆ, ನಾನು ಆಯ್ಕೆಯಾದಾಗ ಮಹಿ ಭಾಯ್ (ಧೋನಿ) ಹೇಳಿದ್ದ ಮಾತನ್ನು ನೆನಪಿಸಿಕೊಂಡೆ. ಇವತ್ತು ನೀನು ಚೆನ್ನಾಗಿ ಆಡು ಜನರು ಹೊಗಳುತ್ತಾರೆ. ಅದೇ ಜನ ಕೆಟ್ಟದಾಗಿ ಆಡಿದಾಗ ಬೈಯ್ಯುತ್ತಾರೆ. ಅದೆಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳದೇ ಆಟದ ಮೇಲಷ್ಟೇ ಗಮನ ನೀಡು ಎಂದಿದ್ದರು. ಅವರ ಮಾತು ನಿಜ. ಯಾವ ಜನ ನಿಂದಿಸಿದ್ದರೋ ಅದೇ ಮಂದಿ ನಾನು ಚೆನ್ನಾಗಿ ಆಡಿದ್ದಾಗ ಹಾಡಿ ಹೊಗಳಿದ್ದರು’ ಎಂದು ಸಿರಾಜ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.