ನವದೆಹಲಿ: ಟೀಮ್ ಇಂಡಿಯಾದ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ಅವರಿಗೆ ಅವಕಾಶ ನೀಡಲಾಗಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.
ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರು ಗಾಯಗೊಂಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಜತೆಗೆ, ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವುದಿಲ್ಲ ಎನ್ನಲಾಗಿದೆ.
ವಿಪರೀತ ಬೆನ್ನುನೋವಿನಿಂದ ಬಳಲುತ್ತಿರುವ ಅವರಿಗೆ ಆರು ತಿಂಗಳು ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಆದ್ದರಿಂದ ಅವರು ವಿಶ್ವಕಪ್ ಟೂರ್ನಿಯಲ್ಲಿ ಆಡುವುದಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಈಚೆಗೆ ನಡೆದ ಆಸ್ಟ್ರೇಲಿಯಾ ಎದುರಿನ ಸರಣಿಯ ಪಂದ್ಯದಲ್ಲಿ ಅವರು ಆಡಿದ್ದರು. ಆದರೆ, ದಕ್ಷಿಣ ಆಫ್ರಿಕಾ ಎದುರಿನ ಮೊದಲ ಪಂದ್ಯದಲ್ಲಿ ಅವರು ಕಣಕ್ಕಿಳಿದಿರಲಿಲ್ಲ. ಅವರನ್ನು ಪರೀಕ್ಷಿಸಿದ್ದ ವೈದ್ಯರ ತಂಡವು ‘ಸ್ಟ್ರೆಸ್ ಫ್ರಾಕ್ಚರ್’ ಇರುವುದು ಬೆನ್ನುನೋವಿಗೆ ಕಾರಣ ಎಂದು ತಿಳಿಸಿದ್ದಾರೆ.
ಅವರು ತಮ್ಮ ಗಾಯದ ಆರೈಕೆಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಗೆ ಸೇರ್ಪಡೆಯಾಗಿದ್ದಾರೆ.
28 ವರ್ಷದ ಬೂಮ್ರಾ ವಿದೇಶಿ ನೆಲದಲ್ಲಿ ಭಾರತ ತಂಡದ ಗೆಲುವಿನ ರೂವಾರಿಯಾಗಿದ್ದಾರೆ. ಅದರಲ್ಲೂ ಚುಟುಕು ಕ್ರಿಕೆಟ್‌ನಲ್ಲಿ ‘ಡೆತ್ ಓವರ್’ ಪರಿಣತರಾಗಿರುವ ಬೂಮ್ರಾ ಯಾರ್ಕರ್‌ಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸುತ್ತಾರೆ.
ಈಗಾಗಲೇ ಆಲ್‌ರೌಂಡರ್ ರವೀಂದ್ರ ಜಡೇಜ ಅವರೂ ಗಾಯದಿಂದಾಗಿ ವಿಶ್ರಾಂತಿಯಲ್ಲಿದ್ದಾರೆ. ಅವರು ವಿಶ್ವಕಪ್ ಟೂರ್ನಿಯಲ್ಲಿ ಆಡುವುದಿಲ್ಲವೆಂದು ಮೂರು ವಾರಗಳ ಹಿಂದೆಯೇ ಖಚಿತವಾಗಿದೆ. ಇದೀಗ ಪ್ರಮುಖ ಬೌಲರ್ ಬೂಮ್ರಾ ಕೂಡ ಹೊರಬಿದ್ದಿರುವುದು ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮಾ ಅವರ ಚಿಂತೆಯನ್ನುಹೆಚ್ಚಿಸಿದೆ.
ಕೋವಿಡ್‌ನಿಂದ ಚೇತರಿಸಿಕೊಂಡಿರುವ ಮೊಹಮ್ಮದ್ ಶಮಿ ಹಾಗೂ ದೀಪಕ್ ಚಾಹರ್ ಅವರ ಮೇಲೆ ತಂಡವು ಈಗ ಹೆಚ್ಚು ಅವಲಂಬಿತವಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.