ADVERTISEMENT

ಐಪಿಎಲ್‌ನಲ್ಲಿ ಹಣಕ್ಕೇ ಹೆಚ್ಚು ಮಹತ್ವ, ಕ್ರಿಕೆಟ್‌ಗೆ ನಂತರದ ಸ್ಥಾನ: ಸ್ಟೇಯ್ನ್

ಪಿಟಿಐ
Published 2 ಮಾರ್ಚ್ 2021, 13:29 IST
Last Updated 2 ಮಾರ್ಚ್ 2021, 13:29 IST
ಡೇಲ್ ಸ್ಟೇಯ್ನ್ (ರಾಯಿಟರ್ಸ್ ಸಂಗ್ರಹ ಚಿತ್ರ)
ಡೇಲ್ ಸ್ಟೇಯ್ನ್ (ರಾಯಿಟರ್ಸ್ ಸಂಗ್ರಹ ಚಿತ್ರ)   

ಕೇಪ್‌ ಟೌನ್ (ದಕ್ಷಿಣ ಆಫ್ರಿಕಾ): ಐಪಿಎಲ್ ಟಿ20 ಟೂರ್ನಿಯಲ್ಲಿ ಹಣಕ್ಕೇ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಕ್ರಿಕೆಟ್‌ಗೆ ನಂತರದ ಸ್ಥಾನ ದೊರೆಯುತ್ತಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಡೇಲ್ ಸ್ಟೇಯ್ನ್ ಹೇಳಿದ್ದಾರೆ.

ಇದೇ ಕಾರಣಕ್ಕೆ ವಿಶ್ವದ ಅತಿ ದೊಡ್ಡ ಫ್ರಾಂಚೈಸಿ ಆಧಾರಿತ ಟಿ20 ಟೂರ್ನಿಯಲ್ಲಿ ನಿಯಮಿತವಾಗಿ ಭಾಗವಹಿಸುತ್ತಿಲ್ಲ ಎಂದೂ ಅವರು ಹೇಳಿದ್ದಾರೆ.

‘ಐಪಿಎಲ್‌ನಲ್ಲಿ ದೊಡ್ಡ ಸ್ಕ್ವಾಡ್‌ಗಳು, ದೊಡ್ಡ ಹೆಸರುಗಳು, ಆಟಗಾರರು ಗಳಿಸುವ ಮೊತ್ತದ ಬಗ್ಗೆ ಹಾಗೂ ಇಂಥ ವಿಚಾರಗಳ ಬಗ್ಗೆ ಹೆಚ್ಚು ಚರ್ಚೆಯಾಗುತ್ತದೆ. ಕೆಲವೊಮ್ಮೆ ಕ್ರಿಕೆಟ್‌ ಅನ್ನೇ ಮರೆಯಲಾಗುತ್ತದೆ’ ಎಂದು ಸ್ಟೇಯ್ನ್ ಹೇಳಿದ್ದಾರೆ. ಅವರು ಕಳೆದ ಬಾರಿ ಯುಎಎಇಯಲ್ಲಿ ನಡೆದ ಐಪಿಎಲ್‌ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿದ್ದರು.

ADVERTISEMENT

2021ರ ಐಪಿಎಲ್ ಟೂರ್ನಿಯಿಂದ ಹೊರಗುಳಿಯುತ್ತಿರುವುದಾಗಿಯೂ ವಿಶ್ವದ ಇತರ ಲೀಗ್‌ ಪಂದ್ಯಗಳಲ್ಲಿ ಭಾಗವಹಿಸುವುದಾಗಿಯೂ ಸ್ಟೇಯ್ನ್ ಅವರು ಜನವರಿಯಲ್ಲಿ ತಿಳಿಸಿದ್ದರು. ಈ ವರ್ಷದ ಐಪಿಎಲ್‌ ಹರಾಜಿನಲ್ಲಿ ಅವರನ್ನು ಕೈಬಿಡಲು ಆರ್‌ಸಿಬಿ ತೀರ್ಮಾನಿಸಿದ್ದೇ ಅವರ ನಿರ್ಧಾರದ ಮೇಲೆ ಪ್ರಭಾವ ಬೀರಿರಬಹುದು ಎನ್ನಲಾಗಿದೆ.

ಸ್ಟೇಯ್ನ್ ಅವರು 95 ಐಪಿಎಲ್‌ ಪಂದ್ಯಗಳನ್ನು ಆಡಿದ್ದು 97 ವಿಕೆಟ್ ಗಳಿಸಿದ್ದಾರೆ. 8 ರನ್‌ ನೀಡಿ 3 ವಿಕೆಟ್‌ ಕಬಳಿಸಿದ್ದು ಐಪಿಎಲ್‌ನಲ್ಲಿ ಅವರ ಗರಿಷ್ಠ ಸಾಧನೆಯಾಗಿದೆ.

ಪದೇಪದೇ ಗಾಯದ ಸಮಸ್ಯೆಗೆ ಒಳಗಾಗಿದ್ದರಿಂದ ಐಪಿಎಲ್‌ನ ಕಳೆದ ಮೂರು ಋತುಗಳಲ್ಲಿ 12 ಪಂದ್ಯಗಳಲ್ಲಷ್ಟೇ ಆಡುವುದು ಅವರಿಗೆ ಸಾಧ್ಯವಾಗಿತ್ತು.

ಪಾಕಿಸ್ತಾನ್ ಸೂಪರ್‌ ಲೀಗ್‌ನಲ್ಲಿ (ಪಿಎಸ್‌ಎಲ್) ‘ಕ್ವೆಟ್ಟಾ ಗ್ಲೇಡಿಯೇಟರ್ಸ್’ ಪ್ರತಿನಿಧಿಸುತ್ತಿರುವ ಸ್ಟೇಯ್ನ್ ಆಟಗಾರನಾಗಿ ಗುರುತಿಸುವ ವಿಶ್ವದ ಇತರ ಲೀಗ್‌ಗಳಲ್ಲಿ ಆಡುವುದಕ್ಕಾಗಿ ವಿರಮಿಸುತ್ತಿರುವುದಾಗಿ ಹೇಳಿದ್ದಾರೆ.

‘ಪಿಎಸ್‌ಎಲ್, ಶ್ರೀಲಂಕನ್ ಪ್ರೀಮಿಯರ್ ಲೀಗ್‌ನಂತಹ ಲೀಗ್‌ಗಳನ್ನು ಗಮನಿಸಿದರೆ ಅಲ್ಲಿ ಕ್ರಿಕೆಟ್‌ಗೆ ಮಹತ್ವ ನೀಡುವುದನ್ನು ನೀವು ಗಮನಿಸಬಹುದು’ ಎಂದು ಅವರು ಹೇಳಿದ್ದಾರೆ.

ಆದರೆ ಐಪಿಎಲ್‌ನಂತಹ ಲೀಗ್‌ಗಳಿಗೆ ತೆರಳಿದರೆ ಮುಖ್ಯ ವಿಷಯವೇ ಮರೆತು ಈ ಋತುವಿನಲ್ಲಿ ನೀವು ಎಷ್ಟು ಹಣಕ್ಕಾಗಿ ಹೋಗಿದ್ದೀರಿ ಎಂಬುದೇ ಮುಖ್ಯವಾಗುತ್ತದೆ ಎಂದು ಸ್ಟೇಯ್ನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.