ಬೆಂಗಳೂರು: ಮಣಿಪಾಲ್ ಆಸ್ಪತ್ರೆಗಳ ಸಮೂಹದ ನೆರವಿನಿಂದ ಕ್ಯಾನ್ಸರ್ ಜಯಿಸಿದ 20ಕ್ಕೂ ಅಧಿಕ ಮಂದಿ ಕುಟುಂಬದ ಸದಸ್ಯರೊಂದಿಗೆ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನುಡವಿನ ಐಪಿಎಲ್ ಪಂದ್ಯ ವೀಕ್ಷಿಸಿದರು.
ಆಸ್ಪತ್ರೆಗಳ ಸಮೂಹವು ವೈದ್ಯಕೀಯ ಸೇವೆಗೆ ಸಂಬಂಧಿಸಿದಂತೆ ಆರ್‌ಸಿಬಿ ಫ್ರಾಂಚೈಸಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕ್ಯಾನ್ಸರ್‌ನಿಂದ ಚೇತರಿಸಿಕೊಂಡವರಿಗೆ ವಿಶೇಷ ಅನುಭವ ಒದಗಿಸುವ ಉದ್ದೇಶದಿಂದ ಕುಟುಂಬದ ಸದಸ್ಯರೊಂದಿಗೆ ವೀಕ್ಷಣೆಗೆ ಆಸ್ಪತ್ರೆಯು ವ್ಯವಸ್ಥೆ ಮಾಡಿತ್ತು. 20 ಮಂದಿಯಲ್ಲಿ 8 ವರ್ಷದ ಹಾಗೂ 10 ವರ್ಷದ ಮಕ್ಕಳು ಕೂಡ ಇದ್ದರು. ಇಬ್ಬರು ಮಕ್ಕಳು ರಕ್ತ ಮತ್ತು ಮೂಳೆ ಕ್ಯಾನ್ಸರ್ ವಿರುದ್ಧ ಹೋರಾಡಿ ಚೇತರಿಸಿಕೊಂಡವರಾಗಿದ್ದಾರೆ.
‘ಕ್ಯಾನ್ಸರ್ ಪೀಡಿತರು ಚೇತರಿಸಿಕೊಳ್ಳುವ ಅವಧಿಯಲ್ಲಿ ಭಯ, ದುಃಖ, ಆತಂಕ ಮತ್ತು ಖಿನ್ನತೆಯನ್ನು ಅನುಭವಿಸುತ್ತಾರೆ. ಚೇತರಿಕೆಯ ನಂತರವೂ ಈ ಭಾವನೆಗಳು ಉಳಿಯುತ್ತವೆ. ಹೊಸ ಅವಕಾಶಗಳಿಗೆ ತೆರೆದುಕೊಳ್ಳಲು, ಮಾನಸಿಕವಾಗಿ ಸದೃಢವಾಗಲು ಅವರಲ್ಲಿನ ಭಯವನ್ನು ಹೋಗಲಾಡಿಸಬೇಕು. ಹೀಗಾಗಿ, ಆರ್‌ಸಿಬಿ ಫ್ರಾಂಚೈಸಿ ನೆರವಿನಿಂದ ಐಪಿಎಲ್ ಪಂದ್ಯಾವಳಿ ವೀಕ್ಷಣೆಗೆ ವಿಶೇಷ ಪ್ರವೇಶ ಕಲ್ಪಿಸಲಾಗಿತ್ತು’ ಎಂದು ಆಸ್ಪತ್ರೆ ಹೇಳಿದೆ.
‘ಕ್ಯಾನ್ಸರ್ ರೋಗ ಜಯಿಸಿದವರಿಗೆ ಮನೋರಂಜನೆ ಅಗತ್ಯ. ಐಪಿಎಲ್ ಪಂದ್ಯಾವಳಿ ವೀಕ್ಷಣೆಯಿಂದ ಕ್ಯಾನ್ಸರ್ ಜಯಿಸಿದವರಲ್ಲಿ ಹೊಸ ಉತ್ಸಾಹ ಮೂಡಿದೆ’ ಎಂದು ಮಣಿಪಾಲ್ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ತಿಕ್ ರಾಜಗೋಪಾಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.