ADVERTISEMENT

T20 ಕ್ರಿಕೆಟ್ | ದಾಖಲೆ ಬರೆದ ಮಂದಾನ–ಶೆಫಾಲಿ; ಇನ್ನಷ್ಟು ಸಾಧನೆಗಳ ಪಟ್ಟಿ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಅಕ್ಟೋಬರ್ 2024, 3:15 IST
Last Updated 10 ಅಕ್ಟೋಬರ್ 2024, 3:15 IST
<div class="paragraphs"><p> ಸ್ಮೃತಿ ಮಂದಾನ (ಎಡ) ಹಾಗೂ&nbsp;ಶೆಫಾಲಿ ವರ್ಮಾ</p></div>

ಸ್ಮೃತಿ ಮಂದಾನ (ಎಡ) ಹಾಗೂ ಶೆಫಾಲಿ ವರ್ಮಾ

   

ಪಿಟಿಐ ಚಿತ್ರ

ದುಬೈ: ಮಹಿಳೆಯರ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಶ್ರೀಲಂಕಾ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಭಾರತದ ಸ್ಮೃತಿ ಮಂದಾನ ಹಾಗೂ ಶೆಫಾಲಿ ವರ್ಮಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿ ಹಾಕಿಕೊಟ್ಟ ಭದ್ರ ಅಡಿಪಾಯದ ಮೇಲೆ ಸವಾಲಿನ ಮೊತ್ತ ಕಲೆಹಾಕಿದ ಟೀಂ ಇಂಡಿಯಾ, ಪಂದ್ಯವನ್ನು 82 ರನ್ ಅಂತರದಿಂದ ಗೆದ್ದುಕೊಂಡಿತು.

ADVERTISEMENT

ಇಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 172 ರನ್‌ ಗಳಿಸಿತು. ಸ್ಮೃತಿ ಹಾಗೂ ಶೆಫಾಲಿ ಮೊದಲ ವಿಕೆಟ್‌ಗೆ 12.4 ಓವರ್‌ಗಳಲ್ಲಿ 98 ರನ್ ಕಲೆಹಾಕಿದರು.

ಸ್ಮೃತಿ 38 ಎಸೆತಗಳಲ್ಲಿ 50 ರನ್ ಗಳಿಸಿದರೆ, ಶೆಫಾಲಿ 40 ಎಸೆತಗಳಲ್ಲಿ 46 ರನ್ ಗಳಿಸಿದರು. ನಂತರ ಬೀಸಾಟವಾಡಿದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌, ಕೇವಲ 27 ಎಸೆತಗಳಲ್ಲಿ 52 ರನ್ ಬಾರಿಸಿದರು.

ಈ ಗುರಿ ಬೆನ್ನತ್ತಿದ ಲಂಕಾ ಪಡೆ 90 ರನ್‌ ಗಳಿಸಿ, ಇನ್ನೂ ಒಂದು ಎಸೆತ ಬಾಕಿ ಇರುವಂತೆಯೇ ಆಲೌಟ್‌ ಆಯಿತು.

ಈ ಗೆಲುವಿನೊಂದಿಗೆ ಭಾರತ, 'ಎ' ಗುಂಪಿನ ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ. ಆಡಿರುವ ಮೂರು ಪಂದ್ಯಗಳ ಪೈಕಿ 2 ಗೆಲುವು ಸಾಧಿಸಿರುವ ಕೌರ್‌ ಪಡೆ, ಅಂತಿಮ ಪಂದ್ಯದಲ್ಲಿ (ಅಕ್ಟೋಬರ್ 13ರಂದು) ಆಸ್ಟ್ರೇಲಿಯಾದ ಸವಾಲು ಎದುರಿಸಲಿದೆ. ಸೆಮಿಫೈನಲ್‌ ತಲುಪಲು ಆ ಪಂದ್ಯ ಗೆಲ್ಲಲೇಬೇಕು. ಇಲ್ಲವಾದರೆ, ಇತರ ಪಂದ್ಯಗಳ ಫಲಿತಾಂಶಗಳು ಮುಂದಿನ ಹಾದಿಯನ್ನು ನಿರ್ಧರಿಸಲಿವೆ.

50ಕ್ಕಿಂತ ಅಧಿಕ ರನ್ ಜೊತೆಯಾಟ
ಈ ಪಂದ್ಯದಲ್ಲಿ ಅಮೋಘ ಅರ್ಧಶತಕ ಜೊತೆಯಾಟವಾಡಿದ ಭಾರತದ ಜೋಡಿ, ವರ್ಷವೊಂದರಲ್ಲಿ ಯಾವುದೇ ವಿಕೆಟ್‌ ಪಾಲುದಾರಿಕೆಯಲ್ಲಿ ಹೆಚ್ಚು ಸಲ 50ಕ್ಕಿಂತ ಅಧಿಕ ರನ್‌ ಕಲೆಹಾಕಿದ ಸಾಧನೆ ಮಾಡಿತು.

ಸ್ಮೃತಿ ಹಾಗೂ ಶೆಫಾಲಿ ಈ ವರ್ಷ 7 ಬಾರಿ ಅರ್ಧಶತಕ ಅಥವಾ ಅದಕ್ಕಿಂತ ಹೆಚ್ಚು ರನ್‌ಗಳ ಜೊತೆಯಾಟವಾಡಿದ್ದಾರೆ. ನ್ಯೂಜಿಲೆಂಡ್‌ನ ಸೂಝಿ ಬೆಟ್ಸ್‌, ಸೋಫಿ ಡಿವೈನ್‌ (2018), ಆಸ್ಟ್ರೇಲಿಯಾದ ಅಲಿಸ್ಸಾ ಹೀಲಿ, ಬೆಥ್‌ ಮೂನಿ (2018), ದಕ್ಷಿಣ ಆಫ್ರಿಕಾದ ತಝ್ಮಿನ್‌ ಬ್ರಿಟ್ಸ್‌, ಲೌರಾ ವಾಲ್ವಾರ್ಡ್ತ್‌ (2023) ಹಾಗೂ ಯುಎಇ ತಂಡದ ಕವಿಶಾ ಎಗೊಡೇಜ್‌, ಇಶಾ ಓಝ (2023) ಜೋಡಿ ಆರು ಸಲ ಅರ್ಧಶತಕದ ಜೊತೆಯಾಟವಾದಿದ್ದು ಇದುವರೆಗೆ ದಾಖಲೆಯಾಗಿತ್ತು.

ವರ್ಷವೊಂದರಲ್ಲಿ ಅತಿ ಹೆಚ್ಚು ರನ್‌
ಅರ್ಧಶತಕದ ಜೊತೆಯಾಟ ಮಾತ್ರವಲ್ಲದೆ, ಸ್ಮೃತಿ ಮತ್ತು ಶೆಫಾಲಿ ಜೋಡಿ ವರ್ಷವೊಂದರಲ್ಲಿ ಯಾವುದೇ ವಿಕೆಟ್‌ ಪಾಲುದಾರಿಕೆಯಲ್ಲಿ ಹೆಚ್ಚು ರನ್‌ ಕಲೆಹಾಕಿದ ದಾಖಲೆಯನ್ನೂ ಬರೆಯಿತು. ಇವರಿಬ್ಬರು ಈ ವರ್ಷ 825 ರನ್‌ಗಳನ್ನು ಜೊತೆಯಾಗಿ ಸೇರಿಸಿದ್ದಾರೆ. ಥಾಯ್ಲೆಂಡ್‌ನ ನರುಯೆಮಲ್ ಛೈವಾಯ್‌ ಹಾಗೂ ನಥಕನ್ ಚಾಂಥಮ್‌ ಜೋಡಿ 2019ರಲ್ಲಿ 723 ರನ್ ಕೂಡಿಸಿದ್ದು, ಮಹಿಳೆಯರ ಕ್ರಿಕೆಟ್‌ನಲ್ಲಿ ಈವರೆಗೆ ಶ್ರೇಷ್ಠ ಸಾಧನೆಯಾಗಿತ್ತು.

ವಿಶ್ವಕಪ್‌ನಲ್ಲಿ 500 ರನ್
ಟಿ20 ವಿಶ್ವಕಪ್‌ ಟೂರ್ನಿಗಳಲ್ಲಿ 500 ರನ್‌ ಕಲೆಹಾಕಿದ 3ನೇ ಭಾರತೀಯ ಬ್ಯಾಟರ್‌ ಎಂಬ ಶ್ರೇಯಕ್ಕೆ ಸ್ಮೃತಿ ಭಾಜನರಾದರು. ಇದಕ್ಕಾಗಿ ಅವರು 24 ಪಂದ್ಯಗಳಲ್ಲಿ ಬ್ಯಾಟ್‌ ಬೀಸಿದ್ದಾರೆ. ಮಾಜಿ ನಾಯಕಿ ಮಿಥಾಲಿ ರಾಜ್‌ (726) ಮತ್ತು ಹರ್ಮನ್‌ಪ್ರೀತ್‌ ಕೌರ್‌ (672) ಅವರು ಸ್ಮೃತಿಗಿಂತ ಮೊದಲೇ ಈ ಸಾಧನೆ ಮಾಡಿದ್ದಾರೆ.

ಒಟ್ಟಾರೆ ಈ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಸೂಝಿ ಬೆಟ್ಸ್‌ ಅಗ್ರ ಸ್ಥಾನದಲ್ಲಿದ್ದಾರೆ. 38 ಪಂದ್ಯಗಳಲ್ಲಿ 1,113 ರನ್‌ ಗಳಿಸಿರುವ ಅವರು, ವಿಶ್ವಕಪ್‌ನಲ್ಲೇ ಸಹಸ್ರ ರನ್ ಗಡಿ ದಾಟಿದ ಏಕೈಕ ಮಹಿಳಾ ಕ್ರಿಕೆಟರ್‌ ಎನಿಸಿದ್ದಾರೆ.

ಅತಿಹೆಚ್ಚು ಅರ್ಧಶತಕ
ಚುಟುಕು ಮಾದರಿಯ ಪಂದ್ಯಗಳಲ್ಲಿ ಹೆಚ್ಚು ಅರ್ಧಶತಕ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮಂದಾನ ಎರಡನೇ ಸ್ಥಾನಕ್ಕೆ ಏರಿದ್ದಾರೆ. 144 ಪಂದ್ಯಗಳ 138 ಇನಿಂಗ್ಸ್‌ಗಳಲ್ಲಿ ಅವರು 27 ಅರ್ಧಶತಕ ಸಿಡಿಸಿದ್ದಾರೆ. 167 ಪಂದ್ಯಗಳ 164 ಇನಿಂಗ್ಸ್‌ಗಳಲ್ಲಿ 29 ಸಲ 50ಕ್ಕಿಂತ ಹೆಚ್ಚು ರನ್‌ ಗಳಿಸಿರುವ ಸೂಝಿ ಬೆಟ್ಸ್‌ ಮೊದಲ ಸ್ಥಾನದಲ್ಲಿದ್ದಾರೆ.

ಸೂಝಿ (4,481) ಹಾಗೂ ಮಂದಾನ (3,562) ಈ ಮಾದರಿಯಲ್ಲಿ ರನ್‌ ಗಳಿಕೆಯಲ್ಲೂ ಮೊದಲೆರಡು ಸ್ಥಾನಗಳಲ್ಲಿ ಇದ್ದಾರೆ. ಹರ್ಮನ್‌ಪ್ರೀತ್‌ ಕೌರ್‌ (3,522) ಮೂರನೇಯವರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.