ADVERTISEMENT

ಧೋನಿಯನ್ನು ಎಲ್ಲ ಬೌಲರ್‌ಗಳು ಹೊಗಳುವುದೇಕೆ?: ಕಾರಣ ನೀಡಿದ ಪ್ರಗ್ಯಾನ್ ಓಜಾ

ಏಜೆನ್ಸೀಸ್
Published 10 ಮಾರ್ಚ್ 2020, 12:47 IST
Last Updated 10 ಮಾರ್ಚ್ 2020, 12:47 IST
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ (ಒಳಚಿತ್ರದಲ್ಲಿ ಪ್ರಗ್ಯಾಜ್‌ ಓಜಾ)
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ (ಒಳಚಿತ್ರದಲ್ಲಿ ಪ್ರಗ್ಯಾಜ್‌ ಓಜಾ)   

ಮುಂಬೈ: ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಸ್ಪಿನ್ನರ್‌ ಪ್ರಗ್ಯಾಜ್‌ ಓಜಾ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ.

2008ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಓಜಾ, 16 ವರ್ಷಗಳ ಕಾಲ ವೃತ್ತಿಪರ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿದ್ದರು. 2013ರ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾಗವಹಿಸದ್ದರೂ, 2019ರ ವರೆಗೆ ದೇಶಿ ಕ್ರಿಕೆಟ್‌ನಲ್ಲಿ ಆಡಿದ್ದರು. ಭಾರತ ಪರ 24 ಟೆಸ್ಟ್‌, 18 ಏಕದಿನ ಮತ್ತು 6 ಟಿ20 ಪಂದ್ಯ ಆಡಿರುವ ಸ್ಪಿನ್ನರ್‌, ಒಟ್ಟು 144 ವಿಕೆಟ್‌ ಉರುಳಿಸಿದ್ದರು.

ಕ್ರಿಕೆಟ್‌ಗೆ ವಿದಾಯ ಘೋಷಿಸಿದ ನಂತರ ಧೋನಿ ಬಗ್ಗೆ ಮಾತನಾಡಿರುವ ಅವರು, ಮಾಜಿ ನಾಯಕನನ್ನು ಬೌಲರ್‌ಗಳ ನಾಯಕ ಎಂದು ಕರೆದಿದ್ದಾರೆ.

ADVERTISEMENT

‘ಅವರು (ಧೋನಿ) ಬೌಲರ್‌ಗಳ ನಾಯಕ. ಒಬ್ಬ ಬೌಲರ್‌ ಅನ್ನು ಅರ್ಥಮಾಡಿಕೊಳ್ಳಬಲ್ಲ ನಾಯಕ ಇರಬೇಕು ಎಂಬುದನ್ನು ನಾನು ಬಲವಾಗಿ ನಂಬುತ್ತೇನೆ. ಧೋನಿ ನೀಡುತ್ತಿದ್ದ ವಿಭಿನ್ನ ಅವಕಾಶಗಳಿಂದಾಗಿ ಸಾಕಷ್ಟು ಬೌಲರ್‌ಗಳು ಅವರನ್ನು ಹೊಗಳುತ್ತಾರೆ. ಅಗತ್ಯಕ್ಕೆ ತಕ್ಕಂತೆ ಕ್ಷೇತ್ರ ರಕ್ಷಣೆಯಲ್ಲಿ ಬದಲಾವಣೆಗಳನ್ನು ಮಾಡುತ್ತಾರೆ. ಆ ಮೂಲಕ ಬೌಲರ್‌ಗಳು ಮುಕ್ತವಾಗಿ ಬೌಲಿಂಗ್ ಮಾಡುವಂತೆ ನೋಡಿಕೊಳ್ಳುತ್ತಾರೆ. ಮಹತ್ವದ ಪಂದ್ಯಗಳಲ್ಲಿ ಆಡುವಾಗ ಇದು ತುಂಬಾ ಮುಖ್ಯ’ ಎಂದು ಓಜಾ ವಿವರಿಸಿದ್ದಾರೆ.

ವೆಸ್ಟ್‌ ಇಂಡೀಸ್‌ ವಿರುದ್ಧ2013ರ ನವೆಂಬರ್‌ 14ರಿಂದ 18ರವರೆಗೆ ನಡೆದ ಪಂದ್ಯದ ಬಳಿಕಸಚಿನ್‌ ತೆಂಡೂಲ್ಕರ್‌ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ವಾಂಖೆಡೆ ಮೈದಾನದಲ್ಲಿ ನಡೆದಆ ಪಂದ್ಯವೇ ಪ್ರಗ್ಯಾನ್‌ ಓಜಾ ಅವರ ಪಾಲಿನ ಕೊನೆಯ ಟೆಸ್ಟ್‌ ಪಂದ್ಯ.

ಆ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ತಲಾ ಐದು ವಿಕೆಟ್‌ ಪಡೆದಿದ್ದ ಓಜಾ ಪಂದ್ಯಶ್ರೇಷ್ಠ ಎನಿಸಿದ್ದರು. ಧೋನಿ ಆ ಪಂದ್ಯದ ನಾಯಕರಾಗಿದ್ದರು.2019ರಏಕದಿನ ವಿಶ್ವಕಪ್‌ ಸೆಮಿಫೈನಲ್‌ ಸೋಲಿನ ಬಳಿಕ ಕ್ರಿಕೆಟ್‌ನಿಂದ ದೂರ ಉಳಿದಿರುವ ಧೋನಿ, ಈ ವರ್ಷ ನಡೆಯಲಿರುವ ಐಪಿಎಲ್‌ನಲ್ಲಿ ಚೆನ್ನೈ ತಂಡವನ್ನು ಮುನ್ನಡೆಸಲಿದ್ದಾರೆ.

ಧೋನಿ ಸಲಹೆ ನೆನಪಿಸಿಕೊಂಡಿದ್ದ ಬೂಮ್ರಾ
ಅಂತರರಾಷ್ಟ್ರೀಯ ಕ್ರಿಕೆಟ್‌ಗೆಪದಾರ್ಪಣೆಮಾಡಿದ ಸಂದರ್ಭದ ಬಗ್ಗೆ ಕ್ರೀಡಾ ತಾಣವೊಂದಕ್ಕೆ ನೀಡಿದಸಂದರ್ಶನದಲ್ಲಿ ಮಾತನಾಡಿದ್ದ ವೇಗಿ ಜಸ್‌ಪ್ರೀತ್‌ಬೂಮ್ರಾ, ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು ನೀಡಿದ ಸಲಹೆಯನ್ನು ಸ್ಮರಿಸಿದ್ದರು. ‘ಪದಾರ್ಪಣೆ ಪಂದ್ಯದ ವೇಳೆಯಾರೊಬ್ಬರೂ ನನ್ನ ಬಳಿ ಬಂದಿರಲಿಲ್ಲ ಮತ್ತು ಯಾವುದೇ ಸಲಹೆ ನೀಡಿರಲಿಲ್ಲ. ಆದರೆ, ಧೋನಿ ಮಾತ್ರ, ‘‘ನಿನ್ನಂತೆಯೇ ನೀನಿರು. ನಿನ್ನದೇ ರೀತಿಯಲ್ಲಿ ಆಟವನ್ನು ಖುಷಿಯಿಂದ ಅನುಭವಿಸು’’ ಎಂದಿದ್ದರು’ ಎಂದು ಹೇಳಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.