ADVERTISEMENT

ಧೋನಿಗೆ ನಿಷೇಧ ವಿಧಿಸಬೇಕಿತ್ತು ಎಂದ ಸೆಹ್ವಾಗ್‌

ಏಜೆನ್ಸೀಸ್
Published 14 ಏಪ್ರಿಲ್ 2019, 8:39 IST
Last Updated 14 ಏಪ್ರಿಲ್ 2019, 8:39 IST
   

ನವದೆಹಲಿ:ರಾಜಸ್ಥಾನ್ ರಾಯಲ್ಸ್‌ ಎದುರಿನಪಂದ್ಯವೊಂದರಲ್ಲಿ ನೋಬಾಲ್‌ ವಿಚಾರವಾಗಿ ಅಂಪೈರ್‌ಗಳೊಂದಿಗೆ ವಾಗ್ವಾದ ನಡೆಸಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಎಂ.ಎಸ್‌ ಧೋನಿ ಅವರಿಗೆ ನಿಷೇಧ ಹೇರಬೇಕಿತ್ತು ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್‌ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ‘ಧೋನಿಯನ್ನು ಸುಮ್ಮನೆ ಬಿಡಲಾಯಿತು. ಅವರಿಗೆ ಎರಡರಿಂದ ಮೂರು ಪಂದ್ಯಗಳಿಗೆ ನಿಷೇಧ ಹೇರಬೇಕಾಗಿತ್ತು. ಇಂದು ಧೋನಿ ಮಾಡಿರುವ ಕೆಲಸವನ್ನೇ ಮುಂದೆ ಬೇರೆ ತಂಡಗಳ ಕ್ಯಾಪ್ಟನ್‌ಗಳೂ ಮಾಡುವ ಸಾಧ್ಯತೆಗಳಿವೆ. ಹಾಗೇನಾದರೂ ಆದರೆ, ಆಟದಲ್ಲಿ ಅಂಪೈರ್‌ಗಳ ಪ್ರಾಧಾನ್ಯತೆ ಏನು? ಧೋನಿಗೆ ಶಿಕ್ಷೆ ವಿಧಿಸಿದ್ದರೆ ಭವಿಷ್ಯದಲ್ಲಿ ಎಲ್ಲರಿಗೂ ಪಾಠವಾಗುತ್ತಿತ್ತು’ ಎಂದು ವೀರೇಂದ್ರ ಸೆಹ್ವಾಗ್‌ ಹೇಳಿದ್ದಾರೆ. ಈ ಮೂಲಕ ಅವರು ಧೋನಿ ನಡೆಯನ್ನು ಖಂಡಿಸಿದ್ದಲ್ಲದೇ, ಶಿಕ್ಷೆ ವಿಧಿಸುವುದರ ಅಗತ್ಯವನ್ನೂ ಪ್ರತಿಪಾದಿಸಿದ್ದಾರೆ.

ಧೋನಿ ಅಂಪೈರ್‌ಗಳೊಂದಿಗೆ ಜಗಳ ಮಾಡಿಕೊಂಡ ನಂತರ ಅವರ ನಡೆಯನ್ನು ಹಲವು ಕ್ರಿಕೆಟಿಗರು ಟೀಕಿಸಿದ್ದರು. ಆದರೆ, ಟೀಂ ಇಂಡಿಯಾದಲ್ಲಿನ ಧೋನಿಯವರ ಒಂದು ಕಾಲದ ಸಹ ಆಟಗಾರರ್ಯಾರೂ ಈ ಬಗ್ಗೆ ಸೊಲ್ಲೆತ್ತಿರಲಿಲ್ಲ.

ADVERTISEMENT

ಧೋನಿಗೆ ಶಿಕ್ಷೆಯಾಗಬೇಕು ಎಂದು ಅಭಿಪ್ರಾಯ ತಿಳಿಸುವಾಗ ಸೆಹ್ವಾಗ್‌ ಎಲ್ಲಿಯೂ ಆಕ್ರೋಶಭರಿತರಾಗಿರಲಿಲ್ಲ. ಆದರೆ, ನಿರ್ದಿಷ್ಟ ತಪ್ಪಿಗೆ ಆಗಬೇಕಾದ ಶಿಕ್ಷೆಯನ್ನಷ್ಟೇ ಅವರು ಪ್ರತಿಪಾದಿಸಿದರು.

ಕಳೆದ ಗುರುವಾರ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ ಎದುರು ಚೆನ್ನೈ ತಂಡವು ನಾಲ್ಕು ವಿಕೆಟ್‌ಗಳಿಂದ ರೋಚಕ ಜಯ ಸಾಧಿಸಿತ್ತು.

ಆದರೆ, ಈ ಪಂದ್ಯದ ಕೊನೆಯ ಓವರ್‌ನಲ್ಲಿ ನಡೆದ ನಾಟಕೀಯ ಬೆಳವಣಿಗೆಯು ಹೆಚ್ಚು ಗಮನ ಸೆಳೆಯಿತು. ಚೆನ್ನೈನ ಮಿಚೆಲ್ ಸ್ಯಾಂಟನರ್ ಅವರಿಗೆ ರಾಜಸ್ಥಾನ್ ತಂಡದ ಬೆನ್ ಸ್ಟೋಕ್ಸ್‌ ಹಾಕಿದ ಎಸೆತವನ್ನು ಅಂಪೈರ್ ಉಲ್ಲಾಸ ಗಂಧೆ ಅವರು ನೋಬಾಲ್ ಎಂದು ಸಂಜ್ಞೆ ಮಾಡಿದ್ದರು.

ಆದರೆ ಸ್ಕ್ವೆರ್‌ ಲೆಗ್‌ ಅಂಪೈರ್ ಆಕ್ಸೆನ್‌ಫೋರ್ಡ್ ಅವರು ನೋಬಾಲ್ ನಿರಾಕರಿಸಿದ್ದರು. ಈ ಸಂದರ್ಭದಲ್ಲಿ ಚೆನ್ನೈ ಬ್ಯಾಟ್ಸ್‌ಮನ್ ರವೀಂದ್ರ ಜಡೇಜ ಅವರು ಅಂಪೈರ್ ಜೊತೆಗೆ ವಾಗ್ವಾದಕ್ಕಿಳಿದರು. ಇದೇ ಸಂದರ್ಭದಲ್ಲಿ ಡಗ್‌ಔಟ್‌ನಲ್ಲಿದ್ದ ಧೋನಿ ಮೈದಾನಕ್ಕೆ ಧಾವಿಸಿ ಅಂಪೈರ್‌ಗಳ ಜೊತೆಗೆ ವಾದಕ್ಕಿಳಿದರು. ಇದು ನಿಯಮದ ಉಲ್ಲಂಘನೆಯಾಗಿತ್ತು.

ಐಸಿಸಿ ನೀತಿಸಂಹಿತೆ ಐಪಿಎಲ್‌ಗೂ ಅನ್ವಯವಾಗುತ್ತದೆ. ಅಂಪೈರ್‌ ತೀರ್ಪಿಗೆ ಆಟಗಾರರು ತಕರಾರು ವ್ಯಕ್ತಪಡಿಸಿದರೆ ಒಂದು ಅಥವಾ ಎರಡು ಪಂದ್ಯಗಳ ನಿಷೇಧ ಹೇರುವ ಅವಕಾಶಗಳಿದ್ದವು. ಆದರೆ, ಧೋನಿಗೆ ನಿಷೇಧ ವಿಧಿಸದೇ, ಪಂದ್ಯದ ಶೇ.50ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಗಿತ್ತು.

ಇನ್ನಷ್ಟು:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.