ADVERTISEMENT

'ನಾಯಕ'ನ ನೆನಪಿನಂಗಳ | ವೃತ್ತಿ ಬದುಕಿನ ಆ ಎರಡು ಸಂದರ್ಭಗಳನ್ನು ಮರೆಯಲಾರೆ: ಧೋನಿ

ಏಜೆನ್ಸೀಸ್
Published 29 ನವೆಂಬರ್ 2019, 8:44 IST
Last Updated 29 ನವೆಂಬರ್ 2019, 8:44 IST
ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ
ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ   

ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಿದ ಅತ್ಯಂತ ಯಶಸ್ವಿ ನಾಯಕ ಎಂಬುದರಲ್ಲಿ ಸಂಶಯವಿಲ್ಲ. ಅವರ ನೇತೃತ್ವದಲ್ಲಿ ಭಾರತವು ಐಸಿಸಿಯ ಪ್ರತಿಷ್ಠಿತ ಮೂರೂ ಪ್ರಶಸ್ತಿಗಳನ್ನು(ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಹಾಗು ಚಾಂಪಿಯನ್ಸ್ ಟ್ರೋಫಿ) ಜಯಿಸಿತ್ತು. ಈ ಸಾಧನೆ ಮಾಡಿದ ವಿಶ್ವದ ಏಕೈಕ ನಾಯಕ ಎಂಬ ಶ್ರೇಯವೂ ಅವರದ್ದು.

ದಶಕಗಳ ಕಾಲ ತಂಡ ಮುನ್ನಡೆಸಿದ್ದ ಧೋನಿ ಸಾಕಷ್ಟು ಸ್ಮರಣೀಯ ನೆನಪುಗಳನ್ನು ಕಟ್ಟಿಕೊಟ್ಟಿದ್ದಾರೆ. ಆದರೆ, ಅವರ ಪಾಲಿನ ಮರೆಯಲಾಗದ ಕ್ಷಣಗಳು ಯಾವುವು ಗೊತ್ತೇ? ಆ ಬಗ್ಗೆ ಪಿಟಿಐ ಜೊತೆಗಿನ ಮಾತುಕತೆ ವೇಳೆ ಸ್ವತಃ ಹೇಳಿಕೊಂಡಿದ್ದಾರೆ ಧೋನಿ.

ವೃತ್ತಿಜೀವನದ ಎಂದೂ ಮರೆಯಲಾಗದ ಎರಡು ಸಂದರ್ಭ ಯಾವುವು? ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, 2007ರಲ್ಲಿ ಟಿ20 ವಿಶ್ವಕಪ್ ಗೆದ್ದು ತವರಿಗೆ ಮರಳಿದಾಗ ಸಿಕ್ಕ ಸ್ವಾಗತ ಮತ್ತು 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯವು ಕೊನೆಯ ಹಂತ ತಲುಪಿದ್ದಾಗ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಿರ್ಮಾಣವಾಗಿದ್ದ ರೋಮಾಂಚನಕಾರಿ ವಾತಾವರಣವನ್ನು ಮರೆಯಲಾರೆ ಎಂದಿದ್ದಾರೆ.

ADVERTISEMENT

'ನಾನು ಇಲ್ಲಿ ಎರಡು ಘಟನೆಗಳನ್ನು ಉಲ್ಲೇಖಿಸಲು ಬಯಸುತ್ತೇನೆ. ಮೊದಲ ಸಂಗತಿ, 2007ರಲ್ಲಿ ಟಿ20 ವಿಶ್ವಕಪ್ ಗೆದ್ದು, ನಾವು ಭಾರತಕ್ಕೆ ಹಿಂತಿರುಗಿದ್ದೆವು. ಮುಂಬೈನ ಮರೀನ್ ಡ್ರೈವ್ ಬಳಿ ತೆರೆದ ಬಸ್ ನಲ್ಲಿ ಸಾಗಿದ್ದೆವು. ಸುತ್ತಲೂ ಜನರು ಕಿಕ್ಕಿರಿದು ತುಂಬಿದ್ದರು. ಎಲ್ಲರ ಮುಖದಲ್ಲಿದ್ದ ನಗುವನ್ನು ನೋಡಿ ಸಂತಸಗೊಂಡಿದ್ದೆವು. ಏಕೆಂದರೆ, ಅಲ್ಲಿದ್ದ ಎಷ್ಟೋ ಜನರು, ತಮ್ಮ ವಿಮಾನಗಳನ್ನು(ಪ್ರಯಾಣವನ್ನು ಅರ್ಧಕ್ಕೆ) ಬಿಟ್ಟು ಬಂದಿದ್ದಿರಬಹದು. ತುಂಬಾ ಮುಖ್ಯ ಕೆಲಸಕ್ಕೆ ಹೋಗಬೇಕಿದ್ದವರು ಅಲ್ಲಿದ್ದರು. ಅಂತಹ ಹಲವು ಬಗೆಯ ಜನರಿಂದ ನಮಗೆ ಭವ್ಯ ಸ್ವಾಗತ ಸಿಕ್ಕಿತ್ತು. ಇಡೀ ಮರೀನ್ ಡ್ರೈವ್ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಜನರಿಂದ ತುಂಬಿಹೋಗಿತ್ತು' ಎಂದು ಧೋನಿ ಹೇಳಿಕೊಂಡಿದ್ದಾರೆ.

'ಮತ್ತೊಂದು, 2011ರ ವಿಶ್ವಕಪ್ ಫೈನಲ್ ಪಂದ್ಯ ಎಂದು ಹೇಳಲು ಬಯಸುತ್ತೇನೆ. ಪಂದ್ಯ ಮುಗಿಸಲು ನಮಗೆ ಇನ್ನು 15-20 ರನ್ ಬೇಕಿದ್ದಾಗ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ವಂದೇ ಮಾತರಂ ಹಾಡಲು ಆರಂಭಿಸಿದ್ದರು.'

'ಈ ಎರಡು ಸಂದರ್ಭಗಳು ಮರುಕಳಿಸುವುದುಅಸಾಧ್ಯ. ಈ ಸಂಗತಿಗಳು ನನ್ನ ಹೃದಯಕ್ಕೆ ತುಂಬಾ ಹತ್ತಿರದವು' ಎಂದಿದ್ದಾರೆ.

2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ದಕ್ಷಿಣ ಆಫ್ರಿಕಾದಲ್ಲಿ ಆಯೋಜನೆಗೊಂಡಿತ್ತು. ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ, ಆರಂಭಿಕ ಗೌತಮ್ ಗಂಭೀರ್(75) ಅರ್ಧ ಶತಕದ ಬಲದಿಂದ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತ್ತು. ಸಾಧಾರಣ ಗುರಿ ಎದುರು ಕೊನೆಯ ಓವರ್ ವರೆಗೂ ಹೋರಾಡಿದ್ದ ಪಾಕ್ ಮೂರು ಎಸೆತಗಳು ಬಾಕಿ ಇರುವಂತೆಯೇ ಆಲೌಟ್ ಆಗಿತ್ತು. ಐದು ರನ್‌ಗಳ ಅಲ್ಪ ಅಂತರದಿಂದ ಗೆದ್ದಿದ್ದ ಟೀಂ ಇಂಡಿಯಾ ಮೊದಲ ಟಿ20 ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿತ್ತು.

2011ರ ವಿಶ್ವಕಪ್ ಫೈನಲ್‌ನಲ್ಲಿ (ಏಪ್ರಿಲ್‌ 2ರಂದು) ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಶ್ರೀಲಂಕಾ, ನಿಗದಿತ 50 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 275 ರನ್ ಕಲೆಹಾಕಿತ್ತು. ಸವಾಲಿನ ಗುರಿ ಬೆನ್ನತ್ತಿದ್ದ ಭಾರತಕ್ಕೆ ಗೌತಮ್ ಗಂಭೀರ್ ಹಾಗೂ ಮಹೇಂದ್ರ ಸಿಂಗ್ ಧೋನಿ ನೆರವಾಗಿದ್ದರು. ತಾಳ್ಮೆಯಿಂದ ಆಡಿದ್ದ ಗಂಭೀರ್ 122 ಎಸೆತಗಳಲ್ಲಿ 9 ಬೌಂಡರಿ ಸಹಿತ 97 ರನ್ ಗಳಿಸಿದರೆ, ಬೀಸಾಟಕ್ಕೆ ಒತ್ತು ಕೊಟ್ಟಿದ್ದ ಧೋನಿ 79 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿ ಅಜೇಯ 92 ರನ್ ಚಚ್ಚಿದ್ದರು. ಹೀಗಾಗಿ ಧೋನಿ ಪಡೆ 48.2ನೇ ಓವರಿನಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 277 ರನ್ ಗಳಿಸಿ ಗೆಲುವಿನ ನಗೆ ಬೀರಿತ್ತು. ಇದರೊಂದಿಗೆ ಭಾರತವು 28 ವರ್ಷಗಳ ನಂತರ ಎರಡನೇ ಸಲ ಏಕದಿನ ವಿಶ್ವಕಪ್‌ ಎತ್ತಿ ಹಿಡಿದು ವಿಶ್ವವಿಜೇತ ಎನಿಸಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.