ADVERTISEMENT

IPL 2024: ಮುಂಬೈ ಇಂಡಿಯನ್ಸ್ ನಾಯಕ ಪಟ್ಟ; ರೋಹಿತ್ ಸ್ಥಾನಕ್ಕೆ ಹಾರ್ದಿಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಡಿಸೆಂಬರ್ 2023, 12:53 IST
Last Updated 15 ಡಿಸೆಂಬರ್ 2023, 12:53 IST
<div class="paragraphs"><p>ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ</p></div>

ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ

   

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿದೆ.

ತಂಡವು ಐದು ಸಲ ಪ್ರಶಸ್ತಿ ಜಯಿಸಿದಾಗಲೂ ನಾಯಕರಾಗಿದ್ದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಲಾಗಿದೆ.

ADVERTISEMENT

ಕಳೆದ ಎರಡು ಆವೃತ್ತಿಗಳಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕರಾಗಿದ್ದ ಹಾರ್ದಿಕ್ ಅವರನ್ನೂ ಹೋದ ತಿಂಗಳಷ್ಟೇ ನಡೆದಿದ್ದ ಟ್ರೇಡ್‌ನಲ್ಲಿ ಮುಂಬೈ ತಂಡವು ಸೇರ್ಪಡೆ ಮಾಡಿಕೊಂಡಿತ್ತು.

‘ನಾಯಕತ್ವದ ಬದಲಾವಣೆಯು ನಮ್ಮ ಫ್ರ್ಯಾಂಚೈಸಿಯ ಭವಿಷ್ಯದ ಯೋಜನೆಯ ಭಾಗವಾಗಿದೆ. ರೋಹಿತ್ ಅವರ ಅತ್ಯದ್ಭುತವಾದ ನಾಯಕತ್ವ ಮತ್ತು ನೀಡಿರುವ ಸೇವೆಗೆ ಆಭಾರಿಯಾಗಿದ್ದೇವೆ. ಮುಂಬೈ ತಂಡಕ್ಕೆ ಮೊದಲಿನಿಂದಲೂ ಖ್ಯಾತನಾಮ ಆಟಗಾರರ ನಾಯಕತ್ವ ಲಭಿಸಿರುವುದು ಸೌಭಾಗ್ಯವೇ ಸರಿ. ಸಚಿನ್ ತೆಂಡೂಲ್ಕರ್, ಹರಭಜನ್ ಸಿಂಗ್‌, ರಿಕಿ ಪಾಂಟಿಂಗ್ ಮತ್ತು ರೋಹಿತ್ ಅವರು ತಂಡವನ್ನು ಬಲಿಷ್ಠಗೊಳಿಸಿದ್ದಾರೆ’ ಎಂದು ಫ್ರ್ಯಾಂಚೈಸಿಯು ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ರೋಹಿತ್ 2013ರಿಂದ ಮುಂಬೈ ತಂಡಕ್ಕೆ ನಾಯಕರಾಗಿದ್ದರು. ತಂಡವು ಅದೇ ವರ್ಷ ಮೊದಲ ಬಾರಿಗೆ ಚಾಂಪಿಯನ್ ಆಗಿತ್ತು. 2015, 2017, 2019 ಮತ್ತು 2020ರಲ್ಲಿಯೂ ಪ್ರಶಸ್ತಿ ಗೆದ್ದಿತ್ತು. ಹೋದ ಆವೃತ್ತಿಯಲ್ಲಿ ತಂಡವು ಪ್ಲೇ ಆಫ್‌ ಪ್ರವೇಶಿಸಿತ್ತು.

‘ಹಾರ್ದಿಕ್ ನಾಯಕತ್ವವನ್ನು ಸ್ವಾಗತಿಸುತ್ತೇನೆ. ಇದು ಮುಂಬೈ ತಂಡದ ಪರಂಪರೆ ಮತ್ತು ಭವಿಷ್ಯದ ದೃಷ್ಟಿಯಿಂದ ಮಹತ್ವದ ಭಾಗವಾಗಿದೆ’ ಎಂದು ಫ್ರ್ಯಾಂಚೈಸಿಯ ಗ್ಲೋಬಲ್ ಮುಖ್ಯಸ್ಥ ಮಹೇಲಾ ಜಯವರ್ಧನೆ ಹೇಳಿದ್ದಾರೆ.

‘ರೋಹಿತ್ ನಾಯಕತ್ವವು ಯುವ ಆಟಗಾರರಿಗೆ ಮಾರ್ಗದರ್ಶಿಯಾಗಿದೆ. ಅವರು ಮಾಡಿರುವ ದಾಖಲೆಯೇ ಒಂದು ಮೈಲುಗಲ್ಲು. ಮುಂಬೈ ಇಂಡಿಯನ್ಸ್‌ ತಂಡವನ್ನು ಮತ್ತಷ್ಟು ಸಬಲಗೊಳಿಸಲು ಅವರು ಮುಂದೆಯೂ ಮಾರ್ಗದರ್ಶನ ನೀಡಲಿದ್ದಾರೆ’ ಎಂದಿದ್ದಾರೆ.

ರೋಹಿತ್ ಭಾರತ ಟೆಸ್ಟ್ ಮತ್ತು ಏಕದಿನ ತಂಡದ ನಾಯಕರಾಗಿದ್ದಾರೆ. ಈಚೆಗೆ ಅವರ ನಾಯಕತ್ವದಲ್ಲಿ ಭಾರತ ತಂಡವು ವಿಶ್ವಕಪ್ ಫೈನಲ್ ಪ್ರವೇಶಿಸಿತ್ತು.

ಮುಂಬೈ ತಂಡವು ಐಪಿಎಲ್ ಆರಂಭದಿಂದಲೂ ಇದೆ. ಚೆನ್ನೈ ಸೂಪರ್ ಕಿಂಗ್ಸ್ ಬಿಟ್ಟರೆ ಅತ್ಯಂತ ಯಶಸ್ವಿ ತಂಡ ಇದಾಗಿದೆ. ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಕೂಡ ಐದು ಸಲ ಪ್ರಶಸ್ತಿ ಜಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.