ADVERTISEMENT

IPL 2024 RCB vs MI: ಇಶಾನ್ –ಸೂರ್ಯ ಅರ್ಧಶತಕ, ಆರ್‌ಸಿಬಿ ವಿರುದ್ಧ ಮುಂಬೈಗೆ ಜಯ

ಜಸ್‌ಪ್ರೀತ್ ಬೂಮ್ರಾಗೆ 5 ವಿಕೆಟ್‌ * ಮಿಂಚಿದ ಇಶಾನ್‌ ಕಿಶಾನ್, ಬೆಳಗಿದ ಸೂರ್ಯ

ಪಿಟಿಐ
Published 11 ಏಪ್ರಿಲ್ 2024, 17:49 IST
Last Updated 11 ಏಪ್ರಿಲ್ 2024, 17:49 IST
<div class="paragraphs"><p>ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವೈಶಾಖ ವಿಜಯಕುಮಾರ್ ವಿಕೆಟ್ ಪಡೆದ ಸಂಭ್ರಮವನ್ನು ಜಸ್‌ಪ್ರೀತ್ ಬೂಮ್ರಾ ಅವರು ಸಹ ಆಟಗಾರ ರೋಹಿತ್ ಶರ್ಮಾ ಅವರೊಂದಿಗೆ ಹಂಚಿಕೊಂಡರು.</p></div>

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವೈಶಾಖ ವಿಜಯಕುಮಾರ್ ವಿಕೆಟ್ ಪಡೆದ ಸಂಭ್ರಮವನ್ನು ಜಸ್‌ಪ್ರೀತ್ ಬೂಮ್ರಾ ಅವರು ಸಹ ಆಟಗಾರ ರೋಹಿತ್ ಶರ್ಮಾ ಅವರೊಂದಿಗೆ ಹಂಚಿಕೊಂಡರು.

   

ಮುಂಬೈ: ಇಶಾನ್ ಕಿಶಾನ್ ಮತ್ತು ರೋಹಿತ್‌ ಶರ್ಮಾ ಅವರು ಶತಕದ ಜೊತೆಯಾಟದಿಂದ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟ ನಂತರ ಸೂರ್ಯಕುಮಾರ್ ಯಾದವ್ ಕೇವಲ 19 ಎಸೆತಗಳಲ್ಲಿ 52 ರನ್ ಬಾರಿಸಿದರು. ಅವರ ವೈಭವದ ಆಟದಿಂದ ಮುಂಬೈ ತಂಡ, ಗುರುವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್‌ ಮಾಡಲು ಕಳುಹಿಸಲ್ಪ‍ಟ್ಟ ಆರ್‌ಸಿಬಿ 8 ವಿಕೆಟ್‌ಗೆ 196 ರನ್ ಗಳಿಸಿತು. ಈ ಮೊತ್ತ ಲೆಕ್ಕವೇ ಅಲ್ಲ ಎನ್ನುವಂತೆ ಆಡಿದ ಮುಂಬೈ ಇಂಡಿಯನ್ಸ್‌ ಇನ್ನೂ 27 ಎಸೆತಗಳು ಉಳಿದಿರುವಂತೆಯೇ 3 ವಿಕೆಟ್‌ ನಷ್ಟದಲ್ಲಿ 199 ರನ್ ಗಳಿಸಿತು.

ADVERTISEMENT

ಮುಂಬೈ ವೇಗಿ ಜಸ್‌ಪ್ರೀತ್ ಬೂಮ್ರಾ 21 ರನ್ನಿಗೆ 5 ವಿಕೆಟ್‌ ಪಡೆದಿದ್ದು ಕಡಿಮೆ ಸಾಧನೆಯೇನೂ ಆಗಿರಲಿಲ್ಲ. ಅವರಿಗೆ ಎರಡು ಬಾರಿ ಹ್ಯಾಟ್ರಿಕ್ ಅವಕಾಶ ತಪ್ಪಿತು. ಐದು ವಿಕೆಟ್‌ ಗೊಂಚಲಲ್ಲಿ ವಿರಾಟ್‌ ಕೊಹ್ಲಿ ವಿಕೆಟ್‌ ಸಹ ಒಳಗೊಂಡಿತ್ತು.

ಇದು ಬೆಂಗಳೂರಿನ ತಂಡಕ್ಕೆ ಆರು ಪಂದ್ಯಗಳಲ್ಲಿ ಐದನೇ ಸೋಲು.

ರೋಹಿತ್‌ ಶರ್ಮಾ ಮತ್ತು ಇಶಾನ್ ಕಿಶನ್ (69, 34ಎ, 4x7, 6x5) ಮೊದಲ ವಿಕೆಟ್‌ಗೆ ಕೇವಲ 52 ಎಸೆತಗಳಲ್ಲಿ 101 ರನ್ ಸೇರಿಸಿದಾಗಲೇ ಪಂದ್ಯ ಬಹುತೇಕ ಆರ್‌ಸಿಯ ಕೈಜಾರಿತ್ತು. ಟಿ20ಯಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಸೂರ್ಯಕುಮಾರ್ ನಂತರ ಎದುರಾಳಿ ತಂಡದ ದುರ್ಬಲ ದಾಳಿಯನ್ನು ಹಿಗ್ಗಾಮುಗ್ಗ ದಂಡಿಸಿದರು. 5 ಬೌಂಡರಿ, 4 ಸಿಕ್ಸರ್‌ಗಳನ್ನೆತ್ತಿ ತಂಡವನ್ನು ಗೆಲುವಿನ ಬಳಿ ತಂದು ನಿಲ್ಲಿಸಿದರು. ಆಕಾಶ್‌ ದೀಪ್‌ ಮಾಡಿದ ಇನಿಂಗ್ಸ್‌ನ 16ನೇ ಓವರ್‌ನ ಮೂರನೇ ಎಸೆತವನ್ನು ಡೀಪ್‌ ಕವರ್ಸ್‌ ಮೇಲೆ ಸಿಕ್ಸರ್ ಎತ್ತಿದ ನಾಯಕ ಹಾರ್ದಿಕ್ ಪಾಂಡ್ಯ (6 ಎಸೆತಗಳಲ್ಲಿ 21) ಅವರು ಗೆಲುವಿನ ವಿಧಿಯನ್ನು ಪೂರೈಸಿದರು.

ಇದಕ್ಕೆ ಮೊದಲು, ರಾಯಲ್ ಚಾಲೆಂಜರ್ಸ್ ತಂಡದ ಪರ ವಿರಾಟ್‌ ಕೊಹ್ಲಿ ಅಪರೂಪಕ್ಕೆ ವಿಫಲರಾದರು. ಮೂರನೇ ಓವರ್‌ನಲ್ಲಿ ಬೂಮ್ರಾ ಹಾಕಿದ ಒಳ್ಳೆಯ ಲೆಂಗ್ತ್ ಎಸೆತವನ್ನು ಆಡುವ ಪ್ರಯತ್ನದಲ್ಲಿ ಬ್ಯಾಟ್ ಅಂಚಿಗೆ ತಾಗಿದ ಚೆಂಡು ವಿಕೆಟ್‌ಕೀಪರ್ ಇಶಾನ್ ಕಿಶನ್ ಕೈಸೇರಿತು. ಆದರೆ ತಂಡ ಕುಸಿಯಲಿಲ್ಲ. ನಾಯಕ ಫಫ್ ಡುಪ್ಲೆಸಿ (61) ಅವರು ಈ ಬಾರಿಯ ಲೀಗ್‌ನಲ್ಲಿ ಮೊದಲ ಅರ್ಧ ಶತಕ ಗಳಿಸಿದರು. ರಜತ್‌ ಪಾಟೀದಾರ್‌ (50) ಸಹ ಅರ್ಧ ಶತಕ ಹೊಡೆದರಲ್ಲದೇ ಮೂರನೇ ವಿಕೆಟ್‌ಗೆ 82 ರನ್ ಜೊತೆಯಾಟವಾಡಿದರು.

ಆದರೆ ಇನಿಂಗ್ಸ್‌ನಲ್ಲಿ ಎದ್ದುಕಂಡಿದ್ದು ಕೊನೆಗಳಿಯಲ್ಲಿ ದಿನೇಶ್ ಕಾರ್ತಿಕ್ (ಅಜೇಯ 53, 23ಎ, 4X5, 6X4) ಅವರ ಬೀಸಾಟ. ಅವರು ಎದುರಿಸಿದ ಕೊನೆಯ ಏಳು ಎಸೆತಗಳಲ್ಲಿ ನಾಲ್ಕು ಸಿಕ್ಸರ್‌, ಒಂದು ಬೌಂಡರಿ ಬಾರಿಸಿ ತಂಡದ ಮೊತ್ತವನ್ನು ಇನ್ನೂರರ ಸಮೀಪ ತಲುಪಿಸಿದರು. 230ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದರು.

ಕನ್ನಡಿಗ, ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರು, ಸತತವಾಗಿ ವಿಫಲರಾಗುತ್ತಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ವಿಕೆಟ್‌ ಪಡೆದರು. ಮೊದಲ ಸಲ ಅವಕಾಶ ಪಡೆದ ಆಲ್‌ರೌಂಡರ್‌ ವಿಲ್‌ ಜಾಕ್ಸ್‌ ಕೂಡ ಗಮನ ಸೆಳೆಯಲಿಲ್ಲ. ಎಲ್ಲ ಬೌಲರ್‌ಗಳ ಇಕಾನಮಿ ದರ ಎರಡಂಕಿ ದಾಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.