ಲಖನೌ: ಅಭಿಮನ್ಯು ಈಶ್ವರನ್ ಅವರ ವೀರೋಚಿತ 191 ಮತ್ತು ಧ್ರುವ್ ಜುರೇಲ್ ಅವರ ದಿಟ್ಟ 93 ರನ್‌ಗಳ ಆಟದ ನಂತರ ಭಾರತ ಇತರರ ತಂಡ ಮೊದಲ ಇನಿಂಗ್ಸ್ ಮುನ್ನಡೆಯತ್ತ ಸಾಗಿತ್ತು. ಆದರೆ ಶಮ್ಸ್ ಮುಲಾನಿ ಮತ್ತು ತನುಷ್ ಕೋಟ್ಯಾನ್ ಅವರ ಸ್ಪಿನ್ ದಾಳಿಯ ಬಲದಿಂದ ಮುಂಬೈ ತಂಡ ಇರಾನಿ ಕಪ್ ಟೂರ್ನಿಯ ನಾಲ್ಕನೇ ದಿನವಾದ ಶುಕ್ರವಾರ ನಿರ್ಣಾಯಕ ಮುನ್ನಡೆ ಪಡೆಯಿತು.
ಮುಂಬೈನ 537 ರನ್‌ಗಳ ಬೃಹತ್ ಮೊತ್ತಕ್ಕೆ ಉತ್ತರವಾಗಿ ಇತರರ ತಂಡ (ಗುರುವಾರ: 4 ವಿಕೆಟ್‌ಗೆ 289) ಒಂದು ಹಂತದಲ್ಲಿ 4 ವಿಕೆಟ್‌ಗೆ 393 ರನ್ ಗಳಿಸಿ ಮುನ್ನಡೆಯತ್ತ ಕಾಲಿಟ್ಟಿತ್ತು. ಈಶ್ವರನ್ ಅವರಿಗೆ ಭಾರತ ತಂಡದ ಎರಡನೇ ವಿಕೆಟ್ ಕೀಪರ್ ಧ್ರುವ್ ಜುರೇಲ್ ಅವರು ಉತ್ತಮ ಬೆಂಬಲ ನೀಡಿದ್ದು ಐದನೇ ವಿಕೆಟ್‌ಗೆ 165 ರನ್‌ಗಳ ಜೊತೆಯಾಟ ಬಂದಿತ್ತು.
ಆದರೆ ಬಂಡೆಯಂತೆ ಬೇರೂರಿದ್ದ ಇವರಿಬ್ಬರನ್ನು ಮುಂಬೈ ಎಡಗೈ ಸ್ಪಿನ್ನರ್ ಮುಲಾನಿ (122ಕ್ಕೆ3) ಅವರು 10 ನಿಮಿಷಗಳ ಅಂತರದಲ್ಲಿ ಪೆವಿಲಿಯನ್‌ಗೆ ಕಳುಹಿಸಿದ ಮೇಲೆ ಇತರರ ತಂಡ ಕುಸಿದು 416 ರನ್‌ಗಳಿಗೆ ಆಲೌಟ್ ಆಯಿತು.
121 ರನ್‌ಗಳ ಮೊದಲ ಇನಿಂಗ್ಸ್ ಪಡೆದ ಮುಂಬೈ ಎರಡನೇ ಸರದಿಯಲ್ಲಿ 6 ವಿಕೆಟ್‌ಗೆ 153 ರನ್ (40 ಓವರ್) ಗಳಿಸಿದ್ದು, ಒಟ್ಟಾರೆ ಮುನ್ನಡೆಯನ್ನು 274 ರನ್‌ಗಳಿಗೆ ಏರಿಸಿದೆ. ಪಿಚ್ ಸ್ಪಿನ್ನರ್‌ಗಳಿಗೆ ನೆರವಾಗತೊಡಗಿದೆ. ಮೂರನೇ ದಿನ ಬಿದ್ದ 12 ವಿಕೆಟ್‌ಗಳಲ್ಲಿ 11 ಸ್ಪಿನ್ನರ್‌ಗಳ ಪಾಲಾದವು. ಚೆಂಡಿಗೆ ತಿರುವು ಸಿಗುತ್ತಿರುವ ಪಿಚ್‌ನಲ್ಲಿ ಕೆಲವು ಎಸೆತಗಳಲ್ಲಿ ಕೆಳಮಟ್ಟದಲ್ಲಿ ಹೊರಳುತ್ತಿದ್ದು, ಕೊನೆಯ ದಿನದಾಟ ಬ್ಯಾಟರ್‌ಗಳ ಪಾಲಿಗೆ ಸತ್ವಪರೀಕ್ಷೆಯಾಗಲಿದೆ.
ಇತರರ ತಂಡದ ಸ್ಪಿನ್ನರ್‌ಗಳಾದ ಸಾರಾಂಶ್ ಜೈನ್ (67ಕ್ಕೆ4) ಮತ್ತು ಎಡಗೈ ಸ್ಪಿನ್ನರ್ ಮಾನವ್ ಸುತಾರ್ (40ಕ್ಕೆ2) ಅವರು ಮುಂಬೈ ತಂಡಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ಕಡಿವಾಣ ತೊಡಿಸಿದರು. ಆರಂಭ ಆಟಗಾರ ಪೃಥ್ವಿ ಶಾ ಆಕ್ರಮಣದ ಆಟವಾಡಿ 105 ಎಸೆತಗಳಲ್ಲಿ 76 ರನ್ ಬಾರಿಸಿದರು. ಅವರ ಆಟದಲ್ಲಿ ಒಂದು ಸಿಕ್ಸರ್, ಎಂಟು ಬೌಂಡರಿಗಳಿದ್ದವು.
ಸಂಕ್ಷಿಪ್ತ ಸ್ಕೋರು: ಮುಂಬೈ 537 ಮತ್ತು 40 ಓವರುಗಳಲ್ಲಿ 6 ವಿಕೆಟ್‌ಗೆ 153 (ಪೃಥ್ವಿ ಶಾ 76; ಸಾರಾಂಶ್ ಜೈನ್ 67ಕ್ಕೆ4, ಮಾನವ್ ಸುತಾರ್ 40ಕ್ಕೆ2); ಭಾರತ ಇತರರ ತಂಡ: 416 (ಅಭಿಮನ್ಯು ಈಶ್ವರನ್ 191, ಧ್ರುವ್ ಜುರೇಲ್ 93; ಶಮ್ಸ್ ಮುಲಾನಿ 122ಕ್ಕೆ3, ತನುಷ್ ಕೋಟ್ಯಾನ್ 101ಕ್ಕೆ3).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.