ಮುಂಬೈ: ರಣಜಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡ ಬಲಿಷ್ಠ ಮುಂಬೈ ಎದುರು ಅಲ್ಪ ಮೊತ್ತಕ್ಕೆ ಕುಸಿದಿದೆ.
ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದ ಮುಂಬೈ, 224 ರನ್ ಗಳಿಸಿ ಮೊದಲ ದಿನವೇ ಆಲೌಟ್ ಆಯಿತು. ಹೀಗಾಗಿ ವಿದರ್ಭ ಪಡೆ ಉತ್ತಮ ಮೊತ್ತ ಗಳಿಸಿ ಮೇಲುಗೈ ಸಾಧಿಸುವ ಲೆಕ್ಕಾಚಾರ ಹಾಕಿಕೊಂಡಿತ್ತು. ಆದರೆ, ಅಜಿಂಕ್ಯ ರಹಾನೆ ಬಳಗ ಅದಕ್ಕೆ ಅವಕಾಶ ನೀಡಲಿಲ್ಲ.
ಮೊದಲ ದಿನದಾಟ ಮುಗಿಯುವುದರೊಳಗೆ 3 ವಿಕೆಟ್ ಉರುಳಿಸಿದ್ದ ಮುಂಬೈ ಬೌಲರ್‌ಗಳು, ಎರಡನೇ ದಿನವೂ ಸಂಘಟಿತ ಪ್ರದರ್ಶನ ತೋರಿ ವಿದರ್ಭ ತಂಡದ ಹೆಡೆಮುರಿ ಕಟ್ಟಿದರು.
ಯಶ್ ರಾಥೋಡ್ 27 ರನ್ ಗಳಿಸಿದ್ದೇ ವಿದರ್ಭ ಪರ ವೈಯಕ್ತಿಕ ಗರಿಷ್ಠ ಮೊತ್ತ ಎನಿಸಿತು. ಇಬ್ಬರು ಸೊನ್ನೆ ಸುತ್ತಿದರೆ, ನಾಲ್ಕು ಮಂದಿ ಒಂದಂಕಿ ಗಳಿಸಲಷ್ಟೇ ಶಕ್ತರಾದರು. ಹೀಗಾಗಿ ಅಕ್ಷಯ್ ವಾಡ್ಕರ್ ಬಳಗ ಕೇವಲ 105 ರನ್‌ಗಳಿಗೆ ಸರ್ವಪತನ ಕಂಡಿತು.
ಮುಂಬೈ ಪರ ಮಧ್ಯಮ ವೇಗಿ ಧವಳ್ ಕುಲಕರ್ಣಿ ಹಾಗೂ ಸ್ಪಿನ್ನರ್‌ಗಳಾದ ಶಮ್ಸ್ ಮುಲಾನಿ, ತನುಷ್ ಕೊಟ್ಯಾನ್ ತಲಾ ಮೂರು ವಿಕೆಟ್ ಕಿತ್ತರು. ಇನ್ನೊಂದು ವಿಕೆಟ್, ಶಾರ್ದೂಲ್ ಠಾಕೂರ್ ಪಾಲಾಯಿತು.
ಇದರೊಂದಿಗೆ 109 ರನ್‌ಗಳ ಉತ್ತಮ ಅಂತರದ ಮುನ್ನಡೆ ಸಾಧಿಸಿರುವ ಮುಂಬೈ, 42ನೇ ಪ್ರಶಸ್ತಿ ಗೆಲ್ಲುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಆದರೆ, ವಿದರ್ಭ ಪಡೆ ಎರಡನೇ ಇನಿಂಗ್ಸ್‌ನಲ್ಲಿ ತಿರುಗೇಟು ನೀಡಿದರೂ ಅಚ್ಚರಿ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.