ದುಬೈ: ಆರಂಭದಲ್ಲಿ ಅಬ್ಬರಿಸಿದ ಶ್ರೀಲಂಕಾಗೆ ಪ್ರಬಲ ತಿರುಗೇಟು ನೀಡಿದ ಬಾಂಗ್ಲಾದೇಶ ತಂಡ ಏಷ್ಯಾ ಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. ಶನಿವಾರ ರಾತ್ರಿ ಇಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಮುಂದಿಟ್ಟ 262 ರನ್‌ಗಳ ಗೆಲುವಿನ ಗುರಿಬೆನ್ನತ್ತಿದ ಶ್ರೀಲಂಕಾ 137 ರನ್‌ಗಳಿಂದ ಸೋತಿತು. ಅದು ಕೇವಲ 124 ರನ್ ಗಳಿಸಲಷ್ಟೇ ಶಕ್ತವಾಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್ ಮನ್‌ಗಳು ಲಸಿತ್ ಮಾಲಿಂಗ ಮತ್ತು ಸುರಂಗ ಲಕ್ಮಲ್ ದಾಳಿಗೆನಲುಗಿದರು. ಆದರೆ ಮುಷ್ಫಿಕುರ್ ರಹೀಮ್ (144; 150 ಎಸೆತ, 4 ಸಿಕ್ಸರ್, 11 ಬೌಂಡರಿ) ಮತ್ತು ಮೊಹಮ್ಮದ್ ಮಿಥುನ್ (63; 68 ಎಸೆತ, 2 ಸಿಕ್ಸರ್, 5 ಬೌಂಡರಿ) ಪಂದ್ಯದ ಗತಿ ಬದಲಿಸಿದರು. ಮೊದಲ ಓವರ್‌ನಲ್ಲಿ ಲಸಿತ್ ಮಾಲಿಂಗ ಅವರು ಲಿಟನ್ ದಾಸ್ ಮತ್ತು ಶಕೀಬ್ ಅಲ್ ಹಸನ್ ವಿಕೆಟ್ ಉರುಳಿಸಿದರೆ ಎರಡನೇ ಓವರ್‌ನಲ್ಲಿ ಲಕ್ಮಲ್ ಎಸೆತದಲ್ಲಿ ತಮೀಮ್ ಇಕ್ಬಾಲ್ ಗಾಯಗೊಂಡು ಮರಳಿದರು. ಆಗ ತಂಡದ ಮೊತ್ತ ಎರಡು ರನ್ ಆಗಿತ್ತು. ಈ ಸಂದರ್ಭದಲ್ಲಿ ಜೊತೆಗೂಡಿದ ಮುಷ್ಫಿಕುರ್ ಮತ್ತು ಮಿಥುನ್‌ನಾಲ್ಕನೇ ವಿಕೆಟ್‌ಗೆ 132 ರನ್ ಸೇರಿಸಿದರು.
ಲಕ್ಮಲ್ ಹಾಕಿದ ಎಂಟನೇ ಓವರ್‌ನಲ್ಲಿ ಮುಷ್ಫಿಕುರ್ ಇನಿಂಗ್ಸ್‌ನ ಮೊದಲ ಬೌಂಡರಿ ಬಾರಿಸಿದರು. 11ನೇ ಓವರ್‌ನಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಮೂಲಕ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳು ಆಕ್ರಮಣಕಾರಿ ಆಟಕ್ಕೆ ಮುಂದಾದರು.
26ನೇ ಓವರ್‌ನಲ್ಲಿ ಮಿಥುನ್ ಔಟಾದ ನಂತರ ಬೇಗನೇ ವಿಕೆಟ್‌ಗಳು ಉರುಳಿದವು. ಆದರೆ ಮುಷ್ಫಿಕುರ್ ದಿಟ್ಟ ಆಟದ ಮೂಲಕ ಮಿಂಚಿದರು. 44ನೇ ಓವರ್‌ನಲ್ಲಿ ಶತಕವನ್ನೂ ಪೂರೈಸಿದರು. ಮುಸ್ತಫಿಜುರ್ ರಹಿಮಾನ್ ಔಟಾದ ನಂತರ ತಮೀಮ್ ಇಕ್ಬಾಲ್ ಮತ್ತೆ ಕ್ರೀಸ್‌ಗೆ ಬಂದರು. ಅವರ ಜೊತೆಗೂಡಿದ ಮುಷ್ಫಿಕುರ್‌ಕೊನೆಯ ವಿಕೆಟ್‌ಗೆ 32 ರನ್ ಸೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.