ADVERTISEMENT

ಸೈಯದ್‌ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20: ಕರ್ನಾಟಕಕ್ಕೆ ವಿದರ್ಭ ಸವಾಲು

ಕದಂ, ಕೌಶಿಕ್ ಮೇಲೆ ಕಣ್ಣು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2019, 18:47 IST
Last Updated 11 ಮಾರ್ಚ್ 2019, 18:47 IST
ವಿದರ್ಭ ಎದುರಿನ ಪಂದ್ಯದಲ್ಲಿ ಕರುಣ್ ನಾಯರ್ ಮತ್ತು ರೋಹನ್ ಕದಂ ಕರ್ನಾಟಕ ತಂಡಕ್ಕೆ ಭರವಸೆ ಮೂಡಿಸಿದ್ದಾರೆ –ಪ್ರಜಾವಾಣಿ ಚಿತ್ರ
ವಿದರ್ಭ ಎದುರಿನ ಪಂದ್ಯದಲ್ಲಿ ಕರುಣ್ ನಾಯರ್ ಮತ್ತು ರೋಹನ್ ಕದಂ ಕರ್ನಾಟಕ ತಂಡಕ್ಕೆ ಭರವಸೆ ಮೂಡಿಸಿದ್ದಾರೆ –ಪ್ರಜಾವಾಣಿ ಚಿತ್ರ   

ಇಂದೋರ್‌: ಸತತ ಜಯದ ಮೂಲಕ ಗಮನಾರ್ಹ ಸಾಧನೆ ಮಾಡಿರುವ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಕೊನೆಯ ಸೂಪರ್ ಲೀಗ್ ಪಂದ್ಯದಲ್ಲಿ ಮಂಗಳವಾರ ವಿದರ್ಭ ತಂಡವನ್ನು ಎದುರಿಸಲಿದೆ.

ಲೀಗ್ ಹಂತದ ಎಲ್ಲ ಏಳು ಪಂದ್ಯಗಳನ್ನು ಗೆದ್ದಿದ್ದ ಮನೀಷ್‌ ಪಾಂಡೆ ಬಳಗ ಸೂಪ‍ರ್ ಲೀಗ್ ಹಂತದ ‘ಬಿ’ ಗುಂಪಿನಲ್ಲೂ ಅಜೇಯವಾಗಿ ಉಳಿದಿದೆ. ಮೂರು ಪಂದ್ಯಗಳಲ್ಲೂ ಗೆದ್ದು ಒಟ್ಟಾರೆ ಸತತ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಶ್ರೇಯಸ್ಸನ್ನು ತನ್ನದಾಗಿಸಿಕೊಂಡಿದೆ.

ಮುಂಬೈ ಎದುರಿನ ಪಂದ್ಯದಲ್ಲಿ ಒಂಬತ್ತು ವಿಕೆಟ್‌ಗಳಿಂದ ಗೆದ್ದಿದ್ದ ಕರ್ನಾಟಕ ನಂತರ ಉತ್ತರ ಪ್ರದೇಶವನ್ನು 10 ರನ್‌ಗಳಿಂದ ಮಣಿಸಿತ್ತು. ಭಾನುವಾರ ನಡೆದಿದ್ದ ಮೂರನೇ ಪಂದ್ಯದಲ್ಲಿ ದೆಹಲಿಯನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತ್ತು. ಈ ಮೂಲಕ ಒಟ್ಟು 12 ಪಾಯಿಂಟ್‌ಗಳೊಂದಿಗೆ ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನಕ್ಕೇರಿತ್ತು.

ADVERTISEMENT

ವಿದರ್ಭ ಮೊದಲ ಎರಡು ಪಂದ್ಯಗಳನ್ನು ಗೆದ್ದಿತ್ತು. ಆದರೆ ಸೋಮವಾರ ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಸೋತಿತ್ತು. ತಂಡ ಈಗ ಎಂಟು ಪಾಯಿಂಟ್‌ಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಕದಂ, ಕೌಶಿಕ್‌ ಮೇಲೆ ಕಣ್ಣು:ಕರ್ನಾಟಕ ತಂಡ ಟೂರ್ನಿಯಲ್ಲಿ ಈ ವರೆಗೆ ಎಲ್ಲ ವಿಭಾಗಗಳಲ್ಲೂ ಶ್ರೇಷ್ಠ ಸಾಮರ್ಥ್ಯ ತೋರಿದೆ. ರೋಹನ್ ಕದಂ, ನಾಯಕ ಮನೀಷ್ ಪಾಂಡೆ, ಕರುಣ್ ನಾಯರ್ ಮತ್ತು ಮಯಂಕ್ ಅಗರವಾಲ್‌ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಿದ್ದಾರೆ.

ಬೌಲಿಂಗ್‌ ವಿಭಾಗದಲ್ಲಿ ಮಧ್ಯಮ ವೇಗಿಗಳಾದ ವಿ. ಕೌಶಿಕ್‌, ಪ್ರಸಿದ್ಧ ಕೃಷ್ಣ, ವಿನಯಕುಮಾರ್‌, ಸ್ಪಿನ್ನರ್‌ಗಳಾದ ಕೆ.ಸಿ.ಕಾರ್ಯಪ್ಪ, ಶ್ರೇಯಸ್ ಗೋಪಾಲ್‌ ಮುಂತಾದವರು ಎದುರಾಳಿಗಳಿಗೆ ಸಿಂಹಸ್ವಪ್ನವಾಗಿದ್ದಾರೆ.

ರೋಹನ್ ಕದಂ 10 ಪಂದ್ಯಗಳಲ್ಲಿ 437 ರನ್‌ ಗಳಿಸಿದ್ದು ಮನೀಷ್ ಪಾಂಡೆ ಅಷ್ಟೇ ಪಂದ್ಯಗಳಲ್ಲಿ 282 ರನ್ ಕಲೆ ಹಾಕಿದ್ದಾರೆ. ಕೌಶಿಕ್ ಎಂಟು ಪಂದ್ಯಗಳನ್ನು ಆಡಿದ್ದು 16 ವಿಕೆಟ್ ಕಬಳಿಸಿದ್ದಾರೆ. ಶ್ರೇಯಸ್‌ ಆರು ಪಂದ್ಯಗಳಲ್ಲಿ 13 ವಿಕೆಟ್ ಉರುಳಿಸಿದ್ದಾರೆ.

ವಿದರ್ಭ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಮತ್ತು ಅಥರ್ವ ತಾಯ್ಡೆ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಅವರನ್ನು ಕಟ್ಟಿಹಾಕಲು ಸಾಧ್ಯವಾದರೆ ಕರ್ನಾಟಕದ ಹಾದಿ ಸುಗಮವಾಗಲಿದೆ. ಶ್ರೀಕಾಂತ್ ವಾಘ್ ಮತ್ತು ಅಕ್ಷಯ್ ಕರ್ನೇವರ್ ಟೂರ್ನಿಯಲ್ಲಿ ಉತ್ತಮ ಬೌಲಿಂಗ್ ಮೂಲಕ ಮಿಂಚಿದ್ದಾರೆ. ಅವರ ಸವಾಲನ್ನು ಮೀರಲು ಮನೀಷ್ ಬಳಗಕ್ಕೆ ಸಾಧ್ಯವಾಗುವುದೇ ಎಂಬ ಪ್ರಶ್ನೆ ಕುತೂಹಲ ಮೂಡಿಸಿದೆ.

ಪಂದ್ಯ ಆರಂಭ: ಮಧ್ಯಾಹ್ನ 1.30

ಸ್ಥಳ: ಇಂದೋರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.