ADVERTISEMENT

ಕರ್ನಾಟಕ ‘ಸೂಪರ್ ಹ್ಯಾಟ್ರಿಕ್’

ಕ್ರಿಕೆಟ್ ರೋನಿತ್ ಉತ್ತಮ ಬೌಲಿಂಗ್; ರಾಹುಲ್ ಅಜೇಯ ಅರ್ಧಶತಕ; ಕರ್ನಾಟಕ ‘ಹ್ಯಾಟ್ರಿಕ್’

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2019, 19:31 IST
Last Updated 24 ನವೆಂಬರ್ 2019, 19:31 IST
ರೋನಿತ್ ಮೋರೆ
ರೋನಿತ್ ಮೋರೆ   

ಸೂರತ್: ಸತತ ಎರಡನೇ ವರ್ಷವೂ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಜಯಿಸುವತ್ತ ಕಣ್ಣಿಟ್ಟಿರುವ ಕರ್ನಾಟಕ ತಂಡವು ಭಾನುವಾರ ನಡೆದ ಸೂಪರ್ ಲೀಗ್ ಸುತ್ತಿನ ಮೂರನೇ ಪಂದ್ಯದಲ್ಲಿ ಪಂಜಾಬ್ ಎದುರು ಜಯಿಸಿತು. ಇದರೊಂದಿಗೆ ಸೆಮಿಫೈನಲ್‌ ಹೊಸ್ತಿಲಿಗೆ ಬಂದು ನಿಂತಿದೆ.

ಮಧ್ಯಮವೇಗಿ ರೋನಿತ್ ಮೋರೆ (27ಕ್ಕೆ4) ಮತ್ತು ಕೆ.ಎಲ್. ರಾಹುಲ್ (ಅಜೇಯ 84; 48ಎಸೆತ, 7ಬೌಂಡರಿ, 4ಸಿಕ್ಸರ್) ಅವರಿಬ್ಬರ ಅಮೋಘ ಆಟದ ಬಲದಿಂದ ಕರ್ನಾಟಕ ತಂಡವು 7 ವಿಕೆಟ್‌ಗಳಿಂದ ಪಂಜಾಬ್ ಎದುರು ಜಯಿಸಿತು. ಸೂಪರ್ ಲೀಗ್‌ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿಯೂ ಕರ್ನಾಟಕ ಗೆದ್ದಿದೆ. ಇದರಿಂದಾಗಿ ಮನೀಷ್ ಬಳಗವು ಸೆಮಿಫೈನಲ್ ತಲುಪುವುದು ಬಹುತೇಕ ಖಚಿತವಾಗಿದೆ. ಸೋಮವಾರ ಮುಂಬೈ ಎದುರು ಕೊನೆಯ ಪಂದ್ಯ ಆಡಲಿದೆ.

ಟಾಸ್ ಗೆದ್ದ ಕರ್ನಾಟಕ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ಮನದೀಪ್ ಸಿಂಗ್ (76; 50ಎ, 9ಬೌಂ,2ಸಿ) ಅವರ ಅರ್ಧಶತಕದ ಬಲದಿಂದ ಪಂಜಾಬ್ ತಂಡವು 20 ಓವರ್‌ಗಳಲ್ಲಿ 6ಕ್ಕೆ 163 ರನ್ ಗಳಿಸಿತು. ಅಭಿಮನ್ಯು ಮಿಥುನ್ ವಿಶ್ರಾಂತಿ ಪಡೆದ ಕಾರಣ ಬೌಲಿಂಗ್ ಪಡೆಯ ಸಾರಥ್ಯ ವಹಿಸಿದ ಬೆಳಗಾವಿ ಹುಡುಗ ರೋನಿತ್ ಮೋರೆ ಎರಡನೇ ಓವರ್‌ನಲ್ಲಿಯ ಶುಭಮನ್ ಗಿಲ್ (11 ರನ್) ವಿಕೆಟ್ ಗಳಿಸಿ ಖಾತೆ ಆರಂಭಿಸಿದರು. ಅವರಿಗೆ ಜೊತೆ ನೀಡಿದ ಕೌಶಿಕ್ ಕೂಡ ಮೂರನೇ ಓವರ್‌ನಲ್ಲಿ ಅಭಿಷೇಕ್ ಶರ್ಮಾ (5 ರನ್) ಅವರಿಗೆ ಪೆವಿಲಿಯನ್ ದಾರಿ ತೋರಿದರು. ಮನದೀಪ್ ಮತ್ತು ಗುರುಕೀರತ್ ಸಿಂಗ್ ಮಾನ್ (44; 32ಎ, 2ಬೌಂ,3ಸಿ) ನಾಲ್ಕನೇ ವಿಕೆಟ್‌ಗೆ 88 ರನ್‌ ಸೇರಿಸಿ ತಂಡಕ್ಕೆ ಆಸರೆಯಾದರು.

ADVERTISEMENT

ರೋನಿತ್ ತಮ್ಮ ಎರಡನೇ ಸ್ಪೆಲ್‌ನಲ್ಲಿ ಗುರುಕೀರತ್ ವಿಕೆಟ್ ಗಳಿಸಿ ಜೊತೆಯಾಟ ಮುರಿದರು. ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಮನದೀಪ್ ಮತ್ತು ಅನ್ಮೋಲ್‌ಪ್ರೀತ್ ಸಿಂಗ್ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು.

ಕರ್ನಾಟಕದ ಆರಂಭಿಕ ಆಟಗಾರ ದೇವದತ್ತ ಪಡಿಕ್ಕಲ್ ಕೇವಲ ಎರಡು ರನ್ ಗಳಿಸಿ ಔಟಾದರು. ಆದರೆ ಇನ್ನೊಂದು ಬದಿಯಲ್ಲಿ ಆತ್ಮವಿಶ್ವಾಸದಿಂದ ಆಡಿದ ರಾಹುಲ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಅವರಿಗೆ ರೋಹನ್ ಕದಂ (23 ರನ್) ಮತ್ತು ನಾಯಕ ಮನೀಷ್ ಪಾಂಡೆ (33 ರನ್) ಉತ್ತಮ ಜೊತೆ ನೀಡಿದರು.

ಸಂಕ್ಷಿಪ್ತ ಸ್ಕೋರು: ಪಂಜಾಬ್: 20 ಓವರ್‌ಗಳಲ್ಲಿ 6ಕ್ಕೆ163 (ಮನದೀಪ್ ಸಿಂಗ್ 76, ಗುರುಕೀರತ್ ಸಿಂಗ್ ಮಾನ್ 44, ರೋನಿತ್ ಮೋರೆ 27ಕ್ಕೆ4, ವಿ. ಕೌಶಿಕ್ 53ಕ್ಕೆ1, ಶ್ರೇಯಸ್ ಗೋಪಾಲ್ 27ಕ್ಕೆ1) ಕರ್ನಾಟಕ: 18 ಓವರ್‌ಗಳಲ್ಲಿ 3ಕ್ಕೆ167 (ಕೆ.ಎಲ್. ರಾಹುಲ್ ಔಟಾಗದೆ 84, ರೋಹನ್ ಕದಂ 23, ಮನೀಷ್ ಪಾಂಡೆ 33, ಕರುಣ್ ನಾಯರ್ ಔಟಾಗದೆ 23, ಹರಪ್ರೀತ್ ಬ್ರಾರ್ 27ಕ್ಕೆ1, ಮಯಂಕ್ ಮಾರ್ಕಂಡೆ 33ಕ್ಕೆ1, ಅಭಿಷೇಕ್ ಶರ್ಮಾ 34ಕ್ಕೆ1) ಫಲಿತಾಂಶ: ಕರ್ನಾಟಕಕ್ಕೆ 7 ವಿಕೆಟ್‌ಗಳಿಂದ ಜಯ. ಸೋಮವಾರದ ಪಂದ್ಯ: ಕರ್ನಾಟಕ–ಮುಂಬೈ.

ಜಾರ್ಖಂಡ್: 20 ಓವರ್‌ಗಳಲ್ಲಿ 5ಕ್ಕೆ170 (ಕುಮಾರ್ ದೇವವ್ರತ್ 58, ಸೌರಭ್ ತಿವಾರಿ 27, ಸುಮಿತ್ ಕುಮಾರ್ 33, ಶುಭಂ ರಾಂಜಣೆ 17ಕ್ಕೆ2), ಮುಂಬೈ: 19.1 ಓವರ್‌ಗಳಲ್ಲಿ 5ಕ್ಕೆ171 (ಪೃಥ್ವಿ ಶಾ 64, ಆದಿತ್ಯ ತಾರೆ 21, ಶ್ರೇಯಸ್ ಅಯ್ಯರ್ 15, ಶಿವಂ ದುಬೆ 23, ಸೋನು ಸಿಂಗ್ 34ಕ್ಕೆ2) ಫಲಿತಾಂಶ: ಮುಂಬೈ ತಂಡಕ್ಕೆ 5 ವಿಕೆಟ್‌ಗಳ ಜಯ.

ಮಹಾರಾಷ್ಟ್ರ: 20 ಓವರ್‌ಗಳಲ್ಲಿ2ಕ್ಕೆ165 (ಋತುರಾಜ್ ಗಾಯಕವಾಡ್ 47, ವಿಜಯ್ ಜೋಯ್ 20, ಕೇದಾರ್ ಜಾಧವ್ 47, ಅಜೀಂ ಖಾಜಿ ಔಟಾಗದೆ 48, ರಿಷಿ ಅರೋರಾ 35ಕ್ಕೆ1, ಸ್ವಪ್ನೀಲ್ ಸಿಂಗ್ 19ಕ್ಕೆ1), ಬರೋಡಾ: 17.3 ಓವರ್‌ಗಳಲ್ಲಿ 98 (ಕೇದಾರ್ ದೇವಧರ್ 27, ಧ್ರುವ ಪಟೇಲ್ 18, ಸಮದ್ ಫಲ್ಲಾ 12ಕ್ಕೆ2, ಸತ್ಯಜೀತ್ ಬಚಾವ್ 5ಕ್ಕೆ2, ಶಾಮಸುಜಾಮ್ ಖಾಜಿ 12ಕ್ಕೆ2, ಅಜೀಂ ಖಾಜಿ 20ಕ್ಕೆ2) ಫಲಿತಾಂಶ: ಮಹಾರಾಷ್ಟ್ರಕ್ಕೆ 67 ರನ್‌ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.