ADVERTISEMENT

ಟಿ-20 ತಂಡಕ್ಕೆ ಮರಳಲು IPL ವೇದಿಕೆ ಎದುರು ನೋಡುತ್ತಿದ್ದೇನೆ: ಕೆ.ಎಲ್. ರಾಹುಲ್

ಪಿಟಿಐ
Published 15 ನವೆಂಬರ್ 2024, 10:22 IST
Last Updated 15 ನವೆಂಬರ್ 2024, 10:22 IST
ಕೆ.ಎಲ್. ರಾಹುಲ್ 
ಕೆ.ಎಲ್. ರಾಹುಲ್    

ಪರ್ತ್: ಇಂಡಿಯನ್ ಪ್ರೀಮಿಯರ್ ಲೀಗ್‌ ಮೂಲಕ ಭಾರತದ ಟಿ–20 ಕ್ರಿಕೆಟ್ ತಂಡಕ್ಕೆ ಮರಳುವ ವಿಶ್ವಾಸದಲ್ಲಿ ವಿಕೆಟ್ ಕೀಪರ್, ಬ್ಯಾಟರ್ ಕೆ.ಎಲ್. ರಾಹುಲ್ ಇದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್–ಗವಾಸ್ಕರ್ ಟೆಸ್ಟ್ ಸರಣಿಯ ಪರ್ತ್‌ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡದಿದ್ದರೆ ಕೆ.ಎಲ್. ರಾಹುಲ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ರಾಹುಲ್ ಅವರ ಫಾರ್ಮ್‌ ಬಗ್ಗೆ ಕಳವಳ ಇದ್ದು, ನ್ಯೂಜಿಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಿಂದ ಅವರನ್ನು ಹೊರಗಿಡಲಾಗಿತ್ತು. ಅವರ ಬದಲಿಗೆ ಸರ್ಫರಾಜ್ ಖಾನ್ ಅವರಿಗೆ ಅವಕಾಶ ನೀಡಲಾಗಿತ್ತು.

ADVERTISEMENT

'ನಿಸ್ಸಂಶಯವಾಗಿ ಟಿ20 ತಂಡಕ್ಕೆ ಮರಳುವುದು ನನ್ನ ಗುರಿಯಾಗಿದೆ. ನಾನು ಯಾವಾಗಲೂ ಎಲ್ಲ ಮಾದರಿಯ ಆಟಗಾರನಾಗಲು ಬಯಸುತ್ತೇನೆ. ಆ ಆಸೆ ಮತ್ತು ಪ್ರಯತ್ನ ಹಲವು ವರ್ಷಗಳಿಂದ ಬದಲಾಗಿಲ್ಲ. ನಾನು ಇನ್ನೂ ಮೂರು ಮಾದರಿಗಳಲ್ಲೂ ಭಾರತಕ್ಕಾಗಿ ಆಡಲು ಬಯಸುತ್ತೇನೆ. ಹಲವು ವರ್ಷಗಳಿಂದ ಅದನ್ನು ಮಾಡಿದ್ದೇನೆ’ಎಂದು ರಾಹುಲ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

ನಾನು ಸ್ವಲ್ಪ ಸಮಯದಿಂದ ಟಿ20 ತಂಡದಿಂದ ಹೊರಗುಳಿದಿದ್ದೇನೆ. ನಾನು ಒಬ್ಬ ಆಟಗಾರನಾಗಿ ನನ್ನನ್ನು ನಾನು ಎಲ್ಲಿ ಸಾಬೀತುಮಾಡಿಕೊಳ್ಳಬಲ್ಲೆ. ತಂಡಕ್ಕೆ ಹಿಂದಿರುಗಲು ಏನು ಮಾಡಬೇಕೆಂದು ನನಗೆ ತಿಳಿದಿದೆ. ಹಾಗಾಗಿ, ಈ ಐಪಿಎಲ್ ಋತುವಿನಲ್ಲಿ ನಾನು ಬಯಸಿದ ರೀತಿಯಲ್ಲಿ ಆಟವನ್ನು ಆಡಲು ವೇದಿಕೆ ಎದುರು ನೋಡುತ್ತಿದ್ದೇನೆ’ಎಂದು ಅವರು ಹೇಳಿದ್ದಾರೆ.

2022ರಿಂದ ರಾಹುಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 12 ಪಂದ್ಯಗಳಿಂದ (21 ಇನ್ನಿಂಗ್ಸ್) 25.7ರ ಸರಾಸರಿಯಲ್ಲಿ 514 ರನ್ ಗಳಿಸಿದ್ದಾರೆ. ಮೂರು ಅರ್ಧ ಶತಕ ಮತ್ತು ಒಂದು ಶತಕ ದಾಖಲಿಸಿದ್ದಾರೆ.

ನನ್ನ ವೈಯಕ್ತಿಕ ಗುರಿಗಳಿಗಿಂತ ತಂಡದ ಜಯಕ್ಕಾಗಿ ಆಡುವುದು ನನ್ನ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

‘ಸ್ವತಂತ್ರವಾಗಿ ಆಡಲು ಆಟಗಾರರು ಬಯಸುತ್ತಾರೆ. ನಾನು ನನ್ನ ಬ್ಯಾಟಿಂಗ್ ಶೈಲಿಯನ್ನು ಆನಂದಿಸುತ್ತೇನ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ, ನನ್ನ ಚಿಂತನೆ ಮತ್ತು ಗುರಿಯಲ್ಲಿ ತಂಡಕ್ಕೆ ಮೊದಲ ಸ್ಥಾನವಿರುತ್ತದೆ. ನನ್ನ ವೈಯಕ್ತಿಕ ಗುರಿ ಏನು? ನನ್ನ ಸಹಜ ಆಟ ಯಾವುದು? ಎಂಬುದು ಮುಖ್ಯವಲ್ಲ’ ಎಂದಿದ್ದಾರೆ.

‘ನಾವು ತಂಡದ ಆಟವನ್ನು ಆಡುತ್ತಿದ್ದೇವೆ. ನಾನು ಟೆನಿಸ್ ಆಡುತ್ತಿದ್ದರೆ, ಆಗ ಚಿಂತನೆ ಬೇರೆ ಇರುತ್ತಿತ್ತು. ಆಗ ಇದು ನನ್ನ ಸಹಜ ಆಟ ಎಂದು ಹೇಳಬಹುದಿತ್ತು. ಆದರೆ, ತಂಡದ ಆಟದಲ್ಲಿ ಅದು ಅತ್ಯಂತ ವಿಭಿನ್ನ. ಪ್ರತಿ ಪಂದ್ಯದಲ್ಲಿ ವಿಭಿನ್ನ ಪಾತ್ರ ಮತ್ತು ಹೊಣೆ ಇರುತ್ತದೆ. ತಂಡಕ್ಕಾಗಿ ಕೊಡುಗೆ ನೀಡುವತ್ತ ಗಮನಹರಿಸಬೇಕಿರುತ್ತದೆ’ಎಂದು ಹೇಳಿದ್ದಾರೆ.

2023ರಲ್ಲಿ ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸಿಡಿಸಿದ ಶತಕ ರಾಹುಲ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಸಿಡಿಸಿದ ಕೊನೆಯ ಶತಕವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.