ಮುಂಬೈ: ತಂದೆ-ತಾಯಿಗಾಗಿ ಮನೆ ಕಟ್ಟಿಸಿ ಅವರ ಕನಸು ನನಸುಗೊಳಿಸುವುದು ನನ್ನ ಮುಂದಿರುವ ಏಕೈಕ ಗುರಿ ಎಂದು ಮುಂಬೈ ಇಂಡಿಯನ್ಸ್ ತಂಡದ ಯುವ ಪ್ರತಿಭಾವಂತ ಆಟಗಾರ ತಿಲಕ್ ವರ್ಮಾ ಹೇಳಿದ್ದಾರೆ.
ಐಪಿಎಲ್ 2022ರ ಆವೃತ್ತಿಯ ಮೊದಲೆರಡು ಪಂದ್ಯಗಳಲ್ಲಿ ಮಿಂಚಿರುವ ತಿಲಕ್, ಕ್ರಿಕೆಟ್ ಲೋಕದ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಶನಿವಾರ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಸೋತರೂ ಅಮೋಘ ಆಟವನ್ನು ಪ್ರದರ್ಶಿಸಿದ ತಿಲಕ್, ಕೇವಲ 33 ಎಸೆತಗಳಲ್ಲಿ 61 ರನ್ ಗಳಿಸಿದ್ದರು.
ಯುವರಾಜ್ ಸಿಂಗ್ ಶೈಲಿಯನ್ನು ಹೋಲುವ ಈ ಯುವ ಎಡಗೈ ಬ್ಯಾಟರ್ ಇನ್ನಿಂಗ್ಸ್‌ನಲ್ಲಿ ಮೂರು ಬೌಂಡರಿ ಹಾಗೂ ಐದು ಮನಮೋಹಕ ಸಿಕ್ಸರ್‌ಗಳು ಸೇರಿದ್ದವು.
'ಐಪಿಎಲ್ ಹರಾಜು ನಡೆಯುತ್ತಿದ್ದ ದಿನ ನಾನು ನನ್ನ ಕೋಚ್ ಜೊತೆ ವಿಡಿಯೊ ಕಾಲ್‌ನಲ್ಲಿದ್ದೆ. ಬಿಡ್ ಜಾಸ್ತಿಯಾದಾಗ ಕೋಚ್ ಭಾವುಕರಾದರು. ನಾನು ಆಯ್ಕೆಯಾದ ಬಳಿಕ ಪೋಷಕರಿಗೆ ಕರೆ ಮಾಡಿದೆ. ಅವರ ಕಣ್ಣಲ್ಲೂ ಕಣ್ಣೀರು ಹರಿಯತೊಡಗಿತು' ಎಂದು ಹೇಳಿದರು.
'ನಾವು ಸಾಕಷ್ಟು ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿದ್ದೇವೆ. ನನ್ನ ಅಪ್ಪ ತಮಗೆ ದೊರಕುವ ಅಲ್ಪ ಸಂಬಳದಲ್ಲಿ ನನ್ನ ಕ್ರಿಕೆಟ್ ಖರ್ಚಿನ ಜೊತೆಗೆ ನನ್ನ ಅಣ್ಣನ ಓದಿನ ಖರ್ಚನ್ನು ನೋಡಿಕೊಳ್ಳಬೇಕು. ಕಳೆದ ಕೆಲವು ವರ್ಷಗಳಲ್ಲಿ ಕೆಲವು ಪ್ರಾಯೋಜಕತ್ವ ಹಾಗೂ ಪಂದ್ಯ ಶುಲ್ಕದಿಂದ ನನ್ನ ಕ್ರಿಕೆಟ್ ವೆಚ್ಚವನ್ನು ವಹಿಸಲಾಗುತ್ತಿದೆ' ಎಂದು ಹೇಳಿದರು.
'ನಮಗೆ ಇನ್ನೂ ಸ್ವಂತ ಮನೆ ಇಲ್ಲ. ಹಾಗಾಗಿ ಈ ಐಪಿಎಲ್‌ನಲ್ಲಿ ಗಳಿಸಿದ್ದನ್ನೆಲ್ಲ ಒಟ್ಟುಗೂಡಿಸಿ ತಂದೆ-ತಾಯಿಗೆ ಮನೆ ಕಟ್ಟಿಸಿಕೊಡುವುದು ನನ್ನ ಏಕೈಕ ಗುರಿಯಾಗಿದೆ. ಆ ಮೂಲಕನನ್ನ ವೃತ್ತಿ ಜೀವನದಲ್ಲಿ ಮುಕ್ತವಾಗಿ ಆಡಬಹುದಾಗಿದೆ' ಎಂದು ಹೇಳಿದರು.
2020ರಲ್ಲಿ ಭಾರತ ಅಂಡರ್-19 ತಂಡವನ್ನು ಪ್ರತಿನಿಧಿಸಿರುವ ತಿಲಕ್ ವರ್ಮಾ, ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ₹1.7 ಕೋಟಿಗೆ ಮುಂಬೈ ಇಂಡಿಯನ್ಸ್ ಪಾಲಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.