ಮುಂಬೈ: ಟಿ20 ಅಂತರ ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತ ರಾಗಿರುವ ಸೀನಿಯರ್ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಬಹುತೇಕ ಏಕದಿನ ಪಂದ್ಯಗಳಿಗೆ ಮತ್ತು ಟೆಸ್ಟ್‌ಗಳಿಗೆ
ಲಭ್ಯರಾಗುತ್ತಾರೆ ಎಂದು ನಿರೀಕ್ಷಿಸಿರುವುದಾಗಿ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಸೋಮವಾರ ಇಲ್ಲಿ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ನಿಗದಿಯಾಗಿ ರುವ 2027ರ ಏಕದಿನ ವಿಶ್ವಕಪ್‌ಗೆ ಪರಿಗಣಿಸುವಂತಾಗಲು ಅವರಿಬ್ಬರೂ ಫಿಟ್ನೆಸ್ ಉಳಿಸಿಕೊಳ್ಳುವ ವಿಶ್ವಾಸ ಹೊಂದಿ
ರುವುದಾಗಿಯೂ ಗಂಭೀರ್ ಹೇಳಿದ್ದಾರೆ.
ಟಿ20 ವಿಶ್ವಕಪ್ ಗೆದ್ದ ನಂತರ ಅಂತರ ರಾಷ್ಟ್ರೀಯ ಚುಟುಕು ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವುದಾಗಿ ಈ ಅನುಭವಿ ಬ್ಯಾಟರ್‌ಗಳು ಹೇಳಿದ್ದರು. ಇಬ್ಬರೂ ಶ್ರೀಲಂಕಾ ಪ್ರವಾಸಕ್ಕೆ ವಿಶ್ರಾಂತಿ ಪಡೆಯಬಹುದೆಂಬ ನಿರೀಕ್ಷೆಗಳಿದ್ದವು.
ಆದರೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಿನ್ನೆಲೆಯಲ್ಲಿ, ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಮುಂದಿನ ತಿಂಗಳು ದ್ವೀಪರಾಷ್ಟ್ರದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ಸರಣಿಗೆ ಪ್ರಕಟಿಸಿರುವ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಮುಂದಿನ ಫೆಬ್ರುವರಿ– ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನದಲ್ಲಿ ನಿಗದಿ ಆಗಿದೆ.
ಮುಖ್ಯ ಕೋಚ್ ಆದ ನಂತರ ಮೊದಲ ಮಾಧ್ಯಮಗೋಷ್ಠಿ ಯಲ್ಲಿ ಮಾತನಾಡಿದ ಗಂಭೀರ್, ಅನುಭವಿ ವೇಗಿ ಜಸ್‌ಪ್ರೀತ್ ಬೂಮ್ರಾ ಅವರಿಗೆ ಸಂಬಂಧಿಸಿ ಮಾತ್ರ ಕಾರ್ಯಭಾರ ಒತ್ತಡದ ಮಾತುಗಳನ್ನು ಆಡಿದರು.
‘ಬೂಮ್ರಾ ಅಂಥ ಆಟಗಾರರಿಗೆ ಸಂಬಂಧಿಸಿ ಕಾರ್ಯದೊತ್ತಡ ನಿರ್ವಹಣೆ ಮಾಡುವುದು ಮುಖ್ಯವಾಗಿದೆ ಎಂದು ಹಿಂದೆಯೂ ಹೇಳಿದ್ದೇನೆ. ಸ್ಥಿರ ಪ್ರದರ್ಶನ ನೀಡುವ, ಉತ್ತಮ ಲಯದಲ್ಲಿರುವ ಬ್ಯಾಟರ್‌ಗಳು ಎಲ್ಲ ಪಂದ್ಯಗಳನ್ನು ಆಡಬೇಕಾಗುತ್ತದೆ’ ಎಂದರು.
ರೋಹಿತ್ ಮತ್ತು ವಿರಾಟ್ ಟಿ20 ಕ್ರಿಕೆಟ್‌ನಿಂದ ನಿವೃತ್ತರಾದ ಕಾರಣ ಅವರಿಗೆ ಎರಡು ಮಾದರಿಗಳಷ್ಟೇ ಉಳಿದಿವೆ. ಅವರಿಬ್ಬರೂ ಬಹುತೇಕ ಪಂದ್ಯಗಳಿಗೆ ಲಭ್ಯರಿರುವ ವಿಶ್ವಾಸವಿದೆ’ ಎಂದು ಗಂಭೀರ್ ಹೇಳಿದರು.
‘ಬೂಮ್ರಾ ಅವರು ವಿರಳ ರೀತಿಯ ಬೌಲರ್. ಹೀಗಾಗಿ ವೇಗದ ಬೌಲರ್‌ಗಳಿಗೆ ಆಗುವ ರೀತಿ ಅವರು ಗಾಯಾಳಾಗದಂತೆ ಎಚ್ಚರಿಕೆಯಿಂದ ನಿರ್ವಹಣೆ ಮಾಡಬೇಕಾಗುತ್ತದೆ. ಬರೇ ಬೂಮ್ರಾ ಮಾತ್ರವಲ್ಲ, ಹೆಚ್ಚಿನ ವೇಗದ ಬೌಲರ್‌ಗಳ ವಿಷಯದಲ್ಲೂ ಕಾರ್ಯಭಾರ ಹೆಚ್ಚಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ’ ಎಂದರು.
ಪ್ರತ್ಯೇಕ ತಂಡ– ಸಾಧ್ಯತೆ: ಏಕದಿನ, ಟಿ20 ಮತ್ತು ಟೆಸ್ಟ್‌ಗೆ ಮೂರು ಪ್ರತ್ಯೇಕ ತಂಡಗಳನ್ನು ಹೊಂದುವ ಸಾಧ್ಯತೆಯನ್ನು ಅವರು ಅಲ್ಲಗೆಳೆಯಲಿಲ್ಲ. ಆದರೆ ಈಗ ಭಾರತ ತಂಡ ಸ್ಥಿರ ಪ್ರದರ್ಶನ ನೀಡುವುದು ಅತ್ಯಗತ್ಯವಾಗಿದೆ ಎಂದರು.
‘ಮೂರು ತಂಡಗಳು ಇರಲಿವೆ ಎಂಬುದನ್ನು ಈಗಲೇ ನಾನು ಹೇಳಲಾರೆ. ಟಿ20 ತಂಡ ಪರಿವರ್ತನೆಯ ಹಂತ ದಲ್ಲಿದೆ. ಅತ್ಯುತ್ತಮ, ವಿಶ್ವದರ್ಜೆಯ ಮೂವರು ಆಟಗಾರರು ಈ ಮಾದರಿಯಿಂದ ನಿವೃತ್ತಿಯಾಗಿದ್ದಾರೆ’ ಎಂದು ರೋಹಿತ್, ವಿರಾಟ್, ಜಡೇಜ ಅವರ ನಿವೃತ್ತಿ ಉದ್ದೇಶಿಸಿ ಹೇಳಿದರು.
‘ಆದರೆ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದಷ್ಟೂ ತಂಡಕ್ಕೆ ಉತ್ತಮ. ಈ ಎರಡು ಮಾದರಿಗಳಲ್ಲಿ ಹೆಚ್ಚು ಆಟಗಾರರಿರುವುದು, ಯಾವುದೇ ತಂಡಕ್ಕೆ ಒಳ್ಳೆಯದು’ ಎಂದರು.
ತಮ್ಮ ಮತ್ತು ವಿರಾಟ್ ಕೊಹ್ಲಿ ನಡುವಣ ಬಹುಚರ್ಚಿತ ಸಂಬಂಧದ ಬಗ್ಗೆ ಪ್ರಸ್ತಾಪಿಸಿರುವ ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್, ‘ನಮ್ಮಿಬ್ಬರ ಸಂಬಂಧ ಚೆನ್ನಾಗಿದೆ. ಈ ಬಗ್ಗೆ ನಡೆಯುವ ಚರ್ಚೆಯೆಲ್ಲಾ ಟಿಆರ್‌ಪಿಗಷ್ಟೇ ಸರಿಹೋಗಬಹುದು’ ಎಂದು ಖಾರವಾಗಿ ಹೇಳಿದ್ದಾರೆ.
ಮುಂಬರುವ ದಿನಗಳಲ್ಲೂ ತಮ್ಮಿಬ್ಬರ ಬಾಂಧವ್ಯ ಚೆನ್ನಾಗಿಯೇ ಇರಲಿದೆ ಎಂದಿದ್ದಾರೆ. ಕಳೆದ ವರ್ಷ ಐಪಿಎಲ್ ಪಂದ್ಯಾವಳಿಯ ವೇಳೆ ಇವರಿಬ್ಬರ ಮುನಿಸು ಬಹಿರಂಗಗೊಂಡಿತ್ತು. ಆದರೆ ಈ ವರ್ಷದ ಐಪಿಎಲ್‌ನಲ್ಲಿ ಅದನ್ನು ಮರೆತಿರುವ ರೀತಿ ಇಬ್ಬರೂ ನಡೆದುಕೊಂಡಿದ್ದರು.
‘ಇಂಥ ಚರ್ಚೆ ಟಿಆರ್‌ಪಿ ದೃಷ್ಟಿಯಿಂದ ಓಡಬಹುದು. ನಮ್ಮಿಬ್ಬರ ನಡುವಣ ಬಾಂಧವ್ಯ ಇಬ್ಬರು ಪ್ರಬುದ್ಧ ಮನಸ್ಸಿ ನವರು ಹೊಂದಿರುವಂಥ ಸಂಬಂಧದಂತೆ ಚೆನ್ನಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಈ ಸಂಬಂಧ
ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ತಂಡ ಗೆಲ್ಲುವುದಷ್ಟೇ ಮುಖ್ಯ. ಅದಕ್ಕಾಗಿ ಜೊತೆಯಾಗಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಭಾರತ ಜುಲೈ 27 ರಿಂದ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಮೂರು ಟಿ20, ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.
‘ಕ್ರಿಕೆಟ್ ಅಂಗಣದಲ್ಲಿ ತಮ್ಮ ತಮ್ಮ ತಂಡಕ್ಕಾಗಿ ಹೋರಾಡುವುದು ಮತ್ತು ಗೆದ್ದು ಡ್ರೆಸಿಂಗ್ ರೂಮ್‌ಗೆ ಮರಳುವುದು ಪ್ರತಿಯೊಬ್ಬರ ಹಕ್ಕು’ ಎಂದು ಐಪಿಎಲ್ ಅನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಅವರು ‘ಆದರೆ ನಾವು ಈಗ, ಭಾರತವನ್ನು ಪ್ರತಿನಿಧಿಸುತ್ತಿದ್ದೇವೆ. 140 ಕೋಟಿ ಭಾರತೀಯರನ್ನು ಪ್ರತಿನಿಧಿಸುತ್ತಿದ್ದೇವೆ. ನಾವಿಬ್ಬರೂ ಒಂದೇ ಗುರಿಹೊಂದಿದ್ದೇವೆ. ಅದು ಭಾರತವನ್ನು ಹೆಮ್ಮೆಪಡುವಂತೆ ಮಾಡುವುದು’ ಎಂದಿದ್ದಾರೆ.
ಭಾರತ ತಂಡದ ಮಾಜಿ ಆಲ್‌ರೌಂಡರ್ ಅಭಿಷೇಕ್ ನಾಯರ್, ನೆದರ್ಲೆಂಡ್ಸ್‌ನ ಬ್ಯಾಟರ್ ರಯಾನ್ ಟೆನ್ ದುಶ್ಯಾತ್ ಅವರು ಶ್ರೀಲಂಕಾ ಪ್ರವಾಸದಲ್ಲಿ ನೆರವು ಸಿಬ್ಬಂದಿಯಾಗಿ ತಂಡದ ಜೊತೆ ಪಯಣಿಸಲಿದ್ದಾರೆ.
ತಂಡದ ಪೂರ್ಣ ಪ್ರಮಾಣದ ನೆರವು ಸಿಬ್ಬಂದಿ ವಿವರ ಲಂಕಾ ಪ್ರವಾಸದ ನಂತರವಷ್ಟೇ ಗೊತ್ತಾಗಲಿದೆ ಎಂದು ಗಂಭೀರ್ ಹೇಳಿದರು.
‘ಬಿಸಿಸಿಐ ಬಗ್ಗೆ ಸಂತಸದಲ್ಲಿದ್ದೇನೆ. ನಾನು ಕೇಳಿದ್ದ ಹೆಚ್ಚಿನ ಮನವಿಗಳಿಗೆ ಅವರು ಒಪ್ಪಿದ್ದಾರೆ. ನೆರವು ಸಿಬ್ಬಂದಿ ವಿಷಯ ಅಂತಿಮಗೊಳ್ಳಬೇಕಿದೆ’ ಎಂದರು.
ಲಂಕಾ ಪ್ರವಾಸಕ್ಕೆ ಟಿ.ದಿಲೀಪ್ ಅವರು ಫೀಲ್ಡಿಂಗ್ ಕೋಚ್ ಆಗಿ ಮುಂದುವರಿಯುತ್ತಾರೆ ಮತ್ತು ಸಾಯಿರಾಜ ಬಹುತುಳೆ ಅವರು ಹಂಗಾವಿ ಬೌಲಿಂಗ್ ಕೋಚ್ ಆಗಿದ್ದಾರೆ’ ಎಂದರು
ಫಿಟ್ನೆಸ್, ಡ್ರೆಸ್ಸಿಂಗ್ ರೂಮ್‌ನಿಂದ ದೊರೆತ ಅಭಿಪ್ರಾಯ, ಸತತವಾಗಿ ಲಭ್ಯತೆ– ಈ ಮೂರು ಅಂಶಗಳು ಸೂರ್ಯಕುಮಾರ್ ಯಾದವ್ ಅವರಿಗೆ, ಹಾರ್ದಿಕ್ ಪಾಂಡ್ಯ ಅವರನ್ನು ಹಿಂದೆಹಾಕಿ ಭಾರತ ಟಿ20 ತಂಡಕ್ಕೆ ನಾಯಕನಾಗಿ ನೇಮಕ ಮಾಡಲು ಕಾರಣವಾದವು ಎಂದು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರಕರ್ ಸೋಮವಾರ ಇಲ್ಲಿ ಹೇಳಿದರು.
ಇದೇ ತಿಂಗಳ 27ರಿಂದ ನಡೆಯುವ ಶ್ರೀಲಂಕಾ ಪ್ರವಾಸಕ್ಕೆ ಪೂರ್ವಭಾವಿಯಾಗಿ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಜೊತೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಸೂರ್ಯಕುಮಾರ್ ನಾಯಕತ್ವಕ್ಕೆ ಅರ್ಹ ಅಭ್ಯರ್ಥಿಯಾಗಿದ್ದಾರೆ. ಒಂದು ವರ್ಷದಿಂದ ಅವರು ಸತತವಾಗಿ ತಂಡದಲ್ಲಿ ಆಡುತ್ತಿದ್ದಾರೆ. ಈ ವೇಳೆ ಡ್ರೆಸಿಂಗ್ ರೂಮ್‌ನಿಂದ ಸಾಕಷ್ಟು ಅಭಿಪ್ರಾಯಗಳು ಸಿಗುತ್ತವೆ. ಅವರಲ್ಲಿ ಆಟದ ಗ್ರಹಿಕೆ ಚೆನ್ನಾಗಿದೆ. ಟಿ20 ಕ್ರಿಕೆಟ್‌ನಲ್ಲಿ ಅವರು ವಿಶ್ವದ ಅತ್ಯುತ್ತಮ ಬ್ಯಾಟರ್ ಬೇರೆ’ ಎಂದರು.
ಅವರ ಫಿಟ್ನೆಸ್ ದಾಖಲೆ ಉತ್ತಮವಾಗಿದೆ ಎಂದು ಅಗರಕರ್ ಹೇಳಿದರು. ಆ ಮೂಲಕ, ಫಿಟ್ನೆಸ್ ಸಮಸ್ಯೆಯಿಂದಾಗಿ ಪಾಂಡ್ಯ ಅವರನ್ನು ನಾಯಕತ್ವಕ್ಕೆ ಪರಿಗಣಿಸಲಿಲ್ಲ ಎಂದು ಪರೋಕ್ಷ ಇಂಗಿತ ವ್ಯಕ್ತಪಡಿಸಿದರು.
‘ಪಾಂಡ್ಯ ಅವರಿಗೆ ಸಂಬಂಧಿಸಿ ಹೇಳುವುದಾದರೆ ಅವರು ತಂಡದ ಅತಿ ಪ್ರಮುಖ ಆಟಗಾರ. ಅದಕ್ಕಾಗಿ ಅವರು ತಂಡಕ್ಕೆ ಅಗತ್ಯ. ಅವರಂಥ ಕೌಶಲ ಮತ್ತೊಬ್ಬ ಆಟಗಾರನಲ್ಲಿ ಕಂಡುಕೊಳ್ಳುವುದು ಕಷ್ಟ’ ಎಂದರು.
‘ಕಳೆದ ಕೆಲವು ವರ್ಷಗಳಿಂದ ಅವರಿಗೆ ಫಿಟ್ನೆಸ್ ಕಾಪಾಡಿಕೊಳ್ಳುವುದು ಸವಾಲಾಗಿದೆ. ಆಗ ಅವರಿಗೂ ಕಷ್ಟ. ಆಯ್ಕೆಗಾರರಿಗೂ ಸಹ’ ಎಂದರು.
ಕೆ.ಎಲ್.ರಾಹುಲ್‌ಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಹುಲ್ ಅವರನ್ನು ಕಡೆಗಣಿಸಿದ ವೇಳೆ ತಾವು ಆಯ್ಕೆಗಾರರೇ ಆಗಿರಲಿಲ್ಲ ಎಂದರು.
ಜಡೇಜಾ ‘ಕೈಬಿಟ್ಟಿಲ್ಲ’: ರವೀಂದ್ರ ಜಡೇಜಾ ಅವರನ್ನು ‘ಕೈಬಿಟ್ಟಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು. ಆದರೆ ಇದನ್ನು ಆಯ್ಕೆ ಸಮಿತಿ ಸ್ಪಷ್ಟಪಡಿಸಬೇಕಿತ್ತು ಎಂದು ಅವರು ಒಪ್ಪಿಕೊಂಡರು. ಈ ವರ್ಷ ಬಿಡುವಿಲ್ಲದ ವೇಳಾಪಟ್ಟಿ ಇದೆ. ಅವರು ಹೆಚ್ಚಿನ ಟೆಸ್ಟ್ ಪಂದ್ಯಗಳಿಗೆ ಅವಕಾಶ ಪಡೆಯುತ್ತಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.