ADVERTISEMENT

ಕೆಪಿಎಲ್: ಶಿವಮೊಗ್ಗ ಲಯನ್ಸ್‌ ವಿರುದ್ಧ ಮೈಸೂರು ವಾರಿಯರ್ಸ್‌ಗೆ 6 ವಿಕೆಟ್ ಗೆಲುವು

ಮಹಮ್ಮದ್ ನೂಮಾನ್
Published 28 ಆಗಸ್ಟ್ 2018, 19:16 IST
Last Updated 28 ಆಗಸ್ಟ್ 2018, 19:16 IST
ರಾಜೂ ಭಟ್ಕಳ್ ಅವರ ಬ್ಯಾಟಿಂಗ್ ಶೈಲಿ  –ಪ್ರಜಾವಾಣಿ ಚಿತ್ರ/ಸವಿತಾ ಬಿ.ಆರ್‌
ರಾಜೂ ಭಟ್ಕಳ್ ಅವರ ಬ್ಯಾಟಿಂಗ್ ಶೈಲಿ –ಪ್ರಜಾವಾಣಿ ಚಿತ್ರ/ಸವಿತಾ ಬಿ.ಆರ್‌   

ಮೈಸೂರು: ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಮಂಗಳವಾರ ಸೇರಿದ್ದ ಪ್ರೇಕ್ಷಕರ ಮನಗೆದ್ದ ರಾಜೂ ಭಟ್ಕಳ್‌ ಅವರು ಮೈಸೂರು ವಾರಿಯರ್ಸ್‌ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು. ಕರ್ನಾಟಕ ಪ್ರೀಮಿಯರ್ ಲೀಗ್‌ (ಕೆಪಿಎಲ್) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ವಾರಿಯರ್ಸ್‌ ತಂಡ ಶಿವಮೊಗ್ಗ ಲಯನ್ಸ್‌ ವಿರುದ್ಧ ಆರು ವಿಕೆಟ್‌ಗಳಿಂದ ಗೆದ್ದಿತು.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಅನಿರುದ್ಧ್ ಜೋಷಿ ಬಳಗ 20 ಓವರ್‌ಗಳಲ್ಲಿ 10 ವಿಕೆಟ್‌ಗಳಿಗೆ 146 ರನ್‌ ಪೇರಿಸಿದರೆ, ವಾರಿಯರ್ಸ್‌ 17.2 ಓವರ್‌ಗಳಲ್ಲಿ 4 ವಿಕೆಟ್‌ಗೆ 147 ರನ್‌ ಗಳಿಸಿತು. ಟೂರ್ನಿಯಲ್ಲಿ ಎರಡನೇ ಗೆಲುವು ಪಡೆದ ವಾರಿಯರ್ಸ್ ತಂಡ ನಾಲ್ಕು ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನಕ್ಕೇರಿತು. ಸತತ ಮೂರನೇ ಸೋಲಿನೊಂದಿಗೆ ಲಯನ್ಸ್‌ ಕೊನೆಯ ಸ್ಥಾನದಲ್ಲಿದೆ.

ಭರ್ಜರಿ ಆಟ: ಸಾಧಾರಣ ಗುರಿ ಬೆನ್ನಟ್ಟಿದ ವಾರಿಯರ್ಸ್‌ಗೆ ರಾಜೂ (59 ರನ್, 45 ಎಸೆತ, 8 ಬೌಂ) ಮತ್ತು ಅರ್ಜುನ್‌ ಹೊಯ್ಸಳ (40 ರನ್, 28 ಎಸೆತ, 3 ಬೌಂ, 2 ಸಿ.) ಬಿರುಸಿನ ಆರಂಭ ನೀಡಿದರು. ಅಭಿಮನ್ಯು ಮಿಥುನ್‌ ಅವರನ್ನೊಳಗೊಂಡ ಎದುರಾಳಿ ತಂಡದ ಬೌಲಿಂಗ್‌ ದಾಳಿಯನ್ನು ಲೀಲಾಜಾಲವಾಗಿ ಎದುರಿಸಿದ ಈ ಜೋಡಿ 11.2 ಓವರ್‌ಗಳಲ್ಲಿ 99 ರನ್‌ ಕಲೆಹಾಕಿತು.

ADVERTISEMENT

ಇವರಿಬ್ಬರು ಅಲ್ಪ ಅಂತರದಲ್ಲಿ ಔಟಾದರೂ ಶೋಯೆಬ್‌ ಮ್ಯಾನೇಜರ್‌ (ಅಜೇಯ 25, 18 ಎಸೆತ) ಒತ್ತಡಕ್ಕೆ ಅವಕಾಶ ನೀಡದೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಬಿಗುವಾದ ಬೌಲಿಂಗ್‌: ವಾರಿಯರ್ಸ್‌ ಗೆಲುವಿನಲ್ಲಿ ಬೌಲರ್‌ಗಳ ಪಾತ್ರವೂ ಮಹತ್ವದ್ದಾಗಿತ್ತು. ಮೊದಲು ಬ್ಯಾಟ್‌ ಮಾಡಿದ ಲಯನ್ಸ್‌ ತಂಡ ಎದುರಾಳಿಗಳ ಬಿಗುವಾದ ಬೌಲಿಂಗ್‌ ಮುಂದೆ ಪರದಾಡಿತು. ಶರತ್ (46 ರನ್, 33 ಎಸೆತ, 7 ಬೌಂ. 1 ಸಿ.) ಮತ್ತು ಆದಿತ್ಯ ಸೋಮಣ್ಣ (39, 20 ಎಸೆತ, 4 ಬೌಂ, 2 ಸಿ.) ಮಾತ್ರ ಅಲ್ಪ ಪ್ರತಿರೋಧ ಒಡ್ಡಿದರು.

ನಿಹಾಲ್‌ ಉಳ್ಳಾಲ್ (6) ಅವರನ್ನು ರಾಜೂ ನೆರವಿನಿಂದ ಔಟ್‌ ಮಾಡಿಸಿದ ವೈಶಾಖ್‌ ವಿಜಯಕುಮಾರ್ ಎದುರಾಳಿ ತಂಡಕ್ಕೆ ಮೊದಲ ಆಘಾತ ನೀಡಿದರು. ಬಳಿಕ ಬಂದ ಕೆ.ರೋಹಿತ್ (8) ಮತ್ತು ನಿಶಾಂತ್‌ ಶೆಖಾವತ್ (3) ಅವರೂ ಬೇಗನೇ ಮರಳಿದರು. ವೈಶಾಖ್‌ ಮೊದಲ ಎರಡು ಓವರ್‌ಗಳಲ್ಲಿ ಕೇವಲ ಎಂಟು ರನ್‌ ನೀಡಿ ಒಂದು ವಿಕೆಟ್‌ ಪಡೆದರು. ಅಮಿತ್‌ ವರ್ಮಾ ಮತ್ತು ನಾಯಕ ಜೆ.ಸುಚಿತ್‌ ಅವರೂ ಪ್ರಭಾವಿ ದಾಳಿ ಸಂಘಟಿಸಿದರು.

ಸಂಕ್ಷಿಪ್ತ ಸ್ಕೋರು:ಶಿವಮೊಗ್ಗ ಲಯನ್ಸ್ 20 ಓವರ್‌ಗಳಲ್ಲಿ 146 (ಬಿ.ಆರ್‌.ಶರತ್ 46, ಕೆ.ರೋಹಿತ್ 8, ಆರ್‌.ಜೊನಾಥನ್ 29, ಆದಿತ್ಯ ಸೋಮಣ್ಣ ಔಟಾಗದೆ 39, ಜೆ.ಸುಚಿತ್ 24ಕ್ಕೆ 1, ಅಮಿತ್‌ ವರ್ಮಾ 20ಕ್ಕೆ 1, ಎನ್‌.ಪಿ.ಭರತ್ 27ಕ್ಕೆ 1, ಕುಶಾಲ್‌ ವಾಧ್ವಾನಿ 15ಕ್ಕೆ 2, ವೈಶಾಖ್‌ ವಿಜಯಕುಮಾರ್ 36ಕ್ಕೆ 2); ಮೈಸೂರು ವಾರಿಯರ್ಸ್ 17.2 ಓವರ್‌ಗಳಲ್ಲಿ 4 ವಿಕೆಟ್‌ಗೆ 147 (ಅರ್ಜುನ್‌ ಹೊಯ್ಸಳ 40, ರಾಜೂ ಭಟ್ಕಳ್ 59, ಅಮಿತ್‌ ವರ್ಮಾ 13, ಶೋಯೆಬ್‌ ಮ್ಯಾನೇಜರ್‌ ಔಟಾಗದೆ 25).

ಫಲಿತಾಂಶ: ಮೈಸೂರು ವಾರಿಯರ್ಸ್‌ಗೆ 6 ವಿಕೆಟ್‌ ಗೆಲುವು
ಪಂದ್ಯಶ್ರೇಷ್ಠ: ರಾಜೂ ಭಟ್ಕಳ್

ಮಂಗಳವಾರದ ಪಂದ್ಯ
ಶಿವಮೊಗ್ಗ ಲಯನ್ಸ್– ಬೆಳಗಾವಿ ಪ್ಯಾಂಥರ್ಸ್
ಆರಂಭ: ಸಂಜೆ 6.40
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ 2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.