ಮೈಸೂರು: ಕರ್ನಾಟಕ ಪ್ರೀಮಿಯರ್ ಲೀಗ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿ ಅರ್ಧಹಾದಿಯನ್ನು ಕ್ರಮಿಸಿದ್ದು, ಸೆಮಿಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಲು ತಂಡಗಳ ನಡುವೆ ಪೈಪೋಟಿ ಹೆಚ್ಚಿದೆ.
ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಎದುರಾಗಲಿವೆ. ಸೆಮಿ ಪ್ರವೇಶದ ಸಾಧ್ಯತೆಯನ್ನು ಜೀವಂತವಾಗಿರಿಸಿಕೊಳ್ಳಲು ಉಭಯ ತಂಡಗಳಿಗೂ ಜಯ ಅನಿವಾರ್ಯ.
ಕಳೆದ ಪಂದ್ಯದಲ್ಲಿ ಎದುರಾದ ಸೋಲಿನ ನಿರಾಸೆಯನ್ನು ಮರೆತು ಸಂಘಟಿತವಾಗಿ ಹೋರಾಡುವ ಸವಾಲು ಈ ತಂಡಗಳ ಮುಂದಿವೆ. ಜೆ.ಸುಚಿತ್ ನೇತೃತ್ವದ ವಾರಿಯರ್ಸ್ ತಂಡ ಭಾನುವಾರ ನಡೆದ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ಎದುರು ಮೂರು ರನ್‌ಗಳ ಸೋಲು ಅನುಭವಿಸಿತ್ತು. ಲಯನ್ಸ್ ತಂಡ ಬೆಂಗಳೂರು ಬ್ಲಾಸ್ಟರ್ಸ್ ಕೈಯಲ್ಲಿ 2 ವಿಕೆಟ್‌ಗಳಿಂದ ಸೋತಿತ್ತು.
ಐದು ಪಂದ್ಯಗಳಲ್ಲಿ ನಾಲ್ಕು ಸೋಲು ಅನುಭವಿಸಿರುವ ಬಳ್ಳಾರಿ ಟಸ್ಕರ್ಸ್ ತಂಡ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ನಾಲ್ಕು ಪಂದ್ಯಗಳಿಂದ ತಲಾ ಏಳು ಪಾಯಿಂಟ್ ಕಲೆಹಾಕಿರುವ ಬ್ಲಾಸ್ಟರ್ಸ್ ಮತ್ತು ಟೈಗರ್ಸ್ ತಂಡಗಳು ಸೆಮಿಫೈನಲ್ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.
ಸೆಮಿ ಪ್ರವೇಶಿಸಲ ಇನ್ನೆರಡು ತಂಡಗಳಿಗೆ ಅವಕಾಶವಿದ್ದು, ಆ ಸ್ಥಾನಗಳಿಗಾಗಿ ವಾರಿಯರ್ಸ್, ಲಯನ್ಸ್, ಬಿಜಾಪುರ ಬುಲ್ಸ್ ಮತ್ತು ಬೆಳಗಾವಿ ಪ್ಯಾಂಥರ್ಸ್ ತಂಡಗಳ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.
ಮೈಸೂರು ವಾರಿಯರ್ಸ್– ಶಿವಮೊಗ್ಗ ಲಯನ್ಸ್
ಆರಂಭ: ಸಂಜೆ 6.40ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 2
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.