ADVERTISEMENT

ಮಹಾರಾಜ ಟ್ರೋಫಿ ಟಿ- 20 ಕ್ರಿಕೆಟ್‌ ಟೂರ್ನಿ: ಮೈಸೂರು ವಾರಿಯರ್ಸ್‌ ತಂಡ ಪ್ರಕಟ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 13:49 IST
Last Updated 5 ಆಗಸ್ಟ್ 2022, 13:49 IST
‘ಮಹಾರಾಜ ಟ್ರೋಫಿ ಟ್ವೆಂಟಿ 20 ಕ್ರಿಕೆಟ್‌ ಟೂರ್ನಿ’ಗೆ ‘ಮೈಸೂರು ವಾರಿಯರ್ಸ್‌’ ತಂಡವನ್ನು ಶುಕ್ರವಾರ ಪ್ರಕಟಿಸಲಾಯಿತು
‘ಮಹಾರಾಜ ಟ್ರೋಫಿ ಟ್ವೆಂಟಿ 20 ಕ್ರಿಕೆಟ್‌ ಟೂರ್ನಿ’ಗೆ ‘ಮೈಸೂರು ವಾರಿಯರ್ಸ್‌’ ತಂಡವನ್ನು ಶುಕ್ರವಾರ ಪ್ರಕಟಿಸಲಾಯಿತು   

ಮೈಸೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ)ಯು ಇಲ್ಲಿನ ಮಾನಸಗಂಗೋತ್ರಿಯ ‘ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣ’ ಮತ್ತು ಬೆಂಗಳೂರಿನಲ್ಲಿ ಆ.7ರಿಂದ ಆ.26ರವರೆಗೆ ಆಯೋಜಿಸಿರುವ ‘ಮಹಾರಾಜ ಟ್ರೋಫಿ ಟ್ವೆಂಟಿ 20 ಕ್ರಿಕೆಟ್‌ ಟೂರ್ನಿ’ಗೆ, ಎನ್‌ಆರ್‌ ಸಮೂಹದ ಸೈಕಲ್‌ ಪ್ಯೂರ್‌ ಅಗರ್‌ಬತ್ತಿ ಮಾಲೀಕತ್ವದ ‘ಮೈಸೂರು ವಾರಿಯರ್ಸ್‌’ ತಂಡವನ್ನು ಶುಕ್ರವಾರ ಪ್ರಕಟಿಸಲಾಯಿತು.

ಕರುಣ್ ನಾಯರ್ ನಾಯಕತ್ವದ 20 ಆಟಗಾರರ ತಂಡವನ್ನು ಆಯ್ಕೆ ಮಾಡಲಾಗಿದೆ. ಶ್ರೇಯಸ್‌ ಗೋಪಾಲ್, ಪವನ್‌ ದೇಶಪಾಂಡೆ, ವಿದ್ಯಾಧರ ಪಾಟೀಲ, ನಿಹಾಲ್‌ ಉಲ್ಲಾಳ್ ಮತ್ತು ಚಿರಂಜೀವಿ (ಇಬ್ಬರೂ ವಿಕೆಟ್‌ ಕೀಪರ್‌ಗಳು), ಪ್ರತೀಕ್‌ ಜೈನ್, ಭರತ್‌ ಧೂರಿ, ಶುಭಾಂಗ್‌ ಹೆಗಡೆ, ಲೋಚನ್‌ ಅಪ್ಪಣ್ಣ, ಶಿವರಾಜ್‌, ಮೋನಿಶ್‌ ರೆಡ್ಡಿ, ವರುಣ್‌ ರಾವ್, ರಾಹುಲ್‌ ಪ್ರಸನ್ನ, ನಿತಿನ್ ಬಿಲ್ಲೆ, ಆದಿತ್ಯ ಗೋಯಲ್‌, ಅಭಿಷೇಕ್ ಅಲಾವತ್‌, ನಾಗ ಭರತ್, ಅರುಣ್ ಕೆ ಹಾಗೂ ತುಷಾರ್‌ ಎಚ್‌. ತಂಡದಲ್ಲಿದ್ದಾರೆ. ಅವರನ್ನು ನಗರದ ರ‍್ಯಾಡಿಷನ್‌ ಬ್ಲ್ಯೂ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಚಯಿಸಲಾಯಿತು.

ಮುಖ್ಯ ಕೋಚ್‌ ಪಿ.ವಿ. ಶಶಿಕಾಂತ್‌ ಅವರೊಂದಿಗೆ ಸಹಾಯಕ ಸಿಬ್ಬಂದಿಯನ್ನೂ ಪ್ರಕಟಿಸಲಾಯಿತು. ಸಂಯೋಜಕ ಎಂ.ಆರ್. ಸುರೇಶ್ ತಂಡವನ್ನು ಪರಿಚಯಿಸಿದರು. ಇದೇ ಮೊದಲ ಬಾರಿಗೆ ಪ್ರತಿ ತಂಡಕ್ಕೂ ಸೆಲೆಕ್ಟರ್‌ ನೇಮಿಸಿಕೊಳ್ಳಲಾಗುತ್ತಿದೆ. ಈ ತಂಡಕ್ಕೆ ಆಯ್ಕೆದಾರರಾಗಿ ಕೆ.ಎಲ್.ಅಶ್ವತ್ಥ್ ಕಾರ್ಯನಿರ್ವಹಿಸುತ್ತಿದ್ದಾರೆ.

ADVERTISEMENT

‘ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಎರಡು ವರ್ಷಗಳ ಬಿಡುವಿನ ನಂತರ ತಂಡದ ಸದಸ್ಯರಲ್ಲಿ ಆಸಕ್ತಿ ಮತ್ತು ಉತ್ಸಾಹ ಇಮ್ಮಡಿಯಾಗಿದೆ. ಕರುಣ್ ಅವರ ಸಮರ್ಥ ನಾಯಕತ್ವದಲ್ಲಿ ಅದ್ಭುತ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸವಿದೆ. ಕೋಚ್‌ ಪಿ.ವಿ.ಶಶಿಕಾಂತ್ ಹಾಗೂ ಸಹಾಯಕ ಕೋಚ್ ಅಕ್ಷಯ್ ತಂಡದವರು ಅನುಭವ ಧಾರೆ ಎರೆಯುತ್ತಿದ್ದಾರೆ. ಇದು ಅತ್ಯುತ್ತಮ ಪ್ರದರ್ಶನಕ್ಕೆ ಸಹಕಾರಿಯಾಗಲಿದೆ’ ಎಂದು ತಂಡದ ಮಾಲೀಕ ಮತ್ತು ಸೈಕಲ್‌ ಪ್ಯೂರ್‌ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್‌ ರಂಗ ವಿಶ್ವಾಸ ವ್ಯಕ್ತಪಡಿಸಿದರು.

‘ತಂಡವನ್ನು ಮುನ್ನಡೆಸುವ ದೊಡ್ಡ ಗೌರವ ನನಗೆ ಸಿಕ್ಕಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ. ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ನಮಗಿದೆ. ನನ್ನ ಹಾಗೂ ತಂಡದ ಮೇಲಿನ ನಂಬಿಕೆ ಉಳಿಸಿಕೊಳ್ಳುವುದಕ್ಕೆ ಶ್ರಮಿಸುತ್ತೇವೆ’ ಎಂದು ನಾಯಕ ಕರುಣ್ ನಾಯರ್‌ ಪ್ರತಿಕ್ರಿಯಿಸಿದರು.

ಮುಖ್ಯ ಕೋಚ್ ಪಿ.ವಿ.ಶಶಿಕಾಂತ್ ಮಾತನಾಡಿ, ‘ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಭರವಸೆ ಇದೆ. ದೊಡ್ಡ ಜವಾಬ್ದಾರಿಯನ್ನು ನನಗೆ ನೀಡಲಾಗಿದೆ. ಮೈಸೂರು ವಾರಿಯರ್ಸ್‌ನಂತಹ ತಂಡದೊಂದಿಗೆ ಸಹಭಾಗಿತ್ವ ಹೊಂದುವುದು ದೊಡ್ಡ ಸಂಗತಿಯೇ ಸರಿ. ಪ್ರತಿಭಾವಂತ ಆಟಗಾರರ ತಂಡ ನಮ್ಮದಾಗಿದೆ. ಅವರಿಗೆ ನನ್ನ ಅನುಭವದ ಆಧಾರದ ಮೇಲೆ ತರಬೇತಿ ನೀಡಿ ಸಜ್ಜುಗೊಳಿಸಲಿದ್ದೇನೆ. ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೇನೆ’ ಎಂದರು.

‘ಆಟಗಾರರ ಸಾಮರ್ಥ್ಯ ವೃದ್ಧಿಗೆ ಸಹಾಯಕ ಸಿಬ್ಬಂದಿಯೊಂದಿಗೆ ಶ್ರಮಿಸುತ್ತೇನೆ’ ಎಂದು ತಿಳಿಸಿದರು.

ಸಹಾಯಕ ತರಬೇತುದಾರರಾಗಿ ಕೆ.ಎಲ್.ಅಕ್ಷಯ್, ಫಿಜಿಯೊಥೆರಪಿಸ್ಟ್‌ ಆಗಿ ಟಿ.ಮಂಜುನಾಥ್‌, ಟ್ರೇನರ್‌ ಆಗಿ ಇರ್ಫಾನ್‌ಉಲ್ಲಾ ಖಾನ್ ಮತ್ತು ವಿಡಿಯೊ ವಿಶ್ಲೇಷಕರಾಗಿ ಕಿರಣ್‌ ಕೆ. ಕಾರ್ಯನಿರ್ವಹಿಸಲಿದ್ದಾರೆ.

ಕೆಎಸ್‌ಸಿಎ ಮೈಸೂರು ವಲಯ ಅಧ್ಯಕ್ಷ ಆರ್‌.ಕೆ.ಹರಿಕೃಷ್ಣ ಕುಮಾರ್‌, ಹಿಂದಿನ ಸಂಚಾಲಕ ಬಾಲಚಂದರ್‌ ಹಾಗೂ ಸೈಕಲ್‌ ಪ್ಯೂರ್‌ ಅಗರಬತ್ತಿ ಕಂಪನಿಯ ಪವನ್‌ ರಂಗ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.