ಬೆಂಗಳೂರು: ಮುಂಬರುವ ಟಿ–20 ವಿಶ್ವಕಪ್‌ಗೆ ಐರ್ಲೆಂಡ್ ಪುರುಷರ ಕ್ರಿಕೆಟ್ ತಂಡಕ್ಕೆ ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ನಂದಿನಿ ಬ್ರ್ಯಾಂಡ್ ಪ್ರಾಯೋಜಕತ್ವ ವಹಿಸಿದೆ. ಈ ಬಗ್ಗೆ ಕ್ರಿಕೆಟ್ ಐರ್ಲೆಂಡ್ ಸೋಮವಾರ ತನ್ನ ವೆಬ್‌ಸೈಟ್‌ನಲ್ಲಿ ಅಧಿಕೃತ ಘೋಷಣೆ ಮಾಡಿದೆ.
‘ವೆಲ್‌ಕಂ ನಂದಿನಿ’ ಎಂದು ತನ್ನ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ. ಅಲ್ಲದೆ ಜೆರ್ಸಿ ಮೇಲೆ ನಂದಿನಿ ಲಾಂಛನ ಇರುವ ಚಿತ್ರವನ್ನೂ ಪ್ರಕಟಿಸಿದೆ.
‘ಕರ್ನಾಟಕ ಹಾಲು ಒಕ್ಕೂಟವನ್ನು ಹೊಸ ಪಾಲುದಾರರಾಗಿ ಸ್ವಾಗತಿಸಲು ನಮಗೆ ಸಂತೋಷವಾಗುತ್ತಿದೆ. ಟಿ–20 ವಿಶ್ವಕಪ್‌ನಲ್ಲಿ ಐರ್ಲೆಂಡ್ ಪುರುಷರ ತಂಡದ ಅಧಿಕೃತ ಪ್ರಾಯೋಜಕರಾಗಿ ನಂದಿನಿಯನ್ನು ಘೋಷಿಸಲು ಹರ್ಷಿಸುತ್ತೇವೆ ’ ಎಂದು ಕ್ರಿಕೆಟ್ ಐರ್ಲೆಂಡ್‌ನ ಮುಖ್ಯ ಹಣಕಾಸು ಅಧಿಕಾರಿ ಆ್ಯಂಡ್ರ್ಯೂ ಮೇ ಹೇಳಿದ್ದಾರೆ.
‘ನಮ್ಮ ತಂಡಕ್ಕೆ ಪ್ರತಿಷ್ಠಿತ ಬ್ರ್ಯಾಂಡ್ ಒಂದು ಬೆಂಬಲ ನೀಡುವುದು, ಐರಿಷ್ ಕ್ರಿಕೆಟ್‌ನ ಬೆಳವಣಿಗೆಗೆ ಸಹಕಾರಿಯಾಗಲಿದೆ. ನಾವು ಕೆಎಂಎಫ್‌ನ ಕೆ.ಎಂ ಜಗದೀಶ್ ಹಾಗೂ ತಂಡಕ್ಕೆ ಧನ್ಯವಾದ ಸಲ್ಲಿಸುತ್ತೇವೆ. ಮುಂದಿನ ದಿನಗಳಲ್ಲಿ ಅವರೊಂದಿಗೆ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.
‘ಐರ್ಲೆಂಡ್ ಕ್ರಿಕೆಟ್ ತಂಡದೊಂದಿಗೆ ನಮ್ಮ ಪಾಲುದಾರಿಕೆಯನ್ನು ಘೋಷಿಸಲು ನಮಗೆ ತುಂಬಾ ಸಂತೋಷವಾಗಿದೆ. ನಂದಿನಿ ಶ್ರೇಷ್ಠತೆ ಮತ್ತು ಶುದ್ಧತೆಯನ್ನು ಪ್ರತಿನಿಧಿಸುತ್ತದೆ. ಕಳೆದ 40 ವರ್ಷಗಳಲ್ಲಿ ನಾವು ಮಾರುಕಟ್ಟೆಯನ್ನು ಜಾಗತಿಕವಾಗಿ ವಿಸ್ತರಿಸಿದ್ದೇವೆ. ಕ್ರಿಕೆಟ್ ಐರ್ಲೆಂಡ್‌ನೊಂದಿಗಿನ ನಮ್ಮ ಸಹಯೋಗವು ಕ್ರಿಕೆಟ್ ಅಭಿಮಾನಿಗಳ ಜಾಗತಿಕ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ. ನಮ್ಮ ಬ್ರ್ಯಾಂಡ್ ಅನ್ನು ವಿಶ್ವದಾದ್ಯಂತ ಹೆಚ್ಚಿನ ದೇಶಗಳಿಗೆ ವಿಸ್ತರಿಸುವಲ್ಲಿ ಇದು ಮಹತ್ವದ ಹೆಜ್ಜೆ’ ಎಂದು ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಹೇಳಿದ್ದಾಗಿ ಕ್ರಿಕೆಟ್ ಐರ್ಲೆಂಡ್ ತನ್ನ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ.
ಸ್ಕಾಟ್‌ಲೆಂಡ್ ಕ್ರಿಕೆಟ್ ತಂಡಕ್ಕೂ ನಂದಿನಿ ಪ್ರಾಯೋಜಕತ್ವ ವಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.