ಸೆಂಚುರಿಯನ್: ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ತಂಡವು ಈವರೆಗೆ ಯಾವುದೇ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಆದರೆ ರೋಹಿತ್ ಶರ್ಮಾ ಬಳಗವು, ಈ ಬಾರಿ ಚೊಚ್ಚಲ ಟೆಸ್ಟ್ ಕ್ರಿಕೆಟ್ ಸರಣಿ ಜಯಿಸುವತ್ತ ಗುರಿ ನೆಟ್ಟಿದೆ.
ದಕ್ಷಿಣ ಆಫ್ರಿಕಾ ತಂಡವನ್ನು ಅವರದ್ದೇ ನೆಲದಲ್ಲಿ ಮಣಿಸಿ ಟೆಸ್ಟ್ ಸರಣಿ ಗೆಲ್ಲಲು ಸ್ವಲ್ಪ ಅದೃಷ್ಟವೂ ಬೇಕು ಎಂದು ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.
ಒಂದರೆಡು ಸಲ ಸರಣಿ ಗೆಲುವಿನ ಸನಿಹಕ್ಕೆ ಬಂದಿದ್ದೆವು. ನಾವು ಇಲ್ಲಿ ಅತ್ಯುತ್ತಮ ಕ್ರಿಕೆಟ್ ಆಡಿದ್ದೇವೆ. ಆದರೆ ಕೆಲವು ನಿರ್ಣಾಯಕ ಕ್ಷಣಗಳನ್ನು ನಮ್ಮದಾಗಿಸಲು ಸಾಧ್ಯವಾಗಲಿಲ್ಲ. ಬಹುಶಃ 30-40 ರನ್ ಹೆಚ್ಚು ಗಳಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.
ಆದರೂ ಕಳೆದ ಬಾರಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿನ ಧನಾತ್ಮಕ ಅಂಶಗಳು ಹೆಚ್ಚಿನ ಆತ್ಮವಿಶ್ವಾಸವನ್ನು ನೀಡುತ್ತವೆ. ನಾವು ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದೆವು. ಎದುರಾಳಿ ತಂಡದ 20 ವಿಕೆಟ್‌ಗಳನ್ನು ಕಬಳಿಸಲು ಸಮರ್ಥರಾಗಿದ್ದೇವೆ ಎಂದು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ಪರಿಸ್ಥಿತಿಯಲ್ಲಿ ಆಡುವಾಗ ಶಿಸ್ತುಬದ್ಧವಾದ ಬೌಲಿಂಗ್ ಹಾಗೂ ಬ್ಯಾಟಿಂಗ್ ಜೊತೆಗೆ ಸ್ವಲ್ಪ ಅದೃಷ್ಟವೂ ಬೇಕಾಗುತ್ತದೆ ಎಂದು ದ್ರಾವಿಡ್ ಹೇಳಿದ್ದಾರೆ.
ಚೊಚ್ಚಲ ಟೆಸ್ಟ್ ಪಂದ್ಯ ಆಡುತ್ತಿರುವ ಕರ್ನಾಟಕದ ಪ್ರಸಿದ್ಧ ಕೃಷ್ಣ ಅವರನ್ನು ದ್ರಾವಿಡ್ ಶ್ಲಾಘಿಸಿದ್ದಾರೆ. ಪ್ರಸಿದ್ಧ ಪ್ರತಿಭಾವಂತ ಬೌಲರ್ ಆಗಿದ್ದು, ಇಲ್ಲಿನ ಪರಿಸ್ಥಿತಿಯಲ್ಲಿ ತಮ್ಮ ಆಟವನ್ನು ಆನಂದಿಸಲಿದ್ದಾರೆ ಎಂದು ಹೇಳಿದ್ದಾರೆ.
1992ರ ಬಳಿಕ ಭಾರತ ದಕ್ಷಿಣ ಆಫ್ರಿಕಾ ನೆಲದಲ್ಲಿ 23 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ನಾಲ್ಕು ಬಾರಿ ಮಾತ್ರ ಜಯ ಗಳಿಸಿದೆ. ಆದರೆ ಒಮ್ಮೆಯೂ ಸರಣಿ ಗೆಲ್ಲಲು ಸಾಧ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.