ADVERTISEMENT

ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ನೀತು ಡೇವಿಡ್‌ಗೆ ಹಾಲ್‌ ಆಫ್‌ ಫೇಮ್‌ ಗೌರವ

ಎಬಿ ಡಿ ವಿಲಿಯರ್ಸ್‌, ಅಲಿಸ್ಟರ್‌ ಕುಕ್‌ಗೂ ಗರಿ

ಪಿಟಿಐ
Published 16 ಅಕ್ಟೋಬರ್ 2024, 14:23 IST
Last Updated 16 ಅಕ್ಟೋಬರ್ 2024, 14:23 IST
ನೀತು ಡೇವಿಡ್
ನೀತು ಡೇವಿಡ್   

ದುಬೈ: ಭಾರತ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ಸ್ಪಿನ್ನರ್ ನೀತು ಡೇವಿಡ್‌ ಅವರನ್ನು ಐಸಿಸಿ ಹಾಲ್‌ ಆಫ್‌ ಫೇಮ್‌ ಗೌರವಕ್ಕೆ ಬುಧವಾರ ಆಯ್ಕೆ ಮಾಡಲಾಗಿದೆ. ಟೆಸ್ಟ್‌ ಇನಿಂಗ್ಸ್‌ ಒಂದರಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನ (53ಕ್ಕೆ8) ನೀಡಿದ ದಾಖಲೆ ಹೊಂದಿರುವ ನೀತು ಅವರು ಈ ಗೌರವಕ್ಕೆ ಪಾತ್ರರಾದ ದೇಶದ ಎರಡನೇ ಆಟಗಾರ್ತಿ ಎನಿಸಿದ್ದಾರೆ.

ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಎಬಿ ಡಿ ವಿಲಿಯರ್ಸ್ ಮತ್ತು ಇಂಗ್ಲೆಂಡ್ ತಂಡದ ಮಾಜಿ ನಾಯಕ ಆಲಿಸ್ಟರ್ ಕುಕ್‌ ಅವರೊಂದಿಗೆ ನೀತು ಈ ಗೌರವಕ್ಕೆ ಭಾಜನರಾಗಿದ್ದಾರೆ.

ಭಾರತ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಐಸಿಸಿ ಹಾಲ್‌ ಆಫ್‌ ಫೇಮ್‌ ಗೌರವಕ್ಕೆ ಪಾತ್ರರಾದ ಒಂದು ವರ್ಷದ ನಂತರ 47 ವರ್ಷ ವಯಸ್ಸಿನ ನೀತು ಸಹ ಈ ಗೌರವಕ್ಕೆ ಆಯ್ಕೆಯಾಗಿದ್ದಾರೆ. ಅವರು ಭಾರತ ಮಹಿಳಾ ತಂಡದ ಆಯ್ಕೆ ಸಮಿತಿ ಹಾಲಿ ಅಧ್ಯಕ್ಷೆ ಸಹ.

ADVERTISEMENT

ಎಡಗೈ ಸ್ಪಿನ್ನರ್ ನೀತು ಅವರು ಭಾರತ ತಂಡದ ಪರ 10 ಟೆಸ್ಟ್‌ ಪಂದ್ಯ ಹಾಗೂ 97 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದಿರುವ ಭಾರತದ ಬೌಲರ್‌ಗಳಲ್ಲಿ ಅವರು 141 ವಿಕೆಟ್‌ಗಳೊಂದಿಗೆ (16.34ರ ಸರಾಸರಿ) ಎರಡನೇ ಸ್ಥಾನದಲ್ಲಿದ್ದಾರೆ.

2005ರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದಿದ್ದ ಅವರು ಭಾರತ ತಂಡ ಮೊದಲ ಬಾರಿ ಫೈನಲ್ ತಲುಪಲು ಪ್ರಮುಖ ಪಾತ್ರ ವಹಿಸಿದ್ದರು.

‘ಐಸಿಸಿ ಹಾಲ್‌ ಆಫ್‌ ಫೇಮ್‌ಗೆ ಸೇರ್ಪಡೆ ನೈಜ ಗೌರವ. ರಾಷ್ಟ್ರೀಯ ತಂಡದ ಜೆರ್ಸಿ ಧರಿಸಿದ ಯಾವುದೇ ಆಟಗಾರ್ತಿಗೆ ಸಿಗುವ ಅತಿ ದೊಡ್ಡ ಮಾನ್ಯತೆ’ ಎಂದು ನೀತು ಅವರು ಐಸಿಸಿ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಉತ್ತರ ಪ್ರದೇಶ ಪರ ದೇಶಿ ಕ್ರಿಕೆಟ್‌ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿದ ನೀತು, 17ನೇ ವಯಸ್ಸಿಗೇ ಭಾರತ ತಂಡಕ್ಕೆ ಆಯ್ಕೆಯಾಗಿ 1995ರಲ್ಲಿ ನ್ಯೂಜಿಲೆಂಡ್‌ ವಿರುದ್ಧ ಟಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿ 4 ವಿಕೆಟ್ ಪಡೆದಿದ್ದರು. ಇಂಗ್ಲೆಂಡ್ ವಿರುದ್ಧ 1995ರ ಕೊನೆಯಲ್ಲಿ ಜಮ್ಷೆಡ್‌ಪುರದಲ್ಲಿ ನಡೆದ ಟೆಸ್ಟ್‌ನಲ್ಲಿ 53 ರನ್ನಿಗೆ 3 ವಿಕೆಟ್ ಪಡೆದಿದ್ದು ಈಗಲೂ ಮಹಿಳಾ ಕ್ರಿಕೆಟ್‌ನಲ್ಲಿ ಇನಿಂಗ್ಸ್ ಒಂದರಲ್ಲಿ ದಾಖಲಾದ ಶ್ರೇಷ್ಠ ಪ್ರದರ್ಶನವಾಗುಳಿದಿದೆ. 10 ಟೆಸ್ಟ್‌ಗಳಲ್ಲಿ 41 ವಿಕೆಟ್ ಪಡೆದಿದ್ದಾರೆ. ಅವರು 2006ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

ಕುಕ್ ಸಾಧನೆ:

ಕುಕ್‌ 250 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದಾರೆ. 2018ರಲ್ಲಿ ನಿವೃತ್ತರಾದಾಗ ಇಂಗ್ಲೆಂಡ್ ಪರ ಟೆಸ್ಟ್‌ಗಳಲ್ಲಿ ಅತಿ ಹೆಚ್ಚು ರನ್ ಮತ್ತು ಅತಿ ಹೆಚ್ಚು ಶತಕ ಗಳಿಸಿದ ಹಿರಿಮೆ ಹೊಂದಿದ್ದರು. ದೇಶದಲ್ಲಿ ಮತ್ತು ಹೊರಗೆ ಬ್ಯಾಟರ್ ಮತ್ತು ನಾಯಕನಾಗಿ ಯಶಸ್ಸು ಪಡೆದಿದ್ದರು.

ಡಿ ವಿಲಿಯರ್ಸ್‌:

‌14 ವರ್ಷಗಳ ಕ್ರಿಕೆಟ್‌ ಬದುಕಿನಲ್ಲಿ ಡಿ ವಿಲಿಯರ್ಸ್ ಅವರು ಮೂರು ಮಾದರಿಗಳಲ್ಲಿ 20,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ‘ಮಿ. 360’ ಎಂಬ ಖ್ಯಾತಿ ಹೊಂದಿರುವ ಅವರು ಹಲವು ಮೈಲಿಗಲ್ಲುಗಳನ್ನು ಸಾಧಿಸಿದವರು. ಏಕದಿನ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಪರ ಅತಿ ವೇಗದ ಅರ್ಧ ಶತಕ, ಶತಕ ಬಾರಿಸಿದವರು.

ಕ್ರಿಕೆಟ್‌ ಕಂಡ ಸ್ಫೋಟಕ ಆಟಗಾರರಲ್ಲಿ ಒಬ್ಬರೆಂದು ಗುರುತಿಸಿಕೊಂಡ ಆಟಗಾರನೆಂಬ ಹೆಗ್ಗಳಿಕೆ ಅವರದು.

ಐಸಿಸಿ ಶತಮಾನೋತ್ಸವದ ಭಾಗವಾಗಿ 2009ರ ಜನವರಿಯಲ್ಲಿ ಐಸಿಸಿ ಹಾಲ್‌ ಆಫ್‌ ಫೇಮ್ ಗೌರವ ನೀಡುವ ಸಂಪ್ರದಾಯ ಆರಂಭವಾಯಿತು.

ಎಬಿ ಡಿ ವಿಲಿಯರ್ಸ್‌
ಆಲಸ್ಟರ್‌ ಕುಕ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.