ADVERTISEMENT

ಕಿವೀಸ್ ಎದುರು ಮುಗ್ಗರಿಸಿದ ಭಾರತ: ರಹಾನೆ–ಪೂಜಾರಗೆ ಅವಕಾಶ ನೀಡಲು ನೆಟ್ಟಿಗರ ಆಗ್ರಹ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಅಕ್ಟೋಬರ್ 2024, 10:53 IST
Last Updated 27 ಅಕ್ಟೋಬರ್ 2024, 10:53 IST
<div class="paragraphs"><p>ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ</p></div>

ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ

   

ನವದೆಹಲಿ: ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧದ ಮೊದಲೆರಡು ಟೆಸ್ಟ್‌ ಪಂದ್ಯಗಳಲ್ಲಿ ಹೀನಾಯವಾಗಿ ಸೋಲು ಅನುಭವಿಸುವ ಮೂಲಕ ಟೀಮ್ ಇಂಡಿಯಾ ಕಳಪೆ ಸಾಧನೆ ಮಾಡಿದೆ. ಇದರೊಂದಿಗೆ 2012ರ ನಂತರ ಭಾರತ ಇದೇ ಮೊದಲ ಬಾರಿ ತವರಿನಲ್ಲಿ ಸರಣಿ ಸೋತಿತ್ತು. ನ್ಯೂಜಿಲೆಂಡ್, ಇದೇ ಮೊದಲ ಬಾರಿ ಭಾರತದ ನೆಲದಲ್ಲಿ ಸರಣಿ ಜಯದ ಸಂಭ್ರಮ ಆಚರಿಸಿತ್ತು.

ಎರಡೂ ಪಂದ್ಯಗಳಲ್ಲಿ ಭಾರತ ತಂಡದ ನೀರಸ ಪ್ರದರ್ಶನದಿಂದ ಅಭಿಮಾನಿಗಳು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಜತೆಗೆ, ರೆಡ್ ಬಾಲ್ ಕ್ರಿಕೆಟ್‌ನ ಅನುಭವಿಗಳಾದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರನ್ನು ಆಯ್ಕೆ ಮಾಡುವಂತೆಯೂ ಒತ್ತಾಯಿಸಿದ್ದಾರೆ.

ADVERTISEMENT

ಬಾರ್ಡರ್‌– ಗವಾಸ್ಕರ್ ಟ್ರೋಫಿ ಟೂರ್ನಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದಲ್ಲಿ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರಿಗೆ ಅವಕಾಶ ನೀಡುವಂತೆ ಬಿಸಿಸಿಐಗೆ ನೆಟ್ಟಿಗರು ಮನವಿ ಮಾಡಿದ್ದಾರೆ.

‘ಬಿಸಿಸಿಐಗೆ ನಾಚಿಕೆಯಾಗಬೇಕು, ರಹಾನೆ ಮತ್ತು ಪೂಜಾರ ಆಸ್ಟ್ರೇಲಿಯಾದಲ್ಲಿ ನಡೆದ ಹಲವು ಟೆಸ್ಟ್ ಸರಣಿಗಳನ್ನು ಗೆಲ್ಲಲು ಸಾಕಷ್ಟು ಸಹಾಯ ಮಾಡಿದ್ದಾರೆ. ಸದ್ಯ ಇವರಿಬ್ಬರೂ ತಂಡದಲ್ಲಿಲ್ಲ. ಬಾರ್ಡರ್‌– ಗವಾಸ್ಕರ್ ಟ್ರೋಫಿ ಟೂರ್ನಿಗಾಗಿ ಅವರನ್ನು ತಂಡಕ್ಕೆ ಕರೆತನ್ನಿ’ ಎಂದು ನೆಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ.

‘ಬಿಸಿಸಿಐ ಆಯ್ಕೆ ಸಮಿತಿಯವರು ದಯವಿಟ್ಟು ನನ್ನ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಭಾರತ ಟೆಸ್ಟ್ ಸ್ಪೆಷಲಿಸ್ಟ್‌ಗಳಾದ ರಹಾನೆ, ಪೂಜಾರ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಅವರನ್ನು ತಂಡಕ್ಕೆ ಮರು ಆಯ್ಕೆ ಮಾಡದಿದ್ದರೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ’ ಎಂದು ಮತ್ತೊಬ್ಬ ನೆಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ.

ಅಭಿಮಾನಿಗಳು ಏನೇ ಹೇಳಿದರೂ ರಹಾನೆ ಮತ್ತು ಪೂಜಾರ ಅವರನ್ನು ಮತ್ತೆ ಟೆಸ್ಟ್ ತಂಡಕ್ಕೆ ಕರೆತರುವ ಸಾಧ್ಯತೆ ಕಾಣುತ್ತಿಲ್ಲ. ಚೇತೇಶ್ವರ ಪೂಜಾರ ಅವರು ಕೊನೆಯದಾಗಿ 2023ರ ಜೂನ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಕಣಕ್ಕಿಳಿದಿದ್ದರು. ರಹಾನೆ 2023ರ ಜುಲೈನಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದ ಟೀಮ್ ಇಂಡಿಯಾದ ಭಾಗವಾಗಿದ್ದರು.

ಪ್ರಸಕ್ತ ಸಾಲಿನ ನ್ಯೂಜಿಲೆಂಡ್ ವಿರುದ್ಧದ ಕೊನೆಯ ಟೆಸ್ಟ್‌ ಪಂದ್ಯ ಮುಂಬೈನ ವಾಂಖೆಡೆಯಲ್ಲಿ ನವೆಂಬರ್ 1ರಿಂದ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.