ADVERTISEMENT

ಇಂಗ್ಲೆಂಡ್ ವಿರುದ್ಧದ ಟೆಸ್ಟ್: ಎರಡನೇ ಸ್ಥಾನಕ್ಕೆ ಸಿರಾಜ್–ಇಶಾಂತ್ ಪೈಪೋಟಿ

ಭಾರತದ ಬೌಲಿಂಗ್‌ ಪಡೆಗೆ ಜಸ್‌ಪ್ರೀತ್ ಬೂಮ್ರಾ ಸಾರಥ್ಯ

ಪಿಟಿಐ
Published 3 ಫೆಬ್ರುವರಿ 2021, 4:22 IST
Last Updated 3 ಫೆಬ್ರುವರಿ 2021, 4:22 IST
ಇಶಾಂತ್ ಶರ್ಮಾ
ಇಶಾಂತ್ ಶರ್ಮಾ   

ನವದೆಹಲಿ: ಇದೇ ಐದರಿಂದ ಆರಂಭವಾಗಲಿರುವಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯದಲ್ಲಿ ಭಾರತದ ಎರಡನೇ ಮಧ್ಯಮವೇಗದ ಬೌಲರ್‌ ಸ್ಥಾನ ಯಾರಿಗೆ ಸಿಗಲಿದೆ ಎಂಬ ಕುತೂಹಲ ಗರಿಗೆದರಿದೆ.

ಹೋದ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಗಾಯಗೊಂಡಿದ್ದ ಜಸ್‌ಪ್ರೀತ್ ಬೂಮ್ರಾ ಈಗ ಫಿಟ್ ಆಗಿದ್ದು ಕಣಕ್ಕೆ ಮರಳುವುದು ಖಚಿತವಾಗಿದೆ. ಆದ್ದರಿಂದ ಅವರೇ ತಂಡದ ಬೌಲಿಂಗ್‌ ಸಾರಥ್ಯ ವಹಿಸುವರು. ಆದರೆ, ಎರಡನೇ ಮಧ್ಯಮವೇಗಿಯಾಗಿ ಕಣಕ್ಕಿಳಿಯಲು ಅನುಭವಿ ಇಶಾಂತ್ ಶರ್ಮಾ ಮತ್ತು ಯುವ ಆಟಗಾರ ಮೊಹಮ್ಮದ್ ಸಿರಾಜ್ ಅವರ ನಡುವೆ ಪೈಪೋಟಿ ಏರ್ಪಟ್ಟಿದೆ. ಚೆಪಾಕ್ ಪಿಚ್‌ನಲ್ಲಿ ಮೂವರು ಸ್ಪಿನ್ನರ್‌ ಮತ್ತು ಇಬ್ಬರು ಮಧ್ಯಮವೇಗಿಗಳು ಕಣಕ್ಕಿಳಿಯುವ ಸಾಧ್ಯತೆ ಇದೆ. ಆದ್ದರಿಂದ ತಂಡದ ವ್ಯವಸ್ಥಾಪನ ಮಂಡಳಿಗೆ ಎರಡನೇ ವೇಗಿಯ ಆಯ್ಕೆ ಸವಾಲಿನದ್ದಾಗಿದೆ.

ದೆಹಲಿಯ ಇಶಾಂತ್ ಶರ್ಮಾ ಅವರು ಐಪಿಎಲ್‌ನಲ್ಲಿ ಗಾಯಗೊಂಡಿದ್ದ ಕಾರಣ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿರಲಿಲ್ಲ. ಕಾಂಗರೂ ನಾಡಿನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಸಿರಾಜ್ ಮಿಂಚಿದ್ದರು. ಮೂರು ಟೆಸ್ಟ್‌ಗಳಲ್ಲಿ ಆಡಿ 13 ವಿಕೆಟ್‌ಗಳನ್ನೂ ಗಳಿಸಿದ್ದರು. ಸರಣಿಗೂ ಮುನ್ನ ಪಿತೃವಿಯೋಗದ ದುಃಖದಲ್ಲಿದ್ದ ಸಿರಾಜ್ ತವರಿಗೆ ಮರಳದೇ ತಂಡದಲ್ಲಿ ಉಳಿದಿದ್ದರು. ನಂತರ ತಮ್ಮ ಸಾಧನೆಯನ್ನು ಅಪ್ಪನಿಗೆ ಅರ್ಪಿಸಿದ್ದರು.

ADVERTISEMENT

’ಚೆಪಾಕ್‌ನಲ್ಲಿರುವುದು ಮೊದಲಿನದ್ದೇ ಆದ ಪಿಚ್‌. ಇಲ್ಲಿಯ ಉಷ್ಣಾಂಶವೂ ಹೆಚ್ಚು. ಪಿಚ್‌ನಲ್ಲಿ ಬಿರುಕುಗಳು ಮೂಡದಿರಲು ಗರಿಕೆಗಳು ಇರಬೇಕು. ಈ ಪಿಚ್‌ ಮೊದಲಿನಿಂದಲೂ ಸ್ಪಿನ್ನರ್‌ಗಳಿಗೇ ಹೆಚ್ಚು ನೆರವು ಕೊಟ್ಟಿದೆ. ಈಗಲೂ ಅದೇ ರೀತಿ ಆಗುವ ಸಾಧ್ಯತೆ ಇದೆ‘ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮೂಲಗಳು ಹೇಳಿವೆ.

ಆಸ್ಟ್ರೇಲಿಯಾ ಎದುರಿನ ಕೊನೆಯ ಟೆಸ್ಟ್‌ನಲ್ಲಿ ಬೂಮ್ರಾ ಆಡಿರಲಿಲ್ಲ. ಈಗ ಅವರು ಮರಳಿರುವುದು ತಂಡದ ಬಲ ಹೆಚ್ಚಿಸಿದೆ. ಗಾಬಾದಲ್ಲಿ ಬೌಲಿಂಗ್ ಸಾರಥ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದ ಸಿರಾಜ್, ಐದು ವಿಕೆಟ್ ಗೊಂಚಲು ಕೂಡ ಗಳಿಸಿದ್ದರು. ಆದ್ದರಿಂದ ಅವರಿಗೆ ಅವಕಾಶ ನೀಡಿದರೆ ಅಚ್ಚರಿಯೇನಿಲ್ಲ. ಆದರೆ ಇಂಗ್ಲೆಂಡ್ ವಿರುದ್ಧ ಉತ್ತಮ ದಾಖಲೆಗಳನ್ನು ಹೊಂದಿರುವ ಇಶಾಂತ್ ಅವರ ಅನುಭವಕ್ಕೆ ಮಣೆ ಹಾಕುವ ಸಾಧ್ಯತೆಯೂ ಇದೆ.

ನಾಯಕ ವಿರಾಟ್ ಕೊಹ್ಲಿ, ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತು ಬೌಲಿಂಗ್ ಕೋಚ್ ಭರತ್ ಅರುಣ್ ಪಂದ್ಯದ ಹಿಂದಿನ ದಿನ ತೆಗೆದುಕೊಳ್ಳುವ ನಿರ್ಧಾರವು ಮಹತ್ವದ್ದಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.