ADVERTISEMENT

ಭಾರತ ಕ್ರಿಕೆಟ್ ತಂಡದಲ್ಲಿ ಹೊಸಬರ ಆಗಮನ, ದಾಖಲೆಗಳ ನಿರೀಕ್ಷೆ

ಭಾರತ–ದಕ್ಷಿಣ ಆಫ್ರಿಕಾ ನಡುವಣ ಫ್ರೀಡಂ ಕ್ರಿಕೆಟ್ ಸರಣಿ

ಗಿರೀಶದೊಡ್ಡಮನಿ
Published 15 ಸೆಪ್ಟೆಂಬರ್ 2019, 19:30 IST
Last Updated 15 ಸೆಪ್ಟೆಂಬರ್ 2019, 19:30 IST
ಮಯಂಕ್ ಅಗರವಾಲ್ ಮತ್ತು ಕೆ.ಎಲ್. ರಾಹುಲ್
ಮಯಂಕ್ ಅಗರವಾಲ್ ಮತ್ತು ಕೆ.ಎಲ್. ರಾಹುಲ್   

ಭಾರತದ ಕ್ರಿಕೆಟ್ ಅಂಗಳದಲ್ಲಿ ಈಗ ಹೊಸ ನೀರು ಹರಿಯುವ ಹೊತ್ತು. ನವಪ್ರತಿಭೆಗಳ ಅನಾವರಣದ ಸೊಬಗು, ನಿರ್ಗಮಿತ ಸಾಧಕರ ಕನವರಿಕೆಗಳು, ನೂತನ ದಾಖಲೆಗಳು ಮೂಡುವ ಸಮಯ ಇದು.

ಭಾರತಕ್ಕೆ ಮಹಾತ್ಮ ಗಾಂಧಿ–ಮಂಡೇಲಾ ಫ್ರೀಡಂ ಕ್ರಿಕೆಟ್ ಸರಣಿ ಆಡಲು ಬಂದಿರುವ ದಕ್ಷಿಣ ಆಫ್ರಿಕಾ ತಂಡಕ್ಕೂ ಇದು ಹೊಸ ಹುಟ್ಟು ಪಡೆಯುವ ಕಾಲ. ಈ ತಂಡ ಈಗ ಮೊದಲಿನಂತೆ ‘ಬಲಿಷ್ಠ’ವಾಗುಳಿದಿಲ್ಲ. ಆದ್ದರಿಂದಲೇ ನಮ್ಮ ‘ಬೆಂಚ್‌ ಶಕ್ತಿ’ಯನ್ನು ಕಣಕ್ಕಿಳಿಸಿ ಪರೀಕ್ಷೆಗೆ ಒಡ್ಡಲು ಸಕಾಲ. ಟೆಸ್ಟ್ ಸರಣಿಗಾಗಿ ಹೋದ ಗುರುವಾರ ಆಯ್ಕೆಯಾದ ತಂಡದ ಮೇಲೊಮ್ಮೆ ಕಣ್ಣಾಡಿಸಿ.

ಶುಭಮನ್ ಗಿಲ್, ರಿಷಭ್ ಪಂತ್, ಮಯಂಕ್ ಅಗರವಾಲ್, ಮಂಡಳಿ ಅಧ್ಯಕ್ಷರ ಇಲೆವನ್‌ನಲ್ಲಿ ಆಡಲಿರುವ ಅಭಿಮನ್ಯು ಈಶ್ವರನ್, ಸಿದ್ದೇಶ್ ಲಾಡ್, ಧರ್ಮೇಂದ್ರಸಿಂಹ ಜಡೇಜ, ಇಶಾನ್ ಪೊರೆಲ್, ವಿಕೆಟ್‌ಕೀಪರ್ ಕೆ.ಎಸ್. ಭರತ್, ಪ್ರಿಯಾಂಕ್ ಪಾಂಚಾಲ್ ಜಲಜ್ ಸಕ್ಸೇನಾ, ಆವೇಶ್ ಖಾನ್ ಅವರಂತಹ ಯುವ ಆಟಗಾರರ ದೊಡ್ಡ ದಂಡು ಕಾಣುತ್ತದೆ. ಆದ್ದರಿಂದ ಆಯ್ಕೆ ಸಮಿತಿಗೆ ಹಲವಾರು ಆಯ್ಕೆಗಳ ಅವಕಾಶ ಇದೆ. ಅಷ್ಟೇ ಕಠಿಣವೂ ಇದೆ.

ADVERTISEMENT

ಪ್ರಮುಖವಾಗಿ ಭಾರತದ ಆರಂಭಿಕ ಬ್ಯಾಟಿಂಗ್ ಜೋಡಿಯನ್ನು ಹೊಂದಿಸುವ ಕೆಲಸ ಮತ್ತು ವಿಕೆಟ್‌ಕೀಪರ್‌ ಸಿದ್ಧಗೊಳಿಸುವುದು ಆಯ್ಕೆ ಸಮಿತಿಗೆ ಕಳೆದ ಮೂರು ವರ್ಷಗಳಿಂದ ದೊಡ್ಡ ಸವಾಲಾಗಿ ಕಾಡುತ್ತಿದೆ. ಪ್ರಯೋಗಗಳು ನಿರೀಕ್ಷೆಗೆ ತಕ್ಕಂತೆ ಯಶಸ್ವಿಯಾಗುತ್ತಿಲ್ಲ. ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಅವರಂತಹ ಆರಂಭಿಕ ಜೋಡಿಯನ್ನು ಸಿದ್ಧಗೊಳಿಸುವ ಪ್ರಯತ್ನ ಇನ್ನೂ ನಡೆಯುತ್ತಲೇ ಇದೆ.

ಅದರ ಫಲವಾಗಿಯೇ ಈಗ ಕೆ.ಎಲ್‌. ರಾಹುಲ್ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. ನಿಗದಿಯ ಓವರ್‌ಗಳ ಮಾದರಿಯ ಪರಿಣತ ರೋಹಿತ್ ಶರ್ಮಾ ಅವರ ಇನಿಂಗ್ಸ್‌ ಆರಂಭಕ್ಕೆ ವೇದಿಕೆ ಸಿದ್ಧವಾಗಿದೆ. ಅವರೊಂದಿಗೆ ಕರ್ನಾಟಕದ ಮಯಂಕ್ ಅಗರವಾಲ್ ಕೂಡ ಇರುವುದು ಇನ್ನೊಂದು ವಿಶೇಷ.

ಕಳೆದ ಎರಡು ವರ್ಷಗಳಲ್ಲಿ ರಾಹುಲ್, ಶಿಖರ್ ಧವನ್, ಮುರಳಿ ವಿಜಯ್, ಮಯಂಕ್, ಪೃಥ್ವಿ ಶಾ, ಹನುಮವಿಹಾರಿ ಮತ್ತು ಪಾರ್ಥಿವ್ ಪಟೇಲ್ ಅವರಿಗೆ ಆರಂಭಿಕ ಹೊಣೆ ನೀಡಲಾಗಿತ್ತು. ಅದರಲ್ಲಿ ಮಯಂಕ್ ಮತ್ತು ಪೃಥ್ವಿ ಶಾ ವಿಶ್ವಾಸ ಉಳಿಸಿಕೊಂಡಿದ್ದರು. ಆದರೆ ಪೃಥ್ವಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಗಾಯಗೊಂಡರು. ಅದರ ನಂತರ ಉದ್ದೀಪನ ಮದ್ದು ಸೇವನೆಯ ಆರೋಪದಲ್ಲಿ ನಿಷೇಧಕ್ಕೆ ಒಳಗಾದರು. ಇದರಿಂದಾಗಿ ಅವರು ಭಾರತ ತಂಡದಿಂದ ಬಹುತೇಕ ದೂರವೇ ಇರಬೇಕಾಯಿತು. ಅದು ಒಂದು ರೀತಿಯಲ್ಲಿ ರಾಹುಲ್‌ ಮತ್ತು ಶಿಖರ್ ಧವನ್‌ ಅವರಿಗೆ ವರದಾನವಾಯಿತು. ಆದರೆ ಇಬ್ಬರೂ ತಮ್ಮ ಪ್ರತಿಭೆಗೆ ತಕ್ಕ ಆಟವನ್ನು ಆಡದೇ ಸೋತರು.

ಹೋದ ವರ್ಷ ಆಸ್ಟ್ರೇಲಿಯಾದಲ್ಲಿ ಪದಾರ್ಪಣೆ ಮಾಡಿದ ಮಯಂಕ್ ಆಯ್ಕೆ ಸಮಿತಿಯ ಗಮನ ಸೆಳೆದರು. ಇತ್ತೀಚೆಗೆ ವೆಸ್ಟ್ ಇಂಡೀಸ್‌ನಲ್ಲಿ ಸಿಕ್ಕ ಅವಕಾಶಗಳನ್ನು ತಕ್ಕಮಟ್ಟಿಗೆ ಬಳಸಿಕೊಂಡರು. ಆದರೆ ಅವರಿಂದಲೂ ಇನ್ನೂ ದೊಡ್ಡ ಮೊತ್ತದ ಇನಿಂಗ್ಸ್‌ ಹೊರಹೊಮ್ಮಬೇಕಿದೆ. ಈ ಸರಣಿಯು ಅವರ ಭವಿಷ್ಯದ ದಿಕ್ಸೂಚಿಯೂ ಹೌದು. ಏಕೆಂದರೆ ಒಂದೊಮ್ಮೆ ಅವರು ವೈಫಲ್ಯ ಅನುಭವಿಸಿದರೆ, ಅವರನ್ನು ಕೈಬಿಟ್ಟು, ಹೊಸಬರನ್ನು ಆಯ್ಕೆ ಮಾಡಲು ಸಾಕಷ್ಟು ಆಯ್ಕೆಗಳು ಇವೆ.

ಫಿಟ್‌ನೆಸ್‌ ಸಮಸ್ಯೆಯಿಂದ ಚೇತರಿಸಿಕೊಂಡಿರುವ ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ ಅವರಿಗೆ ಈ ಸರಣಿಯಲ್ಲಿ ಕಣಕ್ಕಿಳಿಯುವ ಅವಕಾಶ ಸಿಗಬಹುದು. ಮಹೇಂದ್ರಸಿಂಗ್ ಧೋನಿ 2014ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ ಸಹಾ ಭರವಸೆ ಮೂಡಿಸಿದ್ದ ವಿಕೆಟ್‌ಕೀಪರ್ . ಆದರೆ, ಮಧ್ಯದಲ್ಲಿ ಗಾಯದ ಸಮಸ್ಯೆ ಅವರನ್ನು ಕಾಡಿತು. ಅದರಿಂದಾಗಿ ಹೋದ ವರ್ಷ ವಿದೇಶದ ಸರಣಿಗಳಲ್ಲಿ ರಿಷಭ್ ಪಂತ್‌ಗೆ ಅವಕಾಶ ಸಿಕ್ಕಿತು. ಪಂತ್ ಕೂಡ ಅಲ್ಲಿ ಮಿಂಚಿದ್ದರು.

ಆದರೆ, ವಿಶ್ವಕಪ್‌ ಟೂರ್ನಿಯಿಂದ ಈಚೆಗೆ ಅವರ ಬ್ಯಾಟ್‌ನಿಂದ ರನ್‌ಗಳು ಹರಿಯುತ್ತಿಲ್ಲ. ವಿಂಡೀಸ್ ಸರಣಿಯಲ್ಲಿಯೂ ಅವರದ್ದು ಹೇಳಿಕೊಳ್ಳುವಂತಹ ಆಟವಲ್ಲ. ಕೀಪಿಂಗ್‌ನಲ್ಲಿಯೂ ಏಕಾಗ್ರತೆಯ ಕೊರತೆ ಕಾಣುತ್ತಿದೆ. ತಮ್ಮ ‘ದೌರ್ಬಲ್ಯ’ಗಳನ್ನು ಮೀರಿ ನಿಂತರೆ ಶ್ರೇಷ್ಠ ಆಟಗಾರನಾಗುವ ಪ್ರತಿಭೆ ಪಂತ್‌ ಗೆ ಇದೆ. ಅದನ್ನು ಮನಗಂಡೇ ಈ ಸರಣಿಗೂ ಅವರಿಗೆ ಅವಕಾಶ ನೀಡಲಾಗಿದೆ. ಟ್ವೆಂಟಿ–20 ಸರಣಿಗೂ ಅವರಿಗೇ ಆದ್ಯತೆ ಕೊಡಲಾಗಿದೆ. ಧೋನಿ ಅವರನ್ನು ಪರಿಗಣಿಸಿಲ್ಲ. ದೆಹಲಿಯ ಎಡಗೈ ಬ್ಯಾಟ್ಸ್‌ಮನ್ ಈ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತಾರೆ ನೋಡಬೇಕಷ್ಟೇ?

ಬೂಮ್ರಾಗೆ ‘ಪದಾರ್ಪಣೆ’
ಮಧ್ಯಮವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾಗೆ ಸ್ವದೇಶದ ಅಂಗಳದಲ್ಲಿ ಮೊದಲ ಸರಣಿ ಇದು. ಆದ್ದರಿಂದಲೇ ಅವರ ಸುತ್ತಲೂ ಕುತೂಹಲದ ಕಣ್ಣುಗಳು ನೆಟ್ಟಿವೆ. ತಮ್ಮ ಎಲ್ಲ 12 ಟೆಸ್ಟ್‌ ಪಂದ್ಯಗಳನ್ನೂ ವಿದೇಶಗಳಲ್ಲಿಯೇ ಆಡಿರುವ ಅವರು ಐಸಿಸಿ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾ, ವಿಂಡೀಸ್‌ಗಳಲ್ಲಿ ತಮ್ಮ ಸ್ವಿಂಗ್, ಯಾರ್ಕರ್ ಜಾದೂ ತೋರಿಸಿರುವ ಅವರು ಇಲ್ಲಿಯ ಸ್ಪಿನ್‌ ಬೌಲರ್‌ಗಳ ಸ್ವರ್ಗದಂತಿರುವ ಪಿಚ್‌ಗಳಲ್ಲಿ ಯಾವ ರೀತಿ ಬೌಲಿಂಗ್ ಮಾಡಲಿದ್ದಾರೆ ಎಂದು ನೋಡಲು ಕ್ರಿಕೆಟ್‌ ಪರಿಣತರು ಕಣ್ಣಗಲಿಸಿ ಕೂತಿದ್ದಾರೆ.

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೂ ಟೆಸ್ಟ್‌ನಲ್ಲಿ ತಮ್ಮ ಛಾಪು ಮೂಡಿಸಲು ಮತ್ತೊಂದು ಅವಕಾಶ ಲಭಿಸಿದೆ. ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುವುದೊಂದೇ ಈಗ ಉಳಿದಿರುವ ದಾರಿ. ರವೀಂದ್ರ ಜಡೇಜ ಮತ್ತೊಮ್ಮೆ ವಿಶ್ವಾಸ ಉಳಿಸಿಕೊಳ್ಳುವ ಭರವಸೆ ಇದೆ.

ಹರಿಣಗಳಿಗೂ ಹೊಸ ಪರ್ವ

2016ರಲ್ಲಿ ದಕ್ಷಿಣ ಆಫ್ರಿಕಾ ತಂಡವು ಸರಣಿ ಆಡಲು ಬಂದಾಗ ಭಾರತಕ್ಕೆ ದಿಟ್ಟ ಸವಾಲು ಖಚಿತ ಎಂಬ ಭಾವನೆ ಎಲ್ಲರಲ್ಲೂ ಮೂಡಿತ್ತು. ಏಕೆಂದರೆ, ಆಗಿನ ತಂಡದಲ್ಲಿ ಎಬಿ ಡಿವಿಲಿಯರ್ಸ್, ಹಾಶೀಂ ಆಮ್ಲಾ, ಡೆಲ್ ಸ್ಟೇಯ್ನ್ ಅವರಿದ್ದರು. ಪಂದ್ಯದ ಫಲಿತಾಂಶವನ್ನು ತಮ್ಮ ಪರವಾಗಿ ವಾಲಿಸಿಕೊಳ್ಳುವ ಸಾಮರ್ಥ್ಯ ಅವರಿಗೆ ಇತ್ತು. ಆದರೆ, ಈಗಿನ ತಂಡದಲ್ಲಿ ನಾಯಕ ಫಾಫ್ ಡುಪ್ಲೆಸಿ ಬಿಟ್ಟರೆ ಉಳಿದವರದ್ದು ಹೊಸ ಹೆಸರುಗಳೇ.

ಆದರೆ ಬೇರೆ ಬೇರೆ ಮಾದರಿಗಳಲ್ಲಿ ಸಾಧನೆ ಮಾಡಿರುವ ತೆಂಬಾ ಬವುಮಾ, ಜುಬೇರ್ ಹಮ್ಜಾ, ಕ್ವಿಂಟನ್ ಡಿ ಕಾಕ್, ಬೌಲರ್‌ಗಳಾದ ಲುಂಗಿ ಗಿಡಿ, ಆ್ಯಂಡಿಲೆ ಪಿಶುವಾಯೊ ಅವರು ಪ್ರತಿಭಾನ್ವಿತರು. ಅವರನ್ನು ಕಡೆಗಣಿಸುವಂತಿಲ್ಲ. ಯಾವುದೇ ಕ್ಷಣದಲ್ಲಿಯೂ ಅವರು ತಿರುಗೇಟು ನೀಡಬಲ್ಲರು. ಎಲ್ಲಕ್ಕಿಂತ ಹೆಚ್ಚಾಗಿ ಪಾತಾಳಕ್ಕಿಳಿದಿರುವ ತಮ್ಮ ದೇಶದ ಕ್ರಿಕೆಟ್‌ ಅನ್ನು ಮತ್ತೆ ಉನ್ನತ ಮಟ್ಟಕ್ಕೆ ತರುವ ಹೊಣೆ ಈ ಯುವ ಕ್ರಿಕೆಟಿಗರ ಮೇಲಿದೆ.

ವಿಶ್ವಕಪ್ ಟೂರ್ನಿಯಲ್ಲಿ ಈ ತಂಡದ ಕಳಪೆ ಆಟ ಜಗಜ್ಜಾಹೀರಾಗಿತ್ತು. ತಾರೆಗಳ ಕೊರತೆಯಿಂದಾಗಿ ಇಲ್ಲಿಯ ಕ್ರಿಕೆಟ್ ಸೊರಗಿದ್ದು ಎದ್ದುಕಂಡಿತ್ತು. ಕೇವಲ ಮೂರ್ನಾಲ್ಕು ವರ್ಷಗಳ ಹಿಂದೆ ಇಂಗ್ಲೆಂಡ್, ಆಸ್ಟ್ರೇಲಿಯಾ, ಭಾರತದಂತಹ ಉತ್ತಮ ತಂಡಗಳೊಂದಿಗೆ ಸರಿಸಮನಾಗಿ ಗುರುತಿಸಿಕೊಂಡಿದ್ದ ದಕ್ಷಿಣ ಆಫ್ರಿಕಾ ಈಗ ಮತ್ತೆ ಶೂನ್ಯದಿಂದ ತನ್ನ ಸುಧಾರಣೆಯ ಪರ್ವ ಆರಂಭಿಸಬೇಕಿದೆ.

ಏಕೆಂದರೆ, ಈ ಸರಣಿಯೂ ವಿಶ್ಟ ಟೆಸ್ಟ್ ಚಾಂಪಿಯನ್‌ಷಿಪ್‌ನ ಅಂಗವಾಗಿದೆ. ವಿಂಡೀಸ್ ವಿರುದ್ಧ ಜಯಭೇರಿ ಬಾರಿಸಿರುವ ಭಾರತ ತಂಡವು ಈಗ ಮುಂಚೂಣಿಯಲ್ಲಿದೆ. ತವರಿನಲ್ಲಿ ಭಾರತ ತಂಡವನ್ನು ಎದುರಿಸುವುದು ಸುಲಭವಲ್ಲ ಎಂಬುದು ಫಾಫ್ ಬಳಗಕ್ಕೂ ಗೊತ್ತಿದೆ. ಆದರೆ, ಇದೇ ಮೊದಲ ಸಲ ಭಾರತ ತಂಡವನ್ನು ಇಲ್ಲಿಯೇ ಸೋಲಿಸಿ ಇತಿಹಾಸ ನಿರ್ಮಿಸುವ ಅವಕಾಶವೂ ಇದೆ. ಪ್ರವಾಸಿ ತಂಡವು ದಿಟ್ಟ ಮನೋಭಾವದಿಂದ ಆಡಿದರೆ ರೋಚಕ ಸರಣಿಯು ಕಣ್ತುಂಬಿಕೊಳ್ಳುವ ಅವಕಾಶ ಕ್ರಿಕೆಟ್‌ಪ್ರಿಯರಿಗೆ ಸಿಗಲಿದೆ. ಎರಡೂ ತಂಡಗಳಲ್ಲಿ ಹೊಸ ತಾರೆಯರ ಉದಯವೂ ಆಗಬಹುದು!‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.