ADVERTISEMENT

ICC Women's T20 WC Final | ಹೊಸ ಚಾಂಪಿಯನ್ನರ ಉದಯಕ್ಕೆ ವೇದಿಕೆ ಸಜ್ಜು

ಮಹಿಳಾ ಟಿ20 ವಿಶ್ವಕಪ್‌ ಫೈನಲ್ ಇಂದು

ಪಿಟಿಐ
ಏಜೆನ್ಸೀಸ್
Published 20 ಅಕ್ಟೋಬರ್ 2024, 0:02 IST
Last Updated 20 ಅಕ್ಟೋಬರ್ 2024, 0:02 IST
<div class="paragraphs"><p>ದಕ್ಷಿಣ ಆಫ್ರಿಕಾ vs ನ್ಯೂಜಿಲೆಂಡ್</p></div>

ದಕ್ಷಿಣ ಆಫ್ರಿಕಾ vs ನ್ಯೂಜಿಲೆಂಡ್

   

ಚಿತ್ರ ಕೃಪೆ:X/@T20WorldCup

ದುಬೈ: ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುಣ ಭಾನುವಾರ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದ ಫಲಿತಾಂಶ ಏನೇ ಇರಲಿ, ಗೆಲ್ಲುವ ತಂಡ ಮೊದಲ ಬಾರಿ ಚಾಂಪಿಯನ್ ಎನಿಸಲಿದೆ. ಎರಡೂ ತಂಡಗಳು ಈ ಹಿಂದೆ ಈ ಪ್ರತಿಷ್ಠಿತ ಟ್ರೋಫಿ ಗೆದ್ದಿಲ್ಲ.

ADVERTISEMENT

ಇದುವರೆಗೆ ನಡೆದಿರುವ ಎಂಟು ಟೂರ್ನಿಗಳಲ್ಲಿ ಆರು ಬಾರಿ ಆಸ್ಟ್ರೇಲಿಯಾ ಗೆದ್ದು ಬೀಗಿದೆ. ಈ ತಂಡ ಬಿಟ್ಟರೆ, 2009ರ ಮೊದಲ ಆವೃತ್ತಿಯಲ್ಲಿ ಇಂಗ್ಲೆಂಡ್ ಮತ್ತು 2016ರಲ್ಲಿ ವೆಸ್ಟ್‌ ಇಂಡೀಸ್ ತಂಡ ಮಾತ್ರ ಟ್ರೋಫಿ ಎತ್ತಿಹಿಡಿದಿವೆ.

ನ್ಯೂಜಿಲೆಂಡ್‌ ಕ್ರಿಕೆಟ್‌ಗೆ ವೈಭವದ ದಿನಗಳನ್ನು ಕಾಣಿಸಿದ ಮೂವರು ಆಟಗಾರ್ತಿಯರಿಗೆ ಇದು ವಿಶ್ವಕಪ್ ಗೆಲ್ಲಲು ಇರುವ ಕೊನೆಯ ಅವಕಾಶ. ಈಗಿನದು ಚುಟುಕು ಕ್ರಿಕೆಟ್ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ಗೆ ಮೂರನೇ ಫೈನಲ್. ಈ ಹಿಂದೆ ಒಮ್ಮೆ ಇಂಗ್ಲೆಂಡ್‌ಗೆ, ಮತ್ತೊಮ್ಮೆ ಆಸ್ಟ್ರೇಲಿಯಾಕ್ಕೆ ಮಣಿದಿತ್ತು.

ಈ ವಿಶ್ವಕಪ್‌ಗೆ ಮೊದಲು ನ್ಯೂಜಿಲೆಂಡ್‌ ಸತತವಾಗಿ 10 ಪಂದ್ಯಗಳನ್ನು ಸೋತಿತ್ತು. ಆದರೆ ಸೋಫಿ ಡಿವೈನ್ ನಾಯಕತ್ವ, ಅನುಭವಿಗಳಾದ ಸೂಝಿ ಬೇಟ್ಸ್‌, ಅಮೇಲಿಯಾ ಕೆರ್‌ ಅವರು ಉತ್ತಮ ಪ್ದರ್ಶನ ನೀಡಿ ತಂಡ ಈ ಹಂತಕ್ಕೆ ಬರಲು ನೆರವಾದರು.

ಕಿವೀಸ್‌ನ ದಿಗ್ಗಜ ಆಟಗಾರ್ತಿಯರಾದ ಸೋಫಿ ಡಿವೈನ್‌, ಬೇಟ್ಸ್‌, ಲೀ ತಹುಹು ಅವರ ಪಾಲಿಗೆ ಈ ವಿಶ್ವಕಪ್‌ ಬಹುಶಃ ಕೊನೆಯದು. 35 ವರ್ಷ ವಯಸ್ಸಿನ ಡಿವೈನ್ ಸೀಮಿತ ಓವರುಗಳ ಕ್ರಿಕೆಟ್‌ನಲ್ಲಿ 7000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 37 ವರ್ಷ ವಯಸ್ಸಿನ ಬೇಟ್ಸ್‌ 10 ಸಾವಿರಕ್ಕೂ ಹೆಚ್ಚು ರನ್ ಹರಿಸಿದ್ದಾರೆ. ಪೇಸ್ ಬೌಲರ್‌, 34 ವರ್ಷ ವಯಸ್ಸಿನ ತಹುಹು ಏಕದಿನ ಕ್ರಿಕೆಟ್‌ನಲ್ಲಿ 112 ಮತ್ತು ಟಿ20 ಕ್ರಿಕೆಟ್‌ನಲ್ಲಿ 93 ವಿಕೆಟ್‌ ಗಳಿಸಿದ್ದಾರೆ. ಕಪ್‌ ಗೆಲ್ಲಲು ಅವರೆಲ್ಲಾ ಶತಪ್ರಯತ್ನ ಹಾಕುವುದು ಖಚಿತ.

ಈ ಹಿಂದಿನ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ್ದ ದಕ್ಷಿಣ ಆಫ್ರಿಕಾ ಕೂಡ ಮತ್ತೊಮ್ಮೆ ಒದಗಿಬಂದಿರುವ ಈ ಅವಕಾಶದ ಸದುಪಯೋಗಕ್ಕೆ ಎಲ್ಲ ರೀತಿಯಿಂದ ಮುಂದಾಗಲಿದೆ. 2023ರ ವಿಶ್ವಕಪ್‌ನಲ್ಲಿ ಹರಿಣಗಳ ತಂಡ ಕೇವಲ 19 ರನ್‌ಗಳಿಂದ ಆಸ್ಟ್ರೇಲಿಯಾಕ್ಕೆ ಮಣಿದಿತ್ತು.

ಅಮೆಲಿಯಾ ಕೆರ್‌ 12 ವಿಕೆಟ್‌ ಪಡೆದು ಬೌಲರ್‌ಗಳ ಪೈಕಿ ಮುಂಚೂಣಿಯಲ್ಲಿದ್ದಾರೆ. ಅನುಭವಿ ತಹುಹು ಅವರಿಗೆ ಬೆಂಬಲವಾಗಿ ಎಡೆನ್‌ ಕಾರ್ಸನ್ (8 ವಿಕೆಟ್) ಮತ್ತು ರೋಸ್ಮೆರಿ ಮೇಯ್ರ್ (7) ನಿಂತಿದ್ದಾರೆ. ಆಸ್ಟ್ರೇಲಿಯಾಕ್ಕೆ 60 ರನ್‌ಗಳಿಂದ ಸೋತಿದ್ದು ಬಿಟ್ಟರೆ, ನ್ಯೂಜಿಲೆಂಡ್‌ ಉಳಿದೆಲ್ಲಾ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದೆ.

ಹರಿಣಗಳ ಸವಾಲು:

ದಕ್ಷಿಣ ಆಫ್ರಿಕಾ ಸೆಮಿಫೈನಲ್‌ನಲ್ಲಿ ಎಂಟು ವಿಕೆಟ್‌ಗಳಿಂದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಸೋಲಿಸಿ ಪರಾಕ್ರಮ ಮೆರೆದಿತ್ತು. ಸತತ ಎಂಟನೇ ಬಾರಿ ಫೈನಲ್ ತಲುಪುವ ಆಸ್ಟ್ರೇಲಿಯಾ ಪ್ರಯತ್ನವನ್ನು ಭಗ್ನಗೊಳಿಸಿದ್ದರು.

ನ್ಯೂಜಿಲೆಂಡ್‌ಗೆ ಬೌಲಿಂಗ್‌ನಲ್ಲಿ ಕೆರ್‌ ಪ್ರಮುಖ ಅಸ್ತ್ರವಾದರೆ, ದಕ್ಷಿಣ ಆಫ್ರಿಕಾದಲ್ಲಿ ಇಬ್ಬರು ಪ್ರಬಲ ಬ್ಯಾಟರ್‌ಗಳು ಅವರಿಗೆ ಸವಾಲೊಡ್ಡಬಲ್ಲರು. ಅಗ್ರ ಬ್ಯಾಟರ್‌ಗಳಾದ ಲಾರಾ ವೊಲ್ವಾರ್ಟ್‌ (190 ರನ್) ಮತ್ತು ತಾಜ್ಮಿನ್ ಬ್ರಿಟ್ಸ್‌ (170) ಟೂರ್ನಿಯಲ್ಲಿ ಯಶಸ್ಸು ಕಂಡಿದ್ದಾರೆ. ಆ್ಯನೆಕಿ ಬಾಷ್ ಮತ್ತು ಮರಿಝಾನೆ ಕಾಪ್ ಕೂಡ ಉತ್ತಮ ಕೊಡುಗೆ ನೀಡಬಲ್ಲರು.

ಬೌಲಿಂಗ್‌ನಲ್ಲಿ ನೊನ್‌ಕುಲುಲೆಕೊ ಮ್ಲಾಬಾ (10 ವಿಕೆಟ್‌), ಇತರ ಬೌಲರ್‌ಗಳ ಸಹಕಾರವಿದ್ದರೆ ಎದುರಾಳಿಗಳ ಮೇಲೆ ಒತ್ತಡ ಹೇರಬಲ್ಲರು.

ತಂಡಗಳು:

ನ್ಯೂಜಿಲೆಂಡ್‌: ಸೋಫಿ ಡಿವೈನ್ (ನಾಯಕಿ), ಸೂಝಿ ಬೇಟ್ಸ್, ಎಡೆನ್ ಕಾರ್ಸನ್, ಇಸಬೆಲ್ಲಾ ಗೇಝ್ (ವಿಕೆಟ್‌ ಕೀಪರ್), ಮ್ಯಾಡಿ ಗ್ರೀನ್, ಬ್ರೂಕ್ ಹ್ಯಾಲಿಡೆ, ಫ್ರಾನ್‌ ಜೊನಾಸ್‌, ಲೀಗ್ ಕ್ಯಾಸ್ಪರೆಕ್‌, ಅಮೇಲಿಯಾ ಕೆರ್‌, ಜೆಸ್‌ ಕೆರ್‌, ರೊಸ್ಮೆರಿ ಮೇರ್‌, ಮೊಲ್ಲಿ ಪೆನ್‌ಫೋಲ್ಡ್‌, ಜಾರ್ಜಿಯಾ ಪ್ಲಿಮ್ಮರ್‌, ಹನ್ನಾ ರೋವ್‌ ಮತ್ತು ಲಿಯಾ ತಹುಹು.

ದಕ್ಷಿಣ ಆಫ್ರಿಕಾ: ಲಾರಾ ವೋಲ್ವಾರ್ಟ್‌ (ನಾಯಕಿ), ಆ್ಯನೆಕಿ ಬಾಷ್‌, ತಾಝ್ಮಿನ್ ಬ್ರಿಟ್ಸ್‌, ನಡೈನ್‌ ಡಿ ಕ್ಲಾರ್ಕ್‌, ಅನ್ನೇರಿ ಡೆರ್ಕ್‌ಸೆನ್‌, ಮೀಕಿ ಡಿ ರಿಡ್ಡರ್‌ (ವಿಕೆಟ್‌ ಕೀಪರ್‌), ಅಯಂಡಾ ಹ್ಲುಬಿ, ಸಿನಲೊ ಜಾಫ್ಟಾ (ವಿಕಟ್‌ ಕೀಪರ್), ಮರಿಝಾನ್ ಕಾಪ್‌, ಅಯಬೊಂಗ ಖಾಕಾ, ಸೂನೆ ಲಸ್‌, ನೊನ್‌ಕುಲುಲೆಕೊ ಮ್ಲಬಾ, ಸೆಶ್ನೀ ನಾಯ್ಡು, ತುಮಿ ಸೆಖುಖುನೆ, ಕ್ಲೊ ಟ್ರಿಯಾನ್.

ಪಂದ್ಯ ಆರಂಭ: ರಾತ್ರಿ 7.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.