ಬೆಂಗಳೂರು: ಭಾನುವಾರ ಬೆಳಿಗ್ಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತದ ಬೌಲರ್‌ಗಳು ತಮ್ಮ ಬತ್ತಳಿಕೆಯಲ್ಲಿದ್ದ ಎಲ್ಲ ಅಸ್ತ್ರಗಳನ್ನೂ ಪ್ರಯೋಗಿಸಿದರು. ಆದರೂ ಅವರಿಗೆ, ನ್ಯೂಜಿಲೆಂಡ್ ತಂಡವು ಭಾರತದ ನೆಲದಲ್ಲಿ ಮೂವತ್ತಾರು ವರ್ಷಗಳ ನಂತರ ಟೆಸ್ಟ್ ಪಂದ್ಯ ಜಯಿಸುವುದನ್ನು ತಡೆಯಲಾಗಲಿಲ್ಲ.
ರೋಹಿತ್ ಶರ್ಮಾ ಪಡೆ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ 107 ರನ್‌ಗಳ ಗುರಿ ಬೆನ್ನಟ್ಟಿದ ಕಿವೀಸ್ ಬಳಗವು 8 ವಿಕೆಟ್‌ಗಳ ಜಯಸಾಧಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು. ಗುರಿ ಚಿಕ್ಕದೆಂಬ ಅತಿ ಆತ್ಮವಿಶ್ವಾಸ ಅಥವಾ ಗಡಿಬಿಡಿಯನ್ನು ತೋರಿಸದ ಪ್ರವಾಸಿ ಬಳಗವು ಎಚ್ಚರಿಕೆಯ ಆಟದ ಮೂಲಕ ಗೆಲುವಿನ ಗಮ್ಯ ತಲುಪಿತು. ಕಳೆದ ಮೂರು ದಿನಗಳಲ್ಲಿ ಭಾರತ ತಂಡದವರ ಗಟ್ಟಿ ಮನೋಬಲ ಮತ್ತು ಛಲದ ಆಟವನ್ನು ಎದುರಿಸಿದ್ದ ಕಿವೀಸ್ ಪಡೆ ಸ್ವಲ್ಪ ಅಜಾಗರೂಕತೆ ತೋರಿದ್ದರೆ ಗೆಲುವನ್ನು ಕಿತ್ತುಕೊಳ್ಳಲು ರೋಹಿತ್ ಬಳಗ ಕಾದು ಕುಳಿತಿತ್ತು.
ಮೊದಲ ಇನಿಂಗ್ಸ್‌ನಲ್ಲಿ 46ಕ್ಕೆ ಕುಸಿದ ಆತಿಥೇಯರು ಎರಡನೇಯ ಇನಿಂಗ್ಸ್‌ನಲ್ಲಿ 462 ರನ್‌ಗಳನ್ನು ಪೇರಿಸಿದ್ದ ಛಲದ ಆಟವು ಕ್ರಿಕೆಟ್‌ಪ್ರಿಯರ ಮನಗೆದ್ದಿತ್ತು. ಅದರಿಂದಾಗಿಯೇ ಕೊನೆ ದಿನದಾಟದಲ್ಲಿ ಪುಟ್ಟ ಗುರಿಯನ್ನೂ ರಕ್ಷಿಸಿಕೊಳ್ಳುವ ದಿಟ್ಟತನವನ್ನು ತಂಡವು ತೋರಬಹುದೆಂಬ ವಿಶ್ವಾಸದೊಂದಿಗೆ 18 ಸಾವಿರಕ್ಕೂ ಹೆಚ್ಚು ಮಂದಿ ಕ್ರೀಡಾಂಗಣದಲ್ಲಿ ಸೇರಿದ್ದರು. ಆತಿಥೇಯ ಬೌಲರ್‌ಗಳು ಪ್ರತಿಯೊಂದು ಎಸೆತ ಹಾಕುವಾಗಲೂ ಪ್ರೇಕ್ಷಕರ ಗ್ಯಾಲರಿಯಿಂದ ಏಕಕಾಲಕ್ಕೆ ಚಪ್ಪಾಳೆಯ ಜೊತೆಗೆ ಹುರಿದುಂಬಿಸುವ ಪದಗಳು ಪ್ರತಿಧ್ವನಿಸುತ್ತಿದ್ದವು. ಅದಕ್ಕೆ ತಕ್ಕಂತೆ ನಾಯಕ ಟಾಮ್ ಲೇಥಮ್ ಅವರನ್ನು ಮೊದಲ ಓವರ್‌ನಲ್ಲಿಯೇ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. 13ನೇ ಓವರ್‌ನಲ್ಲಿ ಡೆವೊನ್ ಕಾನ್ವೆ ಅವರನ್ನು ಬೂಮ್ರಾ ಎಲ್‌ಬಿಡಬ್ಲ್ಯು ಮಾಡಿದರು.
ಆದರೆ ಇದಾದ ನಂತರ ಕಿವೀಸ್ ಬ್ಯಾಟರ್ ವಿಲ್ ಯಂಗ್ (ಔಟಾಗದೆ 48) ಮತ್ತು ಬೆಂಗಳೂರು ಮೂಲದ ರಚಿನ್ ರವೀಂದ್ರ (ಔಟಾಗದೆ 39) ಹೊಣೆಯರಿತು ಆಡಿದರು. ತಂಡವನ್ನು ಗೆಲುವಿನ ದಡ ಸೇರಿಸಿದರು. ನ್ಯೂಜಿಲೆಂಡ್ ತಂಡವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಟೆಸ್ಟ್ ಜಯ ದಾಖಲಿಸಿತು. ಅಲ್ಲದೇ ಭಾರತದ ನೆಲದಲ್ಲಿ ಗೆದ್ದ 3ನೇ ಪಂದ್ಯವಿದು.
ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿತ್, ‘ಈ ಸೋಲನ್ನು ಮರೆಯುತ್ತೇವೆ. ಸರಣಿಯಲ್ಲಿ ಉಳಿದಿರುವ ಮುಂದಿನ ಎರಡೂ ಪಂದ್ಯಗಳನ್ನು ಜಯಿಸುವತ್ತ ಹೆಚ್ಚು ಗಮನ ಹರಿಸುತ್ತೇವೆ. ಇಲ್ಲಿ ಒಂದೆರಡು ತಪ್ಪುಗಳನ್ನು ಮಾಡಿ ಅದರ ಶಿಕ್ಷೆ ಅನುಭವಿಸಿದ್ದೇವೆ. ಆದರೆ ಕುಸಿದು ಬಿದ್ದ ನಂತರ ಮರಳಿ ಪುಟಿದೆದ್ದು ಹೋರಾಡುವ ಮನೋಭಾವವನ್ನು ಮಾತ್ರ ಬದಲಿಸಿಕೊಳ್ಳುವುದಿಲ್ಲ’ ಎಂದರು.
ಈ ಪಂದ್ಯದ ಮೊದಲ ದಿನವು ಮಳೆಗೆ ಸಂಪೂರ್ಣವಾಗಿ ಕೊಚ್ಚಿಹೋಗಿತ್ತು. ಎರಡನೇ ದಿನ ಟಾಸ್ ಗೆದ್ದ ರೋಹಿತ್ ಬ್ಯಾಟಿಂಗ್ ತೆಗೆದುಕೊಂಡಿದ್ದರು. ‘ಪಿಚ್ ಸತ್ವ ಗ್ರಹಿಸುವಲ್ಲಿ ತಪ್ಪು ಮಾಡಿದೆ. ಬ್ಯಾಟಿಂಗ್ ನಿರ್ಧಾರ ನನ್ನದೇ ಆಗಿತ್ತು’ ಎಂದು ಹೇಳಿದ್ದರು.
ತಮ್ಮ ನಾಯಕನ ತಪ್ಪು ಸರಿಪಡಿಸಲು ಬೌಲರ್‌ಗಳು ಮಾಡಿದ ಪ್ರಯತ್ನ ಕೈಗೂಡಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಕಿವೀಸ್ ಬಳಗವು ದೊಡ್ಡ ಮುನ್ನಡೆ ಪಡೆಯದಂತೆ ಕಟ್ಟಿಹಾಕಲು ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ರಚಿನ್, ಡೆವೊನ್ ಕಾನ್ವೆ ಮತ್ತು ಟಿಮ್ ಸೌಥಿಯ ಉತ್ತಮ ಬ್ಯಾಟಿಂಗ್‌ನಿಂದಾಗಿ ಕಿವೀಸ್ 356 ರನ್‌ಗಳ ಮುನ್ನಡೆ ಸಾಧಿಸಿ ‘ಇನಿಂಗ್ಸ್ ಜಯ’ದ ಕನಸು ಕಂಡಿತ್ತು. ಆದರೆ ಈ ವಿಷಯದಲ್ಲಿ ಕಿವೀಸ್‌ಗೆ ಹಿನ್ನಡೆಯಾಯಿತು. ಎರಡನೇ ಇನಿಂಗ್ಸ್‌ನಲ್ಲಿ ಸರ್ಫರಾಜ್ ಖಾನ್ (150 ರನ್) ಶತಕ, ಮೊಣಕಾಲಿನ ಗಾಯದ ನೋವಿನಲ್ಲಿಯೂ ಚೆಂದದ ಬ್ಯಾಟಿಂಗ್ ಮಾಡಿದ ರಿಷಭ್ ಪಂತ್ (99 ರನ್) ಮಿಂಚಿದ್ದರು. ಅವರಿಬ್ಬರ ಜೊತೆಯಾಟದಿಂದಾಗಿ ಮುನ್ನಡೆಯ ಮೊತ್ತ ಕರಗಿತ್ತು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಅರ್ಧಶತಕಗಳ ಕಾಣಿಕೆಯೂ ಅದರಲ್ಲಿತ್ತು. ಕೆಳಕ್ರಮಾಂಕದ ಬ್ಯಾಟರ್‌ಗಳು ಹೆಚ್ಚು ರನ್ ಗಳಿಸದ ಕಾರಣ ದೊಡ್ಡ ಗುರಿ ನೀಡಲು ಸಾಧ್ಯವಾಗಿರಲಿಲ್ಲ.
ಇದೆಲ್ಲದರೊಂದಿಗೆ ಟೆಸ್ಟ್ ಕ್ರಿಕೆಟ್ ಮಾದರಿಯ ಎಲ್ಲ ಸ್ವಾರಸ್ಯಗಳನ್ನೂ ಉಣಬಡಿಸಿದ ಈ ಪಂದ್ಯವು ಭಾರತ ತಂಡದ ‘ಸುಲಭವಾಗಿ ಸೋಲೊಪ್ಪಿಕೊಳ್ಳದ‘ ದಿಟ್ಟ ಮನೋಭಾವವನ್ನೂ ಬಹಿರಂಗ ಮಾಡಿದ್ದು ಸುಳ್ಳಲ್ಲ.
ಮಳೆಯಿಂದ ಪಂದ್ಯ ವಿಳಂಬ: ಭಾನುವಾರ ಬೆಳಿಗ್ಗೆ ಮಳೆ ಸುರಿದ ಕಾರಣ ದಿನದಾಟವು ವಿಳಂಬವಾಗಿ ಶುರು ವಾಯಿತು. 9.15ಕ್ಕೆ ಆರಂಭವಾಗಬೇಕಿದ್ದ ಆಟವನ್ನು 10.15ಕ್ಕೆ ಆರಂಭಿಸಲಾಯಿತು. ಬೆಂಗಳೂರಿನಲ್ಲಿ ಬೆಳಗಿನ ಜಾವದಿಂದಲೇ ಮಳೆ ಆರಂಭವಾಗಿತ್ತು.
ಸುಂದರ್‌ಗೆ ಸ್ಥಾನ: ನ್ಯೂಜಿಲೆಂಡ್ ಎದುರಿನ ಸರಣಿಯ ಉಳಿದೆರಡು ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಪ್ರಕಟಿಸಲಾಗಿದೆ. ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರಿಗೆ ಸ್ಥಾನ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.