ಮೌಂಟ್ ಮಾಂಗಾನೂಯಿ (ನ್ಯೂಜಿಲೆಂಡ್),: ಪ್ರಮುಖ ಆಟಗಾರರಿಲ್ಲದೇ ಬಂದ ದಕ್ಷಿಣ ಆಫ್ರಿಕಾ ತಂಡವನ್ನು ನಿರೀಕ್ಷೆಯಂತೆ ಆತಿಥೇಯ ನ್ಯೂಜಿಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಬುಧವಾರ 281 ರನ್‌ಗಳಿಂದ ಸೋಲಿಸಿತು. ಆ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಪಡೆಯಿತು.
ನ್ಯೂಜಿಲೆಂಡ್ ನಾಯಕ ಟಿಮ್ ಸೌಥೀ ಪಂದ್ಯದ ನಾಲ್ಕನೇ ದಿನವಾದ ಬುಧವಾರ ಬೆಳಿಗ್ಗೆ, ನಿನ್ನೆಯ ಮೊತ್ತಕ್ಕೇ ಇನಿಂಗ್ಸ್ ಡಿಕ್ಲೇರ್ಡ್ ಮಾಡಿಕೊಂಡರು. ಗೆಲುವಿಗೆ 528 ರನ್‌ಗಳ ಭಾರಿ ಗುರಿಯನ್ನು ಎದುರಿಸಿದ ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್‌ನಲ್ಲಿ 247 ರನ್‌ಗಳಿಗೆ ಆಲೌಟ್ ಆಯಿತು.
ದಕ್ಷಿಣ ಆಫ್ರಿಕಾ ಐದು ರನ್‌ಗಳಾಗುವಷ್ಟರಲ್ಲಿ ಆರಂಭ ಆಟಗಾರರಾದ ನೀಲ್ ಬ್ರ್ಯಾಂಡ್ ಮತ್ತು ಎಡ್ವರ್ಡ್ ಮೂರ್ ಅವರನ್ನು ಕಳೆದುಕೊಂಡಿತು. ಝುಬೇರ್ ಹಂಝ ಮತ್ತು ರೇನಾರ್ಡ್ ವಾನ್ ಟೊಂಡರ್ ಸುಮಾರು 100 ನಿಮಿಷ ಬ್ಯಾಟ್ ಮಾಡಿ ಕುಸಿತ ತಡೆಗಟ್ಟಿದರು. ಆದರೆ ಊಟದ ವಿರಾಮ ಕಳೆದ ತಕ್ಷಣ ಇಬ್ಬರೂ ಅನಗತ್ಯ ಹೊಡೆತಗಳಿಗೆ ದಂಡತೆತ್ತರು. ಮೂರನೇ ವಿಕೆಟಿಗೆ 68 ರನ್‌ಗಳು ಬಂದಿದ್ದವು.
ಡೇವಿಡ್ ಬೆಡ್ಡಿಂಗಮ್ ಅವರು ಬಿರುಸಿನ ಆಟವಾಡಿ 96 ಎಸೆತಗಳಲ್ಲಿ ಜೀವನಶ್ರೇಷ್ಠ 87 ರನ್ ಗಳಿಸಿದರು. ಅಲ್ಲದೇ ಐದನೇ ವಿಕೆಟ್‌ಗೆ ಕೀಗನ್ ಪೀಟರ್ಸನ್ (16) ಜೊತೆ 103 ರನ್ ಸೇರಿಸಿ ಕ್ಷೀಣ ಆಸೆ ಮೂಡಿಸಿದರು. ಹೀಗಾಗಿ ಆಟ ಅಂತಿಮ ದಿನಕ್ಕೆ ಮುಂದುವರಿಯಬಹುದೆಂಬ ಲಕ್ಷಣಗಳು ಕಂಡಿದ್ದವು. ಬೆಡ್ಡಿಂಗಮ್, ಆತಿಥೇಯ ಬೌಲರ್‌ಗಳ ಬೌನ್ಸರ್‌ಗಳನ್ನು ಧೈರ್ಯದಿಂದ ಎದುರಿಸಿ ಒಂದು ಸಿಕ್ಸರ್, 13 ಬೌಂಡರಿಗಳನ್ನು ಬಾರಿಸಿದರು.
ಆದರೆ ಕೈಲ್ ಜೇಮಿಸನ್ (58ಕ್ಕೆ4) ಅವರು ಇವರಿಬ್ಬರ ವಿಕೆಟ್ ಪಡೆದು ಹೊಡೆತ ನೀಡಿದರು (181ಕ್ಕೆ6). ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಕೊನೆಯ ಮೂರು ವಿಕೆಟ್‌ಗಳನ್ನು ಪಡೆದರು.
ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ (240) ಹೊಡೆದಿದ್ದ ರಚಿನ್ ರವೀಂದ್ರ ‘ಪಂದ್ಯದ ಆಟಗಾರ’ ಗೌರವಕ್ಕೆ ಪಾತ್ರರಾದರು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ನ್ಯೂಜಿಲೆಂಡ್: 511, ದಕ್ಷಿಣ ಆಫ್ರಿಕಾ: 162; ಎರಡನೇ ಇನಿಂಗ್ಸ್: 43 ಓವರುಗಳಲ್ಲಿ 4 ವಿಕೆಟ್‌ಗೆ 179 ಡಿಕ್ಲೇರ್ಡ್; ದಕ್ಷಿಣ ಆಫ್ರಿಕಾ: 80 ಓವರುಗಳಲ್ಲಿ 247 (ರೇನಾರ್ಡ್ ವಾನ್ ತೊಂಡೆರ್ 31, ಝುಬೇರ್ ಹಂಝ 36, ಡೇವಿಡ್ ಬೆಡ್ಡಿಂಗಮ್ 87, ರುವಾನ್ ಡಿ ಸ್ವಾರ್ಟ್ ಔಟಾಗದೇ 34; ಕೈಲ್ ಜೇಮಿಸನ್ 58ಕ್ಕೆ4, ಮಿಚೆಲ್ ಸ್ಯಾಂಟ್ನರ್ 59 ಕ್ಕೆ3)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.