ವೆಲಿಂಗ್ಟನ್: ನ್ಯೂಜಿಲೆಂಡ್ ತಂಡದವರು ಎರಡನೇ ಹಾಗೂ ಕೊನೆಯ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಇನಿಂಗ್ಸ್ ಹಾಗೂ 58 ರನ್‌ಗಳಿಂದ ಮಣಿಸಿ ಸರಣಿಯನ್ನು 2–0 ರಲ್ಲಿ ಗೆದ್ದುಕೊಂಡರು.
ಬೇಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇನಿಂಗ್ಸ್ ಸೋಲು ತಪ್ಪಿಸಲು 416 ರನ್ ಗಳಿಸಬೇಕಿದ್ದ ಶ್ರೀಲಂಕಾ ತಂಡ ನಾಲ್ಕನೇ ದಿನದಾಟದಲ್ಲಿ ಎರಡನೇ ಇನಿಂಗ್ಸ್‌ನಲ್ಲಿ 358 ರನ್‌ಗಳಿಗೆ ಆಲೌಟಾಯಿತು.
2 ವಿಕೆಟ್‌ಗಳಿಗೆ 113 ರನ್‌ಗಳಿಂದ ಸೋಮವಾರ ಆಟ ಮುಂದುವರಿಸಿದ ಲಂಕಾ ತಂಡ, ಟಿಮ್ ಸೌಥಿ (51ಕ್ಕೆ 3) ಮತ್ತು ಬ್ಲೇರ್ ಟಿಕ್ನರ್ (84ಕ್ಕೆ 3) ಅವರ ಚುರುಕಿನ ದಾಳಿಗೆ ನಲುಗಿ ಸೋಲಿನ ಹಾದಿ ಹಿಡಿಯಿತು.
ಕುಸಾಲ್ ಮೆಂಡಿಸ್ (50) ಹಿಂದಿನ ದಿನದ ಮೊತ್ತಕ್ಕೆ ಔಟಾದರೆ, ದಿನೇಶ್ ಚಾಂಡಿಮಲ್ (62 ರನ್, 92 ಎ.) ಮತ್ತು ಧನಂಜಯ ಡಿಸಿಲ್ವಾ (98 ರನ್, 185 ಎ.) ಅಲ್ಪ ಹೋರಾಟ ನಡೆಸಿದರು. ಇವರು ಮೊದಲ ಅವಧಿಯಲ್ಲಿ 126 ರನ್‌ಗಳನ್ನು ಸೇರಿಸಿದರು.
ಚಾಂಡಿಮಲ್ ವಿಕೆಟ್ ಪಡೆದ ಟಿಕ್ನರ್ ಈ ಜತೆಯಾಟ ಮುರಿದರು. ಧನಂಜಯ ಆ ಬಳಿಕವೂ ಕೆಲಹೊತ್ತು ಆತಿಥೇಯ ಬೌಲರ್‌ಗಳನ್ನು ಕಾಡಿದರು. ಆದರೆ ಶತಕಕ್ಕೆ ಎರಡು ರನ್‌ಗಳು ಬೇಕಿದ್ದಾಗ ಮೈಕಲ್ ಬ್ರೇಸ್‌ವೆಲ್‌ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಲಂಕಾ ಇನಿಂಗ್ಸ್ ಹೆಚ್ಚು ಬೆಳೆಯಲಿಲ್ಲ.
ಸರಣಿಯ ಮೊದಲ ಪಂದ್ಯವನ್ನು ನ್ಯೂಜಿಲೆಂಡ್ ತಂಡ ಅಂತಿಮ ಎಸೆತದಲ್ಲಿ ಗೆದ್ದುಕೊಂಡಿತ್ತು.
ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್: ನ್ಯೂಜಿಲೆಂಡ್ 4 ವಿಕೆಟ್‌ಗಳಿಗೆ 580 ಡಿಕ್ಲೇರ್ಡ್. ಶ್ರೀಲಂಕಾ 66.5 ಓವರ್‌ಗಳಲ್ಲಿ 164. ಎರಡನೇ ಇನಿಂಗ್ಸ್: ಶ್ರೀಲಂಕಾ 142 ಓವರ್‌ಗಳಲ್ಲಿ 358 (ಕುಸಾಲ್ ಮೆಂಡಿಸ್ 50, ದಿನೇಶ್ ಚಾಂಡಿಮಲ್ 62, ಧನಂಜಯ ಡಿಸಿಲ್ವಾ 98, ನಿಶಾನ್ ಮಧುಷ್ಕಾ ಫೆರ್ನಾಂಡೊ 39, ಟಿಮ್ ಸೌಥಿ 51ಕ್ಕೆ 3, ಬ್ಲೇರ್ ಟಿಕ್ನರ್ 84ಕ್ಕೆ 3, ಮೈಕಲ್ ಬ್ರೇಸ್‌ವೆಲ್ 100ಕ್ಕೆ 2) ಫಲಿತಾಂಶ: ನ್ಯೂಜಿಲೆಂಡ್‌ಗೆ ಇನಿಂಗ್ಸ್ ಹಾಗೂ 58 ರನ್ ಗೆಲುವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.