ADVERTISEMENT

ಇಂಗ್ಲೆಂಡ್ ವಿರುದ್ಧದ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಟಿಮ್ ಸೌಥಿ ನಿವೃತ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ನವೆಂಬರ್ 2024, 10:56 IST
Last Updated 15 ನವೆಂಬರ್ 2024, 10:56 IST
<div class="paragraphs"><p>ಟಿಮ್ ಸೌಥಿ</p></div>

ಟಿಮ್ ಸೌಥಿ

   

(ರಾಯಿಟರ್ಸ್ ಚಿತ್ರ)

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ಅನುಭವಿ ವೇಗದ ಬೌಲರ್ ಟಿಮ್ ಸೌಥಿ ಅವರು ತವರಿನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ನೀಡುವುದಾಗಿ ಘೋಷಿಸಿದ್ದಾರೆ.

ADVERTISEMENT

ಡಿಸೆಂಬರ್ 14ರಿಂದ ಹ್ಯಾಮಿಲ್ಟನ್‌ನಲ್ಲಿ ನಡೆಯುವ ಮೂರನೇ ಪಂದ್ಯ ಸೌಥಿ ಪಾಲಿಗೆ ಕೊನೆಯ ಟೆಸ್ಟ್‌ ಆಗಿರಲಿದೆ. 2008ರಲ್ಲಿ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲೇ ಅವರು ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಚೊಚ್ಚಲ ಪಂದ್ಯದಲ್ಲಿ ಐದು ವಿಕೆಟ್ ಪಡೆಯುವ ಜೊತೆಗೆ ಅಜೇಯ 77 ರನ್‌ ಗಳಿಸಿ ಮಿಂಚಿದ್ದರು.

35 ವರ್ಷ ವಯಸ್ಸಿನ ಸೌಥಿ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್‌ ಪರ ಅತಿ ಹೆಚ್ಚು ವಿಕೆಟ್ ಗಳಿಸಿದ ಎರಡನೇ ಬೌಲರ್ ಆಗಿದ್ದಾರೆ. ಈವರೆಗೆ 104 ಟೆಸ್ಟ್ ಪಂದ್ಯಗಳಲ್ಲಿ 385 ವಿಕೆಟ್‌ಗಳನ್ನು ಗಳಿಸಿದ್ದಾರೆ. ಕ್ರಿಕೆಟ್‌ ದಿಗ್ಗಜ ರಿಚರ್ಡ್ ಹ್ಯಾಡ್ಲಿ (431) ಕಿವೀಸ್‌ ಪರ ಅತಿ ಹೆಚ್ಚು ವಿಕೆಟ್‌ ಪಡೆದ ದಾಖಲೆ ಹೊಂದಿದ್ದಾರೆ

ಟೆಸ್ಟ್‌ನಲ್ಲಿ 300ಕ್ಕೂ ಅಧಿಕ, ಏಕದಿನದಲ್ಲಿ 200ಕ್ಕೂ ಅಧಿಕ ಮತ್ತು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100ಕ್ಕೂ ಅಧಿಕ ವಿಕೆಟ್ ಗಳಿಸಿದ ಏಕಮಾತ್ರ ಬೌಲರ್ ಅವರಾಗಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಪರ ಅತಿ ಹೆಚ್ಚು ವಿಕೆಟ್ (770) ಗಳಿಸಿದ ಬೌಲರ್ ಎಂಬ ಹೆಗ್ಗಳಿಕೆ ಅವರದು. ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ (164) ಗಳಿಸಿದ ದಾಖಲೆ ಅವರ ಹೆಸರಿನಲ್ಲಿದೆ.

ಇತ್ತೀಚಿನ ಭಾರತದ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನಲ್ಲಿ (3–0) ಸೌಥಿ ಮಹತ್ವದ ಪಾತ್ರ ವಹಿಸಿದ್ದರು. ಕಿವೀಸ್ ತಂಡದ ನಾಯಕರಾಗಿಯೂ ಸೇವೆ ಸಲ್ಲಿಸಿರುವ ಅವರು, 100ಕ್ಕೂ ಹೆಚ್ಚು ಟೆಸ್ಟ್‌ ಪಂದ್ಯಗಳನ್ನು ಆಡಿದ ನ್ಯೂಜಿಲೆಂಡ್‌ನ ಆರು ಮಂದಿಯಲ್ಲಿ ಅವರೂ ಒಬ್ಬರಾಗಿದ್ದಾರೆ.

ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸುವುದು ನನ್ನ ದೊಡ್ಡ ಕನಸಾಗಿತ್ತು. 18 ವರ್ಷಗಳ ಕಾಲ ದೇಶಕ್ಕಾಗಿ ಆಡಿರುವುದು ನನಗೆ ದೊರಕಿರುವ ದೊಡ್ಡ ಗೌರವ’ ಎಂದು ಸೌಥಿ ಪ್ರತಿಕ್ರಿಯಿಸಿದ್ದಾರೆ.

ಒಂದು ವೇಳೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ನ್ಯೂಜಿಲೆಂಡ್ ತಂಡ ಪ್ರವೇಶಿಸಿದ್ದಲ್ಲಿ ತಾವು ಆಯ್ಕೆಗೆ ಲಭ್ಯವಿರುವುದಾಗಿ ಅವರು ಖಚಿತಪಡಿಸಿದ್ದಾರೆ.

ಪಟ್ಟಿ ಟಿಮ್‌ ಸೌಥಿ ಸಾಧನೆ ಬೌಲಿಂಗ್‌ –;ಟೆಸ್ಟ್;ಏಕದಿನ;ಟಿ20 ಪಂದ್ಯ;104;161;126 ಇನಿಂಗ್ಸ್‌;197;159;123 ವಿಕೆಟ್‌;385;221;164 5 ವಿಕೆಟ್‌;15;3;2 ಶ್ರೇಷ್ಠ;64ಕ್ಕೆ7;33ಕ್ಕೆ7;18ಕ್ಕೆ5 ಬ್ಯಾಟಿಂಗ್‌ ರನ್‌;2185;740;303 ಗರಿಷ್ಠ;77*;55;39 ಅರ್ಧಶತಕ;7;1;0

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.