ಆಕ್ಲೆಂಡ್: ಇಲ್ಲಿನ ಈಡನ್ ಪಾರ್ಕ್ ಅಂಗಳದಲ್ಲಿ ಶುಕ್ರವಾರ ಹರಿದ ರನ್ ಹೊಳೆಯಲ್ಲಿ ಛಲದಿಂದ ಈಜಿದ ಭಾರತ ತಂಡ ಸುಲಭವಾಗಿ ಗೆಲುವಿನ ದಡ ಸೇರಿತು. ಆತಿಥೇಯ ನ್ಯೂಜಿಲೆಂಡ್ ಸೋಲಿನ ಸುಳಿಯಲ್ಲಿ ಸಿಲುಕಿತು.
ಮೊದಲ ಟ್ವೆಂಟಿ–20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಕೇನ್ ವಿಲಿಯಮ್ಸನ್ ಬಳಗ 5 ವಿಕೆಟ್‌ಗೆ 203ರನ್‌ಗಳನ್ನು ದಾಖಲಿಸಿತು. ಬೆಟ್ಟದಂತಹ ಈ ಸವಾಲು ವಿರಾಟ್ ಕೊಹ್ಲಿ ಪಡೆಗೆ ಕಷ್ಟವೆನಿಸಲೇ ಇಲ್ಲ. ಪ್ರವಾಸಿ ಪಡೆಯು ಇನ್ನು ಆರು ಎಸೆತಗಳು ಬಾಕಿ ಇರುವಂತೆ, ಕೇವಲ 4 ವಿಕೆಟ್ ಕಳೆದುಕೊಂಡು ಜಯದ ತೋರಣ ಕಟ್ಟಿತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆಯನ್ನೂ ಪಡೆಯಿತು.
ನ್ಯೂಜಿಲೆಂಡ್ ತಂಡದ ಮೊತ್ತ 200ರ ಗಡಿ ದಾಟಿದಾಗಲೇ ಹಲವರು ಭಾರತದ ಸೋಲು ಖಚಿತ ಎಂದು ಷರಾ ಬರೆದುಬಿಟ್ಟಿದ್ದರು. ಮಿಷೆಲ್ ಸ್ಯಾಂಟನರ್ ಹಾಕಿದ ಎರಡನೇ ಓವರ್‌ನ ನಾಲ್ಕನೇ ಎಸೆತದಲ್ಲಿ ರೋಹಿತ್ ಶರ್ಮಾ (7) ಔಟಾದಾಗ ಕ್ರಿಕೆಟ್ ಪಂಡಿತರ ಈ ‘ಭವಿಷ್ಯ’ ನಿಜವಾಗುವ ಲಕ್ಷಣ ಗೋಚರಿಸಿತ್ತು.
ಈ ಹಂತದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ (56; 27ಎಸೆತ, 4ಬೌಂಡರಿ, 3ಸಿಕ್ಸರ್), ನಾಯಕ ವಿರಾಟ್ (45; 32ಎ, 3ಬೌಂ, 1ಸಿ) ಮತ್ತು ಶ್ರೇಯಸ್ ಅಯ್ಯರ್ (ಔಟಾಗದೆ 58, 29ಎ, 5ಬೌಂ, 3ಸಿ) ಅಬ್ಬರದ ಬ್ಯಾಟಿಂಗ್ ಮಾಡಿ ಗೆಲುವು ಭಾರತದ ಪರ ವಾಲುವಂತೆ ಮಾಡಿದರು. ಇದರೊಂದಿಗೆ ಆರು ತಿಂಗಳ ಹಿಂದೆ ನಡೆದಿದ್ದ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಎದುರಾಗಿದ್ದ ಸೋಲಿಗೆ ಕೊಹ್ಲಿ ಪಡೆ ಮುಯ್ಯಿ ತೀರಿಸಿಕೊಂಡಿತು.
ತವರಿನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಲ್ಲಿ ಅಮೋಘ ಆಟ ಆಡಿದ್ದ ರಾಹುಲ್ ಮತ್ತು ಕೊಹ್ಲಿ ಕಿವೀಸ್ ನೆಲದಲ್ಲೂ ಮೆರೆದರು.
ಆರಂಭದಿಂದಲೇ ಅಬ್ಬರದ ಆಟಕ್ಕೆ ಅಣಿಯಾದ ಈ ಜೋಡಿ ಒಂಬತ್ತು ಓವರ್‌ಗಳಲ್ಲೇ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿ ಜಯದ ಕನಸಿಗೆ ಬಲ ತುಂಬಿತು.
ತಾವೆದುರಿಸಿದ 23ನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ಅರ್ಧಶತಕ ಪೂರೈಸಿದ ರಾಹುಲ್, 10ನೇ ಓವರ್‌ನಲ್ಲಿ ಈಶ್ ಸೋಧಿಗೆ ವಿಕೆಟ್ ನೀಡಿದರು. ಇದರ ಬೆನ್ನಲ್ಲೇ ವಿರಾಟ್ ಔಟಾದರು. ಬ್ಲೇರ್ ಟಿಕ್ನರ್ ಅವರ ‘ಲೆಗ್ ಕಟರ್’ ಎಸೆತವನ್ನು (12ನೇ ಓವರ್) ಕೊಹ್ಲಿ, ಡೀಪ್ ಮಿಡ್‌ವಿಕೆಟ್‌ನತ್ತ ಬಾರಿಸಲು ಮುಂದಾದರು. ಗಾಳಿಯಲ್ಲಿ ತೇಲಿಬಂದ ಚೆಂಡನ್ನು ಮಾರ್ಟಿನ್ ಗಪ್ಟಿಲ್ ಮುಂದಕ್ಕೆ ಜಿಗಿದು ಹಿಡಿದ ರೀತಿ ಆಕರ್ಷಕವಾಗಿತ್ತು. ಶಿವಂ ದುಬೆ (13; 9ಎ, 1ಬೌಂ, 1ಸಿ) ಬಂದಷ್ಟೆ ವೇಗವಾಗಿ ಪೆವಿಲಿಯನ್‌ಗೆ ಹಿಂತಿರುಗಿದರು.
ಶ್ರೇಯಸ್ ಅಬ್ಬರ: ಒಂದು ಹಂತದಲ್ಲಿ ಆರು ಓವರ್‌ಗಳಲ್ಲಿ 60ರನ್ ಗಳಿಸುವ ಕಠಿಣ ಸವಾಲು ಭಾರತದ ಎದುರಿಗಿತ್ತು. ಕ್ರೀಸ್‌ನಲ್ಲಿದ್ದ ಮನೀಷ್ ಪಾಂಡೆ (ಔಟಾಗದೆ 14; 12ಎ, 1ಸಿ) ಮತ್ತು ಶ್ರೇಯಸ್, ಆತಿಥೇಯರ ದಾಳಿಯನ್ನು ಧ್ವಂಸ ಗೊಳಿಸಿದರು. ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿ ಅಭಿಮಾನಿಗಳನ್ನು ರಂಜಿಸಿದರು.
ಟಿಮ್ ಸೌಥಿ ಹಾಕಿದ 19ನೇ ಓವರ್‌ನ ಕೊನೆಯ ಎಸೆತವನ್ನು ಶ್ರೇಯಸ್, ಡೀಪ್ ಮಿಡ್‌ವಿಕೆಟ್‌ನತ್ತ ಸಿಕ್ಸರ್‌ಗೆ ಅಟ್ಟುತ್ತಿದ್ದಂತೆ ಮೈದಾನದಲ್ಲಿ ಸಂಭ್ರಮ ಮೇಳೈಸಿತು. ಗ್ಯಾಲರಿಯಲ್ಲಿ ಕುಳಿತಿದ್ದ ಭಾರತದ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.
ರನ್ ಗೋಪುರ ಕಟ್ಟಿದ ಕಿವೀಸ್: ಮೊದಲು ಬ್ಯಾಟ್ ಮಾಡಿದ ವಿಲಿಯಮ್ಸನ್ ಪಡೆ ಮೈದಾನದಲ್ಲಿ ರನ್ ಗೋಪುರ ಕಟ್ಟಿತು.
ಭಾರತದ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಮಾರ್ಟಿನ್ ಗಪ್ಟಿಲ್ (30; 19ಎ, 4ಬೌಂ, 1ಸಿ) ಮತ್ತು ಕಾಲಿನ್ ಮನ್ರೊ (59; 42ಎ, 6ಬೌಂ, 2ಸಿ) ಮೊದಲ ವಿಕೆಟ್ ಜೊತೆಯಾಟದಲ್ಲಿ 47 ಎಸೆತಗಳಲ್ಲಿ 80ರನ್ ಸೇರಿಸಿದರು.
ಈ ಜೋಡಿ ಔಟಾದ ಬಳಿಕ ನಾಯಕ ವಿಲಿಯಮ್ಸನ್ ಮತ್ತು (51; 26ಎ, 4ಬೌಂ, 4ಸಿ) ಮತ್ತು ರಾಸ್ ಟೇಲರ್ (ಔಟಾಗದೆ 54; 27ಎ, 3ಬೌಂ, 3ಸಿ) ಅವರ ಆಟ ರಂಗೇರಿತು. ಇವರು ಕ್ರೀಸ್‌ನಲ್ಲಿದ್ದಷ್ಟು ಕಾಲ ಪ್ರೇಕ್ಷಕರೇ ಕ್ಷೇತ್ರರಕ್ಷಕರಾಗಿದ್ದರು!
ಇವರು ನಾಲ್ಕನೇ ವಿಕೆಟ್‌ಗೆ 61ರನ್ ಕಲೆಹಾಕಿ ಆತಿಥೇಯರು ದೊಡ್ಡ ಮೊತ್ತ ಪೇರಿಸಲು ನೆರವಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.