ADVERTISEMENT

ಟ್ರೆಂಟ್‌ ಬೌಲ್ಟ್ ಸುಂಟರಗಾಳಿ

ಕ್ರಿಕೆಟ್‌: 200ನೇ ಏಕದಿನ ಪಂದ್ಯ ಆಡಿದ ರೋಹಿತ್‌; ಭಾರತಕ್ಕೆ ಹೀನಾಯ ಸೋಲು

ಪಿಟಿಐ
Published 31 ಜನವರಿ 2019, 20:15 IST
Last Updated 31 ಜನವರಿ 2019, 20:15 IST
ಹ್ಯಾಮಿಲ್ಟನ್‌ನಲ್ಲಿ ಗುರುವಾರ ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಬೌಲರ್‌ ಟ್ರೆಂಟ್ ಬೌಲ್ಟ್ ಅವರ ಶೈಲಿ –ಎಎಫ್‌ಪಿ ಚಿತ್ರ
ಹ್ಯಾಮಿಲ್ಟನ್‌ನಲ್ಲಿ ಗುರುವಾರ ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಬೌಲರ್‌ ಟ್ರೆಂಟ್ ಬೌಲ್ಟ್ ಅವರ ಶೈಲಿ –ಎಎಫ್‌ಪಿ ಚಿತ್ರ   

ಹ್ಯಾಮಿಲ್ಟನ್: ಭಾರತ ಕ್ರಿಕೆಟ್ ತಂಡಕ್ಕೆ ಗುರುವಾರ ಯಶಸ್ಸಿನ ಉತ್ತುಂಗ ಶಿಖರದಿಂದ ಧರೆಗೆ ಬಿದ್ದ ಅನುಭವ. ನ್ಯೂಜಿಲೆಂಡ್‌ನ ಎಡಗೈ ವೇಗಿ ಟ್ರೆಂಟ್‌ ಬೌಲ್ಟ್‌ ಕೊಟ್ಟ ಪೆಟ್ಟು ಹಾಗಿತ್ತು.

ಟ್ರೆಂಟ್ (21ಕ್ಕೆ5) ಅವರ ಬಿರುಗಾಳಿ ವೇಗದ ಬೌಲಿಂಗ್‌ ಮುಂದೆ ಭಾರತ ತಂಡವು ಎಂಟು ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 30. 5 ಓವರ್‌ಗಳಲ್ಲಿ 92 ರನ್‌ ಗಳಿಸಿತು. ಏಳನೇ ಬಾರಿ ಕಡಿಮೆ ಮೊತ್ತಕ್ಕೆ ಪತವಾದ ದಾಖಲೆ ಮಾಡಿತು.

ಅದಕ್ಕುತ್ತರವಾಗಿ ನ್ಯೂಜಿಲೆಂಡ್ ತಂಡವು 14.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 93 ರನ್‌ ಗಳಿಸಿ ಗೆದ್ದಿತು. ಐದು ಪಂದ್ಯಗಳ ಸರಣಿಯ ಮೊದಲ ಮೂರರಲ್ಲಿ ಭಾರತವು ಈಗಾಗಲೇ ಗೆದ್ದಿದೆ. ಆದರೆ ಕ್ಲೀನ್‌ ಸ್ವೀಪ್ ಮಾಡುವ ಅವಕಾಶ ಕೈತಪ್ಪಿದೆ. ಸ್ವದೇಶಕ್ಕೆ ಮರಳಿರುವ ವಿರಾಟ್ ಕೊಹ್ಲಿ ಮತ್ತು ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಮಹೇಂದ್ರಸಿಂಗ್ ಧೋನಿ ಇಲ್ಲ ಕಣಕ್ಕಿಳಿಯಲಿಲ್ಲ. ನವಪ್ರತಿಭೆ ಶುಭಮನ್ ಗಿಲ್ ಪದಾರ್ಪಣೆ ಮಾಡಿದರು.

ADVERTISEMENT

ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಶಿಖರ್ ಧವನ್ ಮತ್ತು 200ನೇ ಪಂದ್ಯ ಆಡಿದ ರೋಹಿತ್ ಶರ್ಮಾ ಐದು ಓವರ್‌ಗಳವರೆಗೆ ಆತ್ಮವಿಶ್ವಾಸದಿಂದ ರನ್ ಗಳಿಸಿದರು.

ಆದರೆ, ಆರನೇ ಓವರ್‌ನಲ್ಲಿ ಟ್ರೆಂಟ್ ಬೌಲ್ಟ್‌ ತಮ್ಮ ಬೇಟೆ ಆರಂಭಿಸಿದರು. ಶಿಖರ್ ಧವನ್ ಎಲ್‌ಬಿಡಬ್ಲ್ಯು (13 ರನ್)ಬಲೆಗೆ ಬಿದ್ದರು. ನಂತರ ರೋಹಿತ್, ಶುಭಮನ್ ಗಿಲ್, ಕೇದಾರ್ ಜಾಧವ್, ತುರು ಹೋರಾಟ ಮಾಡಿದ ಹಾರ್ದಿಕ್ ಪಾಂಡ್ಯ (16 ರನ್) ಅವರನ್ನು ಪೆವಿಲಿಯನ್‌ಗೆ ಮರಳುವಂತೆ ಮಾಡಿದರು. ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಹೆಡೆಮುರಿ ಕಟ್ಟಿದ ಅವರು ಸಂಭ್ರಮಿಸಿದರು. ಅವರಿಗೆ ಉತ್ತಮ ಜೊತೆ ನೀಡಿದ ಕಾಲಿನ್ ಡಿ ಗ್ರ್ಯಾಂಡ್‌ ಹೋಮ್ ತಮ್ಮ ಒಂದೇ ಓವರ್‌ನಲ್ಲಿ ಅಂಬಟಿ ರಾಯುಡು ಮತ್ತು ದಿನೇಶ್ ಕಾರ್ತಿಕ್ ಅವರ ವಿಕೆಟ್ ಕಬಳಿಸಿದರು. ಇದರೊಂದಿಗೆ ಭಾರತದ ಮಧ್ಯಮ ಕ್ರಮಾಂಕದ ಬೆನ್ನೆಲುಬನ್ನು ಮುರಿದರು.

ತಂಡದ ಮೊತ್ತವು 55 ರನ್‌ಗಳಾಗುಷ್ಟರಲ್ಲಿ ಎಂಟು ವಿಕೆಟ್‌ಗಳು ಪತನವಾದವು. ಬೌಲ್ಟ್‌ ಅವರ ಇನ್‌ಸ್ವಿಂಗ್, ಲೆಗ್‌ಕಟರ್‌ ಎಸೆತಗಳ ಚಲನೆಯನ್ನು ಅಂದಾಜು ಮಾಡುವಲ್ಲಿ ಬಹುತೇಕ ಬ್ಯಾಟ್ಸ್‌ಮನ್‌ಗಳು ಎಡವಿದರು. ಹೊಡೆತಗಳ ಆಯ್ಕೆಯಲ್ಲಿಯೂ ವಿಫಲರಾದರು. ಈ ಪಂದ್ಯದಲ್ಲಿ ನಾಯಕತ್ವ ವಹಿಸಿದ್ದ ರೋಹಿತ್ ಶರ್ಮಾ ಅವರು ತಮ್ಮ 200ನೇ ಏಕದಿನ ಪಂದ್ಯವನ್ನು ಗೆಲುವಿನೊಂದಿಗೆ ಅವಿಸ್ಮರಣಿಯವಾಗಿಸುವ ಕನಸು ಕೈಗೂಡಲಿಲ್ಲ.

ಇನಿಂಗ್ಸ್‌ನ ಕೊನೆಯ ಹಂತದಲ್ಲಿ ಕುಲದೀಪ್ ಯಾದವ್ (15; 33ಎಸೆತ, 1ಬೌಂಡರಿ) ಮತ್ತು ಯಜುವೇಂದ್ರ ಚಾಹಲ್ (ಔಟಾಗದೆ 18; 37ಎಸೆತ, 3ಬೌಂಡರಿ) ಒಂಬತ್ತನೇ ವಿಕೆಟ್‌ಗೆ 25 ರನ್‌ ಗಳಿಸಿದರು. ಇದೇ ದೊಡ್ಡ ಪಾಲುದಾರಿಕೆಯಾಗಿ ದಾಖಲಾಯಿತು. ಆದರೂ ನೂರರ ಗಡಿ ದಾಟಲು ಸಾಧ್ಯವಾಗಲಿಲ್ಲ.

ಮೈಕಲ್ ವಾನ್‌ಗೆ ತರಾಟೆ
ಭಾರತ ಕ್ರಿಕೆಟ್‌ ತಂಡವು ಹ್ಯಾಮಿಲ್ಟನ್‌ನಲ್ಲಿ 92 ರನ್‌ಗಳಿಗೆ ಆಲೌಟ್‌ ಆಗಿದ್ದನ್ನು ಟ್ವಿಟರ್‌ನಲ್ಲಿ ವ್ಯಂಗ್ಯ ಮಾಡಿದ ಇಂಗ್ಲೆಂಡ್‌ನ ಹಿರಿಯ ಕ್ರಿಕೆಟಿಗ ಮೈಕೆಲ್ ವಾನ್ ಅವರನ್ನು ಭಾರತೀಯ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

‘92 ರನ್‌ಗಳಿಗೆ ಆಲೌಟ್ !!, ಈ ಕಾಲದಲ್ಲಿಯೂ ಇಷ್ಟು ಕಡಿಮೆ ಮೊತ್ತಕ್ಕೆ ಆಲೌಟ್‌ ಆಗುವುದೆಂದರೆ ನಂಬಲು ಆಗುತ್ತಿಲ್ಲ’ ಎಂದು ವಾನ್ ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಮಹೇಶ್ ಎಂಬುವವರು, ‘77 ಆಲ್‌ಔಟ್’ ಎಂದು ಬರೆದಿದ್ದಾರೆ. ಈಚೆಗೆ ಇಂಗ್ಲೆಂಡ್‌ ತಂಡವು ಈಚೆಗೆ ವೆಸ್ಟ್ ಇಂಡೀಸ್ ಎದುರಿನ ಪಂದ್ಯದಲ್ಲಿ ಗಳಿಸಿದ್ದ ಮೊತ್ತವನ್ನು ನೆನಪಿಸಿದ್ದಾರೆ. ಸಾಗರ್ ಸಿಂಘಾಲ್ ಎಂಬುವವರು ‘92 ಮತ್ತು 77ರಲ್ಲಿ ಯಾವುದು ದೊಡ್ಡದು’ ಎಂಬರ್ಥದಲ್ಲಿ ಸಂದೇಶ ಹಾಕಿದ್ದಾರೆ. ಹಿತೇಶ್ ರಾವುತ್ ಅವರು, ‘77ಕ್ಕೆ ಆಲೌಟ್‌. ಈಗಿನ ಕಾಲದಲ್ಲಿ ಯಾರು ಬೇಕಾದರೂ ಆಗಬಹುದು. ಇದನ್ನು ನಂಬಬಹುದು’ ಎಂದು ತಿರುಗೇಟು ನೀಡಿದ್ದಾರೆ.

‘ವಿರಾಟ್ ಮತ್ತು ಧೋನಿ ಇಲ್ಲದ ತಂಡದ ಬ್ಯಾಟಿಂಗ್ ಬಲ ಕಳೆದುಕೊಂಡಿದೆ. ಆದರೆ ಎಲ್ಲ ಪ್ರಮುಖ ಆಟಗಾರರು ಇದ್ದ ಇಂಗ್ಲೆಂಡ್ ತಂಡವು 77ಕ್ಕೆ ಔಟಾಗಿದ್ದು ಹೇಗೆ? ಅಷ್ಟಕ್ಕೂ ನ್ಯೂಜಿಲೆಂಡ್‌ನಲ್ಲಿ ಭಾರತ ಸರಣಿ ಗೆದ್ದಾಗಿದೆ ಅಲ್ಲವೇ’ ಎಂದು ಹಲವರು ಪ್ರಶ್ನಿಸಿದ್ದಾರೆ.

ಭಾರತ ತಂಡಕ್ಕೆ ಐಸಿಸಿ ಮೆಚ್ಚುಗೆ
ನವದೆಹಲಿ (ಪಿಟಿಐ):
ಭಾರತ ಕ್ರಿಕೆಟ್ ತಂಡವು ಉತ್ತಮ ನಡವಳಿಕೆ ಯುಳ್ಳದ್ದಾಗಿದೆ. ನಾಯಕ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ಆಟದ ರಾಯಭಾರಿ ಯಾಗಿದ್ದಾರೆ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡೇವಿಡ್ ರಿಚರ್ಡ್ಸನ್ ಹೇಳಿದ್ದಾರೆ.

ಇದೇ ವರ್ಷ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈಚೆಗೆ ಹಾರ್ದಿಕ್ ಪಾಂಡ್ಯ ಅವರು ಟಿವಿ ಕಾರ್ಯಕ್ರಮದಲ್ಲಿ ನೀಡಿದ್ದ ವಿವಾದಾತ್ಮಕ ಹೇಳಿಕೆಯ ಕುರಿತು ರಿಚರ್ಡ್ಸನ್ ಅವರು ಪ್ರತಿಕ್ರಿಯಿಸಿದರು.

‘ಪಾಂಡ್ಯ ಪ್ರಕರಣವು ಆ ತಂಡದವರಿಗೆ ಬಿಟ್ಟಿದ್ದು. ಆದರೆ, ಸಾಮಾನ್ಯವಾಗಿ ಭಾರತ ತಂಡವು ಉತ್ತಮ ನಡತೆಯುಳ್ಳದ್ದು. ಪಂದ್ಯಗಳಲ್ಲಿ ಆಡುವಾಗ ಶಿಸ್ತು ಪಾಲಿಸುತ್ತಾರೆ. ಅಂಪೈರ್‌ ನೀಡುವ ತೀರ್ಪುಗಳನ್ನು ಗೌರವಿಸುತ್ತಾರೆ. ಕ್ರೀಡಾ ಮನೋಭಾವನೆಯಿಂದ ಆಡುತ್ತಾರೆ’ ಎಂದು ಶ್ಲಾಘಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.